ದಸರಾ ಗಜಪಡೆಗೆ ವಿಶ್ರಾಂತಿ
ಬಿ. ಶೇಖರ್ ಗೋಪಿನಾಥಂ
ಕ.ಪ್ರ.ವಾರ್ತೆ ಮೈಸೂರು ಅ. 15
ವಿಜಯದಶಮಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ದಸರಾ ಗಜಪಡೆಯು ಮೈಸೂರು ಅಂಬಾವಿಲಾಸ ಅರಮನೆ ಆವರಣದ ಆನೆ ಬಿಡಾರದಲ್ಲಿ ವಿಶ್ರಾಂತಿ ಪಡೆಯುತ್ತಿವೆ.
ತಾಯಿ ಚಾಮುಂಡೇಶ್ವರಿ 750 ಕೆ.ಜಿ. ತೂಕವುಳ್ಳ ಚಿನ್ನದ ಅಂಬಾರಿ ಹೊತ್ತ ಅರ್ಜುನ, ಅಂಬಾರಿ ಅಕ್ಕಪಕ್ಕ ಸಾಗಿದ ಕುಮ್ಕಿ ಆನೆಗಳಾದ ಸರಳ, ವರಲಕ್ಷ್ಮಿ, ನಿಶಾನೆ ಆನೆ ಬಲರಾಮ, ತೌಫತ್ ಆನೆ ಗಜೇಂದ್ರ, ಆನೆ ಗಾಡಿ ಎಳೆದ ಅಭಿಮನ್ಯು, ಸಾಲಾನೆಗಳಾಗಿ ಸಾಗಿದ ಶ್ರೀರಾಮ, ವಿಜಯ, ವಿಕ್ರಮ, ಹರ್ಷ, ಗೋಪಿ, ಪ್ರಶಾಂತ ವಿಶ್ರಾಂತಿ ಪಡೆಯುತ್ತಿದ್ದವು. ಜಂಬೂಸವಾರಿಯಲ್ಲಿ ಭಾಗವಹಿಸದ ಗೋಪಾಲಸ್ವಾಮಿ ಮತ್ತು ದುರ್ಗಾಪರಮೇಶ್ವರಿ ಆನೆಗಳು ಸಹ ಆನೆ ಬಿಡಾರದಲ್ಲಿತ್ತು.
ದಸರೆ ಮುಗಿದ ಮೇಲೆ ಮಂಗಳವಾರ ಸಹ ಅಂಬಾರಿ ಆನೆ ಅರ್ಜುನ ಮತ್ತು ಇತರೆ ಆನೆಗಳನ್ನು ನೋಡಲು ಪ್ರವಾಸಿಗರು ಮತ್ತು ಸಾರ್ವಜನಿಕರು ಮೂಗಿಬಿದ್ದರು. ಅರಮನೆ ಮಂಡಳಿ ವ್ಯವಸ್ಥೆ ಮಾಡಿರುವ ಬ್ಯಾಟರಿ ಚಾಲಿತ ವಾಹನದಲ್ಲಿ ಹಲವರು ಆನೆ ಬಿಡಾರಕ್ಕೆ ಬಂದು ಆನೆಗಳನ್ನು ವೀಕ್ಷಿಸುತ್ತಿದ್ದರು.
ಅರ್ಜುನ ಅಂಬಾರಿ: ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ಅಂಬಾರಿ ವಾಲಿತ್ತು, ಈ ವೇಳೆ ಅರ್ಜುನನೇ ತನ್ನ ಮೈಮೇಲಿದ್ದ ಅಂಬಾರಿಯನ್ನು 2- 3 ಬಾರಿ ಸರಿ ಮಾಡಿಕೊಂಡು ಸಾಗಿದ. ನಮ್ಮ ಬೆನ್ನ ಮೇಲಿನ ಭಾರವನ್ನು ನಾವೇ ಸರಿ ಮಾಡಿಕೊಂಡು ಹೋಗುತ್ತೇವೆಯಲ್ಲ ಅದೇ ರೀತಿ ಅರ್ಜುನ ಆನೆ ಸಹ ತನ್ನ ಮೈಮೇಲಿದ್ದ ಅಂಬಾರಿಯನ್ನು ಸರಿಪಡಿಸಿಕೊಳ್ಳುತ್ತಿದ್ದ ಎಂದು ಅರ್ಜುನ ಮಾವುತ ದೊಡ್ಡ ಮಾಸ್ತಿ ಹೇಳಿದರು.
ಪ್ರತಿ ವರ್ಷ ಅಂಬಾರಿಗೆ ಹಗ್ಗ ಹಾಕಿರುತ್ತೇವೆ. ಈ ಬಾರಿ ವಾಲಿಕೊಂಡಾಗ ಹಗ್ಗದಿಂದ ನಮ್ಮ ಕಾವಾಡಿಗಳು ಮತ್ತು ಅರಣ್ಯ ಇಲಾಖೆಯವರು ಅಂಬಾರಿಯನ್ನು ಸರಿಪಡಿಸುತ್ತಿದ್ದರು. ಇದಕ್ಕೆ ಯಾವುದೇ ರೀತಿಯ ಪ್ರತಿರೋಧ ವ್ಯಕ್ತಪಡಿಸದೇ ಅರ್ಜುನ ಮೆರವಣಿಗೆಯಲ್ಲಿ ಸಾಗಿದ. ತಾಯಿ ಚಾಮುಂಡೇಶ್ವರಿ ಧೈರ್ಯದಿಂದ ಅರ್ಜುನನ್ನು ಸಮರ್ಥವಾಗಿ ಮುನ್ನಡೆಸಿರುವುದಾಗಿ ಅವರು ಸಂತೋಷಪಟ್ಟರು.
ಅರ್ಜುನನ್ನು ಸಣ್ಣಪ್ಪ, ಕೂಸ ಎಂಬ ಮಾವುತರು ನೋಡಿಕೊಂಡಿದ್ದರು. ಅವರ ನಂತರ ನಾನು 15 ವರ್ಷಗಳಿಂದ ನೋಡಿಕೊಳ್ಳುತ್ತಿದ್ದೇನೆ. ಈಗ ಅರ್ಜುನನು ತುಂಟ ಅಲ್ಲ. ಕೊಟ್ಟ ಕೆಲಸವನ್ನು ಜವಾಬ್ದಾರಿಯಿಂದ ಮಾಡುತ್ತಾನೆ ಎಂಬುದಕ್ಕೆ ಎರಡು ಬಾರಿ ಅಂಬಾರಿ ಹೊತ್ತಿರುವುದೇ ಸಾಕ್ಷಿ. ಇನ್ನೂ 2 ವರ್ಷಗಳಲ್ಲಿ ನಾನು ಸೇವೆಯಿಂದ ನಿವೃತ್ತಿ ಆಗುತ್ತಿದ್ದೇನೆ. ನಗರಕ್ಕೆ ಬಂದು ಒಂದೂವರೆ ತಿಂಗಳಿದ್ದು ಈಗ ಕಾಡಿಗೆ ಹೋಗಬೇಕೆಂದರೆ ಬೇಸರ ಆಗುತ್ತಿದೆ ಎನ್ನುತ್ತಾರೆ ಮಾವುತ ದೊಡ್ಡ ಮಾಸ್ತಿ.
ಅರಣ್ಯ ಇಲಾಖೆಯ ತಾತ್ಕಾಲಿಕ ಕೆಲಸಕ್ಕೆ ಸೇರಿಕೊಂಡು ಎರಡು ವರ್ಷ ಆಗಿದೆ. ನಮ್ಮಪ್ಪ ದೊಡ್ಡ ಮಾಸ್ತಿ ಅರ್ಜುನ ಮಾವುತ, ಅದೇ ಆನೆಗೆ ನಾನು ಕಾವಾಡಿ ಆಗಿದ್ದೇನೆ. ನಾನು ಸಹ ಅರ್ಜುನ ಆನೆಗೆ ಮಾವುತ ಆಗಬೇಕೆಂಬ ಆಸೆ ಇದೆ. ಅರ್ಜುನನ್ನು ನಿಯಂತ್ರಿಸುವ ಸಾಮರ್ಥ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದವರು ಅರ್ಜುನ ಕಾವಾಡಿ ಸಣ್ಣಪ್ಪ.
ನಾಳೆ ಕಾಡಿನತ್ತ ಗಜ ಪಯಣ: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿರುವ 14 ಆನೆಗಳನ್ನು ಅ.17ರ ಬೆಳಗ್ಗೆ ಮತ್ತೆ ಕಾಡಿಗೆ ಕಳುಹಿಸಲಾಗುತ್ತಿದೆ.
ಬಳ್ಳೆ ಆನೆ ಶಿಬಿರಕ್ಕೆ ಅರ್ಜುನ, ಸರಳ, ವರಲಕ್ಷ್ಮಿ, ತಿತಿಮತಿ ಆನೆ ಶಿಬಿರಕ್ಕೆ ಬಲರಾಮ, ಅಭಿಮನ್ಯು, ಗೋಪಾಲಸ್ವಾಮಿ, ದುಬಾರೆ ಆನೆ ಶಿಬಿರಕ್ಕೆ ವಿಜಯ, ವಿಕ್ರಮ, ಹರ್ಷ, ಗೋಪಿ, ಪ್ರಶಾಂತ ಹಾಗೂ ಚಾಮರಾಜನಗರ ಜಿಲ್ಲೆ ಕೆ. ಗುಡಿ ಆನೆ ಶಿಬಿರಕ್ಕೆ ಗಜೇಂದ್ರ, ಶ್ರೀರಾಮ ಮತ್ತು ದುರ್ಗಾಪರಮೇಶ್ವರಿ ಆನೆಗಳು ತೆರಳಲಿವೆ ಎಂದು ಆನೆ ವೈದ್ಯ ಡಾ. ನಾಗರಾಜ್ ತಿಳಿಸಿದರು.
ಈ ಬಾರಿಯೂ ಬಲರಾಮನ ತೂಕ ಹೆಚ್ಚಳ: ಒಂದೂವರೆ ತಿಂಗಳ ಹಿಂದೆ ಮೊದಲ ತಂಡದಲ್ಲಿ ಮೈಸೂರಿಗೆ ಆಗಮಿಸಿದ 6 ಆನೆಗಳ ಬಲ ಪರೀಕ್ಷೆ ಮಾಡಲಾಗಿತ್ತು. ಆಯುಧ ಪೂಜೆ ದಿನ ಮತ್ತೆ ಗಜಗಳ ಬಲ ಪರೀಕ್ಷೆ ಮಾಡಲಾಗಿದೆ.
ಈ ಬಲ ಪರೀಕ್ಷೆಯಲ್ಲಿ ಅಂಬಾರಿ ಆನೆ ಅರ್ಜುನ 280 ಕೆ.ಜಿ., ಬಲರಾಮ 665 ಕೆ.ಜಿ, ಅಭಿಮನ್ಯು 380 ಕೆ.ಜಿ, ಗಜೇಂದ್ರ 320 ಕೆ.ಜಿ., ಸರಳ 55 ಕೆ.ಜಿ. ಮತ್ತು ವರಲಕ್ಷ್ಮಿ 240 ಕೆ.ಜಿ. ತೂಕ ಹೆಚ್ಚಳ ಆಗಿದೆ. ಪ್ರತಿದಿನ ಪೌಷ್ಟಿಕ ಆಹಾರ ಸೇವಿಸಿದ್ದರಿಂದ ಈ ಆನೆಗಳ ತೂಕ ಹೆಚ್ಚಳ ಆಗಿದೆ.
ಈ ಬಾರಿಯೂ ಸಹ ಬಲರಾಮ 665 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದಾನೆ. ಕಳೆದ ದಸರೆಯಲ್ಲೂ ಸಹ ಬಲರಾಮ 520 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದ. ಅಂಬಾರಿ ಆನೆ ಅರ್ಜುನ ಕಳೆದ ಸಾಲಿನಲ್ಲಿ 250 ಕೆ.ಜಿ. ಹಾಗೂ ಈ ಬಾರಿ 280 ಕೆ.ಜಿ. ತೂಕ ಮಾತ್ರ ಹೆಚ್ಚಳವಾಗಿದೆ ಎಂದು ಆನೆ ವೈದ್ಯ ಡಾ. ನಾಗರಾಜ್ ತಿಳಿಸಿದರು.
ಆನೆಗಳ ಬಲ ಹೀಗಿದೆ...(ಕೆ.ಜಿ.ಗಳಲ್ಲಿ)
ಆನೆ ಬಂದಾಗ ಈಗಿನ ತೂಕ ಹೆಚ್ಚಿಸಿಕೊಂಡ ತೂಕ
ಅರ್ಜುನ 5535 5810 280
ಬಲರಾಮ 4630 5295 665
ಗಜೇಂದ್ರ 4755 5075 320
ಅಭಿಮನ್ಯು 4870 5250 380
ಸರಳ 3290 3345 55
ವರಲಕ್ಷ್ಮಿ 2965 3205 240