ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿದ್ಯಾವಂತರಿಗೆ ಅಂಬೇಡ್ಕರ್ ಅರ್ಥವಾಗಿಲ್ಲ: ಮಹಾದೇವಪ್ಪ

Srinivasa Murthy VN
Updated On : 16 Oct 2013, 12:16 pm

ಕ.ಪ್ರ.ವಾರ್ತೆ ಮೈಸೂರು ಅ. 15
ಡಾ.ಬಿ.ಆರ್. ಅಂಬೇಡ್ಕರ್ ಅವರು ಭೂಮಿಗೆ ಬಿದ್ದ ಬೀಜದಂತೆ, ಎದೆಗೆ ಬಿದ್ದ ಅಕ್ಷರದಂತೆ ನಮ್ಮೊಡಲಿಗೆ ಬಿದ್ದಿಲ್ಲ ಎಂದು ವಿಚಾರವಾದಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಆರ್. ಮಹಾದೇವಪ್ಪ ಅಭಿಪ್ರಾಯಪಟ್ಟರು.
ಕರ್ನಾಟಕ ಬುದ್ಧ ಧಮ್ಮ ಸಮಿತಿಯ ರಾಜ್ಯ ಸಮಿತಿಯು ವಿಜಯನಗರದ ಬುದ್ಧ ವಿಹಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೋಧಿಸತ್ವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 58ನೇ ಬೌದ್ಧ ಧಮ್ಮ ದೀಕ್ಷಾ ದಿನಾಚರಣೆಯ ಸಮಾರಂಭದಲ್ಲಿ ಅವರು ಮಾತನಾಡಿದರು.
ವೈದಿಕತೆಯ ಹುನ್ನಾರಗಳನ್ನು ನಾವಿನ್ನು ಸರಿಯಾಗಿ ಅರಿಯಲಾಗದೆ ಭಯದಲ್ಲೆ ಹಾಗೂ ದ್ವಂದ್ವದಲ್ಲೇ ಬದುಕುತ್ತಿರುವುದರಿಂದ, ಭಾರತೀಯರಿಗೆ ವಿದ್ಯಾವಂತರಿಗೆ ಡಾ. ಅಂಬೇಡ್ಕರ್ ಅವರು ಸರಿಯಾಗಿ ಅರ್ಥವಾಗಿಲ್ಲ.
ಅಲ್ಲದೆ ದಲಿತರಲ್ಲಿನ ಒಂದು ಪಂಗಡವಾಗಲೀ ಅಥವಾ ಹಲವಾರು ಉಪ ಪಂಗಡಗಳೂ ಬಾಬಾ ಸಾಹೇಬರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇರುವುದು ಅವಮಾನಕರ ಎಂದು ಹೇಳಿದರು.
ಭಾರತೀಯತೆ ಎಂದರೆ ವೈದಿಕತೆ ಅಲ್ಲ. ನಿಜವಾದ ಭಾರತೀಯತೆಯನ್ನು ಕಾಪಾಡಿಕೊಂಡು ಬಂದಿರುವುದು ಬುದ್ಧಮಾರ್ಗ ಮಾತ್ರ. ಸಾಮ್ರಾಟ್ ಅಶೋಕನೂ ವಿವೇಕಾನಂದರೂ ತಮ್ಮ ಬದುಕಿನುದ್ದಕ್ಕೂ ಬುದ್ಧ ಮಾರ್ಗದಲ್ಲೇ ಭಾರತೀಯತೆಯನ್ನು ಎತ್ತಿ ಹಿಡಿದರು. ಆದರೆ ವೈದಿಕರು ಅದಕ್ಕೆ ಅನರ್ಥ ಬರುವಂತೆ ವಿವೇಕಾನಂದರನ್ನು ಚಿತ್ರಿಸಿರುವುದು ದುರಂತ. ಬಾಬಾ ಸಾಹೇಬ್ ಅಂಬೇಡ್ಕರ್ ಸಹ ಬೌದ್ಧ ಧಮ್ಮ ದೀಕ್ಷೆಯ ಮೂಲಕವೇ ನಿಜ ಭಾರತೀಯತೆ ಮತ್ತು ನಿಜ ಅಧ್ಯಾತ್ಮವನ್ನು ಎತ್ತಿಹಿಡಿದರು.
 ಆದರೆ ವೈದಿಕರು ಭಾರತೀಯತೆಗೆ ಆಧ್ಯಾತ್ಮಿಕತೆಗೆ ಅಪಚಾರವಾಗುವಂತೆ ಆದಿಜನರ ಆಚರಣೆಗಳನ್ನು, ಭಾವನೆಗಳನ್ನು ಉದ್ಯಮ ಮಾಡಿಕೊಂಡು ಹಿಂದುತ್ವದ ಅಮಲಿನಲ್ಲಿ ವ್ಯವಹರಿಸಿ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ತಿಳಿಸಿದರು.
ಕೊಳ್ಳೇಗಾಲ ಜೇತವನದ ಮನೋರಕ್ಖಿತ ಭಂತೇಜಿ ಮಾತನಾಡಿ, ಧಮ್ಮಚಕ್ರವೆಂದರೆ ಸತ್ಯದ ಚಕ್ರವಾಗಿದ್ದು, ಇದರ ನಿರಂತರ ಚಲನೆಯು ಸರಿಯಾದ ಅಧ್ಯಯನ, ಆಧರಣೆ ಮತ್ತು ದರ್ಶನದಿಂದ ಸಾಧ್ಯ ಎಂದು ಸಾರಿದರು.
ಥಾಯ್ಲೆಂಡ್‌ನ ನರೇನ್ ಸುಧಮ್ಮ ಭಂತೇಜಿ ಮಾತನಾಡಿ, ದಮನಿತರೆಲ್ಲ ಅಸತ್ಯದ ಜೀವನ ಮಾರ್ಗದಿಂದ ಸತ್ಯದ ಜೀವನ ಮಾರ್ಗದ ಕಡೆಗೆ ಧಮ್ಮಾಂತರ ಹೊಂದಬೇಕಿದೆ ಎಂದು ತಿಳಿಸಿದರು.
ಥಾಯ್ಲೆಂಡ್ ಬೌದ್ಧ ಬಿಕ್ಕು ಪಾವಿಸಿಟ್ ಭಂತೇಜಿ, ಅಸ್ಸಾಂನ ಬುದ್ಧವಂಶ ಭಂತೇಜಿಯವರು ಧಮ್ಮವಂದನೆ, ಪಂಚಶೀಲ ಬೋಧನೆ, ಧ್ಯಾನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಡಿ. ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಡಿ. ನಂಜುಂಡಯ್ಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ಪುರುಷೋತ್ತಮ್, ಕರ್ನಾಟಕ ಬುದ್ಧ ಧಮ್ಮ ಸಮಿತಿಯ ಸದಸ್ಯರು, ಉಪಾಸಕರು, ಮೈಸೂರು ವಿವಿ ವಿದ್ಯಾರ್ಥಿಗಳು, ಸಂಶೋಧಕರು ಅಧ್ಯಾಪಕರು ಇದ್ದರು.
ಸಮಿತಿಯ ಕಾರ್ಯದರ್ಶಿ ಎಚ್. ಶಿವರಾಜು ಸ್ವಾಗತಿಸಿದರು. ಸಮಿತಿಯ ಖಜಾಂಚಿ ರಾಜು ಹಂಪಾಪುರ  ವಂದಿಸಿದರು. ಸಂಶೋಧಕ ಕುಪ್ನಳ್ಳಿ ಎಂ. ಭೈರಪ್ಪ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement