ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗೊಮ್ಮಟಗಿರಿಯಲ್ಲಿ ಮಸ್ತಕಾಭಿಷೇಕ

Srinivasa Murthy VN
Updated On : 17 Oct 2013, 12:42 pm

ಕ.ಪ್ರ.ವಾರ್ತೆ ಹುಣಸೂರು ಅ. 16
ನಗರ ಜೀವನದ ಒತ್ತಡದಿಂದ ದೂರವಾಗಿ ಪ್ರಶಾಂತ ವಾತಾವರಣದಲ್ಲಿ ಕಾಲ ಕಳೆಯಲು, ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳಲು ಗ್ರಾಮೀಣ ಜನಜೀವನವನ್ನು ಕಾಣಲು ಹಂಬಲಿಸುತ್ತಿದ್ದೀರಾ, ಹಾಗಿದ್ದರೆ ಬನ್ನಿ ಮೈಸೂರಿಗೆ ಸಮೀಪವಿರುವ ಹುಣಸೂರು ತಾಲೂಕಿನ ಗೊಮ್ಮಟಗಿರಿ ಕ್ಷೇತ್ರಕ್ಕೆ. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರನಂತೆ ಪುಟ್ಟದಾಗಿ ಮೈದಳೆದಿರುವ ಗೊಮ್ಮಟೇಶ್ವರನನ್ನು ಇಲ್ಲಿ ಕಾಣಬಹುದು.
ಮೈಸೂರಿನಿಂದ ಇಲವಾಲ ಮಾರ್ಗವಾಗಿ 12 ಕಿ.ಮೀ. ದೂರಲ್ಲಿರುವ ಈ ಪ್ರದೇಶ ಈಗ ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಇದಕ್ಕೆ ಇಲ್ಲಿರುವ ಪರಿಸರ ಕಾರಣ. ಮೈಸೂರು- ಹುಣಸೂರು ರಸ್ತೆಯಲ್ಲಿ ಇಲವಾಲ ಸಮೀಪ ಬಲಕ್ಕೆ ತಿರುಗಿ ಅಥವಾ ಮನುಗನಹಳ್ಳಿ ಗೇಟ್ ಬಳಿ ಬಲಕ್ಕೆ ತಿರುಗಿ ಗೊಮ್ಮಟಗಿರಿ ತಲುಪಬಹುದು. ಙ
ಈ ರಸ್ತೆಗಳಲ್ಲಿ ಗ್ರಾಮೀಣ ಪರಿಸರ ಸ್ವಾಗತಿಸುತ್ತದೆ. ರಸ್ತೆಯ ಇಕ್ಕೆಲಗಳಲ್ಲಿಯೂ ಹಸಿರಿನ ಗಿಡ-ಮರಗಳು ಆಲ್ಲಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿರುವ ರೈತಾಪಿ ಜನರು, ಹಸು-ಕರುಗಳನ್ನು ಮೇಯಿಸುವ ಹುಡುಗರನ್ನು ನೋಡುತ್ತಾ ಇಲವಾಲದಿಂದ ಸುಮಾರು 2.5 ಕಿ.ಮೀ ದೂರ ಹಾದಿ ಸವೆಸಿದರೆ ಗೊಮ್ಮಟಗಿರಿ ಕ್ಷೇತ್ರ ಸಿಗುತ್ತದೆ. ಅಲ್ಲಿ ಗುಡ್ಡದ ಮೇಲೆ 16 ಅಡಿ ಎತ್ತರದ ಭಗವಾನ್ ಗೊಮ್ಮಟೇಶ್ವರನ ಮೂರ್ತಿ ಇದೆ.
64ನೇ ವರ್ಷದ ಮಸ್ತಕಾಭಿಷೇಕ: ಗೊಮ್ಮಟಗಿರಿಯ ಗೋಮ್ಮಟೇಶ್ವರ ಸ್ವಾಮಿಗೆ ಈ ಬಾರಿ ನಡೆಯುವ ಮಸ್ತಕಾಭಿಷೇಕವನ್ನು ಅ.20ರಂದು 64ನೇ ವರ್ಷದ ಮಸ್ತಕಾಭಿಷೇಕ ಪೂಜಾ ಮಹೋತ್ಸವ ಹಮ್ಮಿಕೊಳ್ಳಲು ಶ್ರೀ ಗೋಮ್ಮಟಗಿರಿ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಡಾ. ಡಿ. ಪ್ರಭಾಮಂಡಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದೆ. ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ ಹಾಗೂ ಭಕ್ತರು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವರು. ಜೊತೆಗೆ ತಾಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ಹಬ್ಬದ ಸಡಗರ, ಪ್ರಸಿದ್ಧ ಜಾತ್ರೆಯಾಗಿದೆ ಎಂದು ಕಾರ್ಯದರ್ಶಿ ಡಾ. ಎಂ.ವಿ. ಶಾಂತಕುಮಾರ್ ತಿಳಿಸಿದ್ದಾರೆ. ಸರ್ಕಾರ ಗೊಮ್ಮಟಗಿರಿಯತ್ತ ಗಮನಿಸಿ ಶ್ರೀಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಪ್ರಾಧಿಕಾರ ಸ್ಥಾಪಿಸಿ, ಸೂಕ್ತ ಅನುದಾನ ನೀಡಿ, ಆ ಮೂಲಕ ಅಭಿವೃದ್ಧಿಪಡಿಸಿ ವಿಶ್ವವಿಖ್ಯಾತ ಪ್ರವಾಸಿ ತಾಣವನ್ನಾಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement