ಅಂಕಿ- ಅಂಶ ಸಂಗ್ರಹ ಶೇ.90ರಷ್ಟು ಪೂರ್ಣ
ಕ.ಪ್ರ.ವಾರ್ತೆ ಮೈಸೂರು ಅ. 17
ಜಿಲ್ಲೆಯಲ್ಲಿ ಮಾನವ ಅಭಿವೃದ್ಧಿ ವರದಿ ತಯಾರಿಕೆ ಕಾರ್ಯ ಪ್ರಗತಿಯಲ್ಲಿದ್ದು, ಅಂಕಿ- ಅಂಶ ಸಂಗ್ರಹಣೆ ಕಾರ್ಯ ಶೇ.90ರಷ್ಟು ಪೂರ್ಣಗೊಂಡಿದೆ ಎಂದು ಜಿಲ್ಲಾ ಮಾನವ ಅಭಿವೃದ್ಧಿ ಗುಣಮಟ್ಟದ ಮೇಲ್ವಿಚಾರಣಾ ತಂಡದ ಸದಸ್ಯರಾದ ಐಎಎಸ್ ಎಚ್.ಎಸ್. ಅಶೋಕನಂದ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಗುರುವಾರ ಸಿಇಒ ಪಿ.ಎ.ಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಾನವ ಅಭಿವೃದ್ಧಿ ವರದಿ ತಯಾರಿಕೆ ಕೋರ್ ಕಮಿಟಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗುಣಾತ್ಮಕ ವರದಿ ತಯಾರಿಕೆಗೆ ಹಲವಾರು ಮಾಹಿತಿ ಸಂಗ್ರಹಿಸಬೇಕು. ಮೈಸೂರಿನಲ್ಲಿ ಬೆಳವಾಡಿ, ಕೂರ್ಗಳ್ಳಿ, ಹಿನಕಲ್ ಪ್ರದೇಶಗಳಲ್ಲಿ ಹಲವಾರು ಭೂ ಮಾಲೀಕರು ತಮ್ಮ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಭೂಮಿ ಮಾರಾಟವಾದ ನಂತರ ಅವರ ಜೀವನದಲ್ಲಿ ಆಗಿರುವ ಬದಲಾವಣೆಗಳು, ಅವರು ಇಂದು ಅನುಸರಿಸುತ್ತಿರುವ ಉದ್ಯೋಗ ವ್ಯವಸ್ಥೆ, ಭೂಮಿಯನ್ನು ನಿವೇಶನ ರೂಪದಲ್ಲಿ ಖರೀದಿ ಮಾಡಿದವರಿಗೆ ಎಲ್ಲಾ ರೀತಿಯ ಮೂಲ ಸೌಕರ್ಯ ದೊರೆಯುತ್ತಿದೆಯೆ, ಅಲ್ಲಿ ಇರುವ ಸಮಸ್ಯೆಗಳೇನು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದರು.
ರಿಯಲ್ ಎಸ್ಟೇಟ್ ವ್ಯವಹಾರದಿಂದ ಹೊಸ ಹೊಸ ಬಡಾವಣೆ ಉದ್ಭವವಾಗುತ್ತಿವೆ. ಈ ಹೊಸ ಬಡಾವಣೆಯಿಂದಾಗಿ ಸೃಷ್ಟಿಯಾಗಿರುವ ಉದ್ಯೋಗಾವಕಾಶಗಳು, ಕೈಗಾರಿಕಾ ಪ್ರದೇಶಗಳು ಅಪಾರ್ಟ್ಮೆಂಟ್ಗಳಾಗಿ ಬದಲಾಗುತ್ತಿರುವ ಬಗ್ಗೆ ಇಲ್ಲಿಯ ಜನರ ಜೀವನದ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಅವರು ತಿಳಿಸಿದರು.
ಶಿಕ್ಷಣ ವಿಭಾಗಕ್ಕೆ ಸಂಬಂಧಿಸಿದಂತೆ ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿದ್ದಾರೆ. ಪ್ರವೇಶ ಪಡೆದ ನಂತರ ಆ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಉಂಟಾಗಿರುವ ಬದಲಾವಣೆ ಬಗ್ಗೆ ತಿಳಿದುಕೊಳ್ಳಬೇಕು. ಪ. ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ನಡೆಸುತ್ತಿರುವ ವಸತಿ ಶಾಲೆಗಳ ಹಾಗೂ ವಸತಿ ನಿಲಯಗಳಲ್ಲಿನ ಮಕ್ಕಳು 10ನೇ ತರಗತಿಯಲ್ಲಿ ಗಳಿಸಿದ ಅಂಕಗಳು ಅವರು ವಸತಿನಿಲಯಗಳಿಗೆ ಬಂದ ನಂತರ ಅವರಲ್ಲಿ ಆದ ಶೈಕ್ಷಣಿಕ ಬದಲಾವಣೆ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಮಾನವ ಅಭಿವೃದ್ಧಿ ಗುಣಮಟ್ಟದ ಮೇಲ್ವಿಚಾರಣಾ ತಂಡದ ಸದಸ್ಯರಾದ ಮೋಹನ್ಕುಮಾರ್, ಗಣೇಶ್ ಪ್ರಸಾದ್, ಜಿಪಂ ಮುಖ್ಯ ಯೋಜನಾಧಿಕಾರಿ ಎಚ್.ಜಿ. ವಸುಂಧರಾದೇವಿ, ಜಿಲ್ಲಾ ಮಾನವ ಅಭಿವೃದ್ಧಿ ವರದಿ ತಯಾರಿಕೆಯ ಲೀಡ್ ಏಜೆನ್ಸಿ ಮುಖ್ಯಸ್ಥೆ ಪ್ರೊ. ತುಳಸೀಮಾಲಾ, ಜಿಪಂ ಯೋಜನಾ ವಿಭಾಗದ ಉಪ ನಿರ್ದೇಶಕ ಮಹದೇವು ಇದ್ದರು.