ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಿಯುಸಿ ಉಪನ್ಯಾಸಕರು ವೇತನ, ರಜೆ ರಹಿತ ಬಿ.ಇಡಿ ಕಡ್ಡಾಯಕ್ಕೆ ಮರಿತಿಬ್ಬೇಗೌಡ ಆಕ್ಷೇಪ

Srinivasa Murthy VN
Updated On : 20 Oct 2013, 12:00 pm

ಮೈಸೂರು: ಪಿಯುಸಿ ಉಪನ್ಯಾಸಕರು ವೇತನ ಮತ್ತು ರಜೆ ರಹಿತವಾಗಿ ಬಿ.ಇಡಿ ಪದವಿ ಕಡ್ಡಾಯವಾಗಿ ಮಾಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಹೇಳಿಕೆ ಬಗ್ಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಕ್ಷೇಪ ವ್ಯಕ್ತಪಡಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಕಾಲೇಜುಗಳಲ್ಲಿ 2009 ಮತ್ತು 2013ನೇ ಸಾಲಿನಲ್ಲಿ ನೇಮಕವಾಗಿರುವ ಬಿ.ಇಡಿ ಪದವಿ ರಹಿತ ಉಪನ್ಯಾಸಕರು ಬಿ.ಇಡಿ ಪದವಿ ಮಾಡಿಕೊಳ್ಳಲು ವೇತನ ಮತ್ತು ರಜೆ ರಹಿತವಾಗಿ ನವೆಂಬರ್‌ನಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸುವುದಾಗಿ ಸಚಿವರು ಹೇಳಿರುವುದು ದುರದೃಷ್ಟಕರ. ಸಚಿವರು ತಮ್ಮ ಅಸಂಬದ್ಧ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
2009ರಲ್ಲಿ ನೇಮಕವಾದ 2570 ಉಪನ್ಯಾಸಕರ ಪೈಕಿ 1347 ಹಾಗೂ 2013ರಲ್ಲಿ ನೇಮಕವಾದ 1764 ಉಪನ್ಯಾಸಕರ ಪೈಕಿ 991 ಮಂದಿ ಬಿ.ಇಡಿ ಪದವಿ ಪಡೆದಿಲ್ಲ. 2009 ರಲ್ಲಿ ಅರ್ಜಿ ಆಹ್ವಾನಿಸುವಾಗ ಬಿ.ಇಡಿ ಕಡ್ಡಾಯ ಎಂದು ತಿಳಿಸಿಲ್ಲ. ನೇಮಕಾತಿ ಆದೇಶ ನೀಡುವಾಗ ಬಿ.ಇಡಿ ಕಡ್ಡಾಯವಾಗಿ ಮಾಡಿಕೊಳ್ಳಬೇಕು ಎಂದು ಷರತ್ತು ವಿಧಿಸಿದೆ ಎಂದರು.
ರಾಜ್ಯ ಮುಕ್ತ ವಿವಿ ಜೊತೆ ಚರ್ಚಿಸಿ ವಿಶೇಷ ನಿಯಮಾವಳಿ ರೂಪಿಸಿ ಉಪನ್ಯಾಸಕರು ಬಿ.ಇಡಿ ಪದವಿ ಪಡೆಯಲು ಅವಕಾಶ ಮಾಡಿಕೊಡಬೇಕು. ಅಥವಾ ಉಪನ್ಯಾಸಕರಿಗೆ ರಜೆ ಅವಧಿಯಲ್ಲಿ ಬಿ.ಇಡಿ ಪದವಿಗೆ ಸಮಾನವಾಗಿ ಜಿಲ್ಲಾ ಡಯಟ್‌ಗಳ ಮೂಲಕ ಬ್ರಿಡ್ಜ್ ಕೋರ್ಸ್ ಮೂಲಕ ತರಬೇತಿ ನೀಡುವುದರಿಂದಲೂ ಈ ಸಮಸ್ಯೆ ಬಗೆಹರಿಸಬಹುದು ಎಂದು ಅವರು ಹೇಳಿದರು.
ಬಿ.ಇಡಿ ಪದವಿ ನೆಪವಾಗಿಸಿಕೊಂಡು 2009ರಲ್ಲಿ ನೇಮಕವಾದ ಉಪನ್ಯಾಸಕರಿಗೆ ಕಾಯಂ ಪೂರ್ವ ಅವಧಿ ಘೋಷಣೆ ಮಾಡದೇ ಇರುವುದರಿಂದ ಅವರಿಗೆ ವಾರ್ಷಿಕ ವೇತನ ಭತ್ಯೆ ನೀಡುತ್ತಿಲ್ಲ. ಇದು ಅವೈಜ್ಞಾನಿಕವಾಗಿದ್ದು, ಕೂಡಲೇ ಕಾಯಂ ಪೂರ್ಣ ಅವಧಿ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement