ಪ್ರಿಪೇಯ್ಡ್ ಆಟೋ ನಿಲ್ದಾಣ ಅವ್ಯವಸ್ಥೆ ಸರಿಪಡಿಸಲು ಮನವಿ
ಮೈಸೂರು: ಗ್ರಾಮಾಂತರ ಬಸ್ ನಿಲ್ದಾಣ ಬಳಿ ಪ್ರಿಪೇಯ್ಡ್ ಆಟೋ ನಿಲ್ದಾಣ ಅವ್ಯವಸ್ಥೆ ಸರಿಪಡಿಸಿ, ಫುಟ್‌ಪಾತ್ ತೆರವುಗೊಳಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಿ, ವೃತ್ತಗಳಲ್ಲಿ ಸೂಚನಾ ಫಲಕ ಅಳವಡಿಸಿ...
- ಇದು ನಗರ ಸಂಚಾರ ಪೊಲೀಸ್ ಠಾಣೆಗಳಲ್ಲಿ ಶನಿವಾರ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ನಾಗರಿಕರು ಪೊಲೀಸರಿಗೆ ಹೇಳಿದ ಕಿವಿಮಾತುಗಳು.
ದೇವರಾಜ ಸಂಚಾರ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಸಭೆಯಲ್ಲಿ, ಗ್ರಾಮಾಂತರ ಬಸ್ ನಿಲ್ದಾಣ ಬಳಿ ಇರುವ ಪ್ರಿಪೇಯ್ಡ್ ಆಟೋ ನಿಲ್ದಾಣವು ಅವ್ಯವಸ್ಥೆಯಿಂದ ಕೂಡಿದೆ. ಇದನ್ನು ಸರಿಪಡಿಸಲು ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸುವಂತೆ ಆಟೋ ಚಾಲಕರು ಮನವಿ ಮಾಡಿದರು.
ಈ ಸಂಬಂಧ ನಗರ ಪಾಲಿಕೆ ಅಧಿಕಾರಿಗಳಿಗೆ ಪತ್ರ ಬರೆದು, ಅವ್ಯವಸ್ಥೆ ಸರಿಪಡಿಸಲು ತಿಳಿಸುವುದಾಗಿ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಹೇಳಿದರು. ಫುಟ್‌ಪಾತ್‌ಗಳಲ್ಲಿ ಅಂಗಡಿ ಇರುವುದರಿಂದ ಪಾದಚಾರಿಗಳಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ನಾಗರಿಕರು ಕೋರಿದರು.
ನಗರ ಸಂಚಾರ ಉಪ ವಿಭಾಗದ ಪ್ರಭಾರ ಎಸಿಪಿ ಪ್ರಭಾಕರ ಬಾರ್ಕಿ, ದೇವರಾದ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಆರ್.ಪಿ. ಅಶೋಕ್, ಎಸ್‌ಐಗಳಾದ ಸುರೇಶ್‌ಕುಮಾರ್, ಬಿ.ಜಿ. ಪ್ರಕಾಶ್, ಭಾಸ್ಕರ್ ಇದ್ದರು.
ನಂಜು ಮಳಿಗೆ ಬಳಿ ಫುಟ್‌ಪಾತ್ ಮಾಯ: ಕೆ.ಆರ್. ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ, ನಂಜು ಮಳಿಗೆ ವೃತ್ತದಿಂದ ಮಾನಂದವಾಡಿ ರಸ್ತೆಯ ಎರಡು ಬದಿಯಲ್ಲಿ ಫುಟ್‌ಪಾತ್ ಮಾಯವಾಗಿದೆ. ರಸ್ತೆಬದಿ ವ್ಯಾಪಾರಿಗಳು ಫುಟ್‌ಪಾತ್ ಆಕ್ರಮಿಸಿಕೊಂಡಿದ್ದು, ಇದರಿಂದ ಸಾರ್ವಜನಿಕರು ಅನುಭವಿಸುತ್ತಿರುವ ಕಿರಿಕಿರಿ ತಪ್ಪಿಸಬೇಕು. ವೇದಾಂತ ಹೆಮ್ಮಿಗೆ ವೃತ್ತದಲ್ಲಿ ರಸ್ತೆ ವಿಭಜಕ ಹಾಕಿದರೆ ಸಂಚಾರ ನಿಯಮ ಉಲ್ಲಂಘನೆ ತಪ್ಪಿಸಬಹುದು ಎಂದು ಶ್ರೀನಿವಾಸ್ ಸಲಹೆ ನೀಡಿದರು.
ಅಶೋಕ(ಬಲ್ಲಾಳ್) ವೃತ್ತದ ಬಳಿ ನಿಂತು ಹೊರಡಿ ಎಂಬ ನಾಮಫಲಕ ಅಳವಡಿಸುವಂತೆ ನಗರ ಪಾಲಿಕೆ ಮಾಜಿ ಸದಸ್ಯ ಆರಾಧ್ಯ ಸಲಹೆ ನೀಡಿದರು.
ಗೋಪಾಲಸ್ವಾಮಿ ಶಿಶುವಿಹಾರ ರಸ್ತೆಯಲ್ಲಿ ಹಳೆ ವಾಹನಗಳನ್ನು ಫುಟ್‌ಪಾತ್‌ನಲ್ಲಿ ಕಾಯಂ ಆಗಿ ನಿಲ್ಲಿಸಲಾಗಿದೆ. ಈ ವಾಹನಗಳನ್ನು ತೆರವುಗೊಳಿಸುವಂತೆ ಎಂದು ಸ್ಥಳೀಯರು ಆಗ್ರಹಿಸಿದರು.
ಸರ್ಕಾರಿ ವಾಹನಗಳು ಸಾಕಷ್ಟು ಹೊಗೆ ಹೊರಸೂಸುತ್ತಿರುವುದರಿಂದ ಪರಿಸರ ಹಾಳಾಗುತ್ತಿದೆ. ಹೀಗಾಗಿ ಹೆಚ್ಚಿನ ಹೊಗೆ ಉಗುಳುವ ವಾಹನಗಳ ಸಂಚಾರ ನಿಷೇಧಿಸಬೇಕು. ಸಂಚಾರ ಪೊಲೀಸರು ಹೆಲ್ಮೆಟ್ ಹಾಕದೆ ಕ್ಯಾಪ್ ಮಾತ್ರ ಧರಿಸಿರುತ್ತಾರೆ.
ಸಾರ್ವಜನಿಕರೊಂದು, ಪೊಲೀಸರಿಗೆ ಒಂದು ನಿಯಮ ಸರಿಯಲ್ಲ. ಪೊಲೀಸರು ಸಹ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸೂಚಿಸಬೇಕು ಎಂದು ಕೊ.ಸು. ನರಸಿಂಹಮೂರ್ತಿ ಒತ್ತಾಯಿಸಿದರು. ಕೆ.ಆರ್. ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಎನ್.ಸಿ. ನಾಗೇಗೌಡ, ಎಸ್‌ಐಗಳಾದ ಸತೀಶ್, ಜಯಪ್ರಕಾಶ್ ಇದ್ದರು.
ಗಲ್ಲಿಯಲ್ಲಿ ಆಟೋ ನಿಲ್ದಾಣ: ಎನ್.ಆರ್. ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ, ಮಂಡಿ ಮೊಹಲ್ಲಾ, ಎನ್.ಆರ್. ಮೊಹಲ್ಲಾ ಸುತ್ತಮುತ್ತ ಪ್ರದೇಶಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಆಟೋ ನಿಲ್ಲಿಸಲಾಗುತ್ತಿದೆ. ಇದರಿಂದ ನಿವಾಸಿಗಳಿಗೆ ತೊಂದರೆ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಕೋರಿದರು.
ಡಿಸಿಪಿ ಎಂ.ಎಂ. ಮಹದೇವಯ್ಯ, ಎನ್.ಆರ್. ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಮೊಹಮ್ಮದ್ ಇರ್ಷಾದ್, ಎಸ್‌ಐ ಕುಮಾರ್ ಇದ್ದರು. ವಿವಿ ಪುರಂ ಸಂಚಾರ ಠಾಣೆಯಲ್ಲಿ ನಡೆದ ಸಭೆಯಲ್ಲಿ ಎಸ್‌ಐ ಡಿ. ಯೋಗೇಶ್ ಅವರು ಸಾರ್ವಜನಿಕರ ಸಾರ್ವಜನಿಕರ ಸಲಹೆ ಸೂಚನೆಗಳನ್ನು ಕೇಳಿದರು.