ವೆಲ್ಲಿಂಗ್ಟನ್ ಹೌಸ್‌ನಲ್ಲಿ ತಂಜಾವೂರ್ ಕಲೆ
-ಜೆ. ಮಹದೇವ
ಕ.ಪ್ರ.ವಾರ್ತೆ ಮೈಸೂರು ಅ. 19
ಮೈಸೂರು ಅರಸರು ಕಾಲಾನುಕಾಲದಿಂದಲೂ ಪೋಷಿಸಿಕೊಂಡು ಬಂದ ಕಲಾ ಪ್ರಕಾರಗಳಲ್ಲಿ ಒಂದಾದ ತಂಜಾವೂರ್ ಶೈಲಿಯ ಕಲಾ ಪ್ರಕಾರವನ್ನು ಮೈಸೂರಿಗರಿಗೆ ತಿಳಿಸಿಕೊಡುವ ಸಲುವಾಗಿ ನಗರದ ಇರ್ವಿನ್ ರಸ್ತೆಯಲ್ಲಿರುವ ವೆಲ್ಲಿಂಗ್ಟನ್ ಹೌಸ್‌ನಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯವು ವಸ್ತು ಸಂಗ್ರಹಾಲಯ ಶೈಕ್ಷಣಿಕ ಕಾರ್ಯಕ್ರಮದ ಮಾಡು ಮತ್ತು ಕಲಿ ಸರಣಿಯ ಭಾಗವಾಗಿ ಹದಿನೈದು ದಿನಗಳ ತಂಜಾವೂರ್ ಚಿತ್ರಕಲೆಯ ತರಬೇತಿ ಶಿಬಿರ ಏರ್ಪಡಿಸಿದ್ದು, ಈವರೆಗೆ 15ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸಿ ಚಿತ್ರಕಲೆಯನ್ನು ಕಲಿಯುತ್ತಿದ್ದಾರೆ. ಇವರಿಗೆಲ್ಲ ಮೈಸೂರಿನವರೇ ಆದ ಕಲಾವಿದ ಆರ್. ಶಿವಕುಮಾರ್ ತರಬೇತಿ ನೀಡುತ್ತಿದ್ದಾರೆ.
ಈ ಹದಿನೈದು ದಿನಗಳಲ್ಲಿ ಡ್ರಾಯಿಂಗ್ ಹಾಳೆಯ ಮೇಲೆ ಸ್ಕೆಚ್ ಹಾಕುವುದು, ಎಂಡಿ ಸಾಫ್ಟ್‌ವುಡ್ ಪಟ್ಟಿಗೆ ಅಂಟಿಸುವುದನ್ನು ಹೇಳಿಕೊಡಲಾಗುತ್ತದೆ. ನಂತರ ಚಾಕ್‌ಪುಡಿ ಫೆವಿಕಲ್ ಮಿಶ್ರಣ ಮಾಡಿ ಮರದ ಪಟ್ಟಿಗೆ ಆರು ಬಾರಿ ಲೇಪಿಸುವುದು. ಬಳಿಕೆ ಜೆರಾಕ್ಸ್ ಪ್ರತಿಯಿಂದ ತಮಗೆ ಬೇಕಾದ ದೇವತೆಗಳ ಚಿತ್ರವನ್ನು ರಚಿಸಿಕೊಳ್ಳುವುದು. ಆ ಚಿತ್ರದ ಗೆರೆಗಳಿಗೆ ಜಸ್ಸೋ ವರ್ಕ್ ಮಾಡುವುದನ್ನು ಕಲಿಸಲಾಗುತ್ತಿದೆ.
ಜಸ್ಸೋ ವರ್ಕ್‌ನಲ್ಲಿ ಅರೇಬಿಕ್ ಗಮ್, ಲೈನ್ ಪುಡಿ, ಚಾಕ್ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿಕೊಂಡು ಬ್ರಶ್ ಸಹಾಯದಿಂದ ಚಿತ್ರಕಲೆಯ ಮೇಲೆ ಲೇಪಿಸಲಾಗುತ್ತದೆ. ಕುಂದನ್ ಹರಳನ್ನು ಕಲಾತ್ಮಕವಾಗಿ ಅಂಟಿಸಲಾಗುತ್ತದೆ. ಕೆಂಪು ಹರಳು, ಹಸಿರು ಹರಳುಗಳನ್ನು ಕೂರಿಸಲಾಗುತ್ತದೆ. ಈ ಕೆಲಸ ಮುಗಿದ ಬಳಿಕ ಚಿನ್ನದ ತಗಡನ್ನು ಕತ್ತರಿಸಿಕೊಂಡು ಅಂಟಿಸಿ ರೂಪ ಕೊಡಲಾಗುತ್ತದೆ. ಇವಿಷ್ಟನ್ನು ಮಾಡಲು ಹದಿನೈದು ದಿನಗಳ ಅವಶ್ಯಕತೆ ಇದೆ ಎಂದು ಕಲಾವಿದ ಶಿವಕುಮಾರ್ 'ಕನ್ನಡಪ್ರಭ'ಕ್ಕೆ ತಿಳಿಸಿದರು. ಮೈಸೂರು ಸಾಂಪ್ರದಾಯಿಕ ಕಲೆ ಹಾಗೂ ತಂಜಾವೂರ್ ಕಲಾ ಪ್ರಕಾರಗಳು ಒಂದೇ ಆದರೂ ಸಹ ಎರಡಕ್ಕೂ ಅದರದೇ ಆದ ವೈಶಿಷ್ಟ್ಯಗಳಿವೆ. ಅದರಲ್ಲೂ ಮೈಸೂರು ಸಾಂಪ್ರದಾಯಿಕ ಕಲೆಯನ್ನು ಹೆಚ್ಚು ಆಚರಣೆಗೆ ತಂದ ಕೀರ್ತಿ ರಾಮನರಸಯ್ಯ ಅವರಿಗೆ ಸಲ್ಲಬೇಕು. ಅವರ ಗರಡಿಯಲ್ಲಿ ಬೆಳೆದ ಶಿವಕುಮಾರ್ ಇಂದಿಗೂ ಎರಡೂ ಕಲೆಗಳನ್ನು ಕಲಿತು, ಇತರರಿಗೂ ಕಲಿಸುತ್ತಾ ಬಂದಿದ್ದಾರೆ.