'ಸಾಮಾಜಿಕ ಬದಲಾವಣೆಗೆ ನ್ಯಾನೋ ವಿಜ್ಞಾನ ಸಹಕಾರಿ'
ಕ.ಪ್ರ.ವಾರ್ತೆ ಮೈಸೂರು ಅ. 19
ಸಮಗ್ರ ಸಾಮಾಜಿಕ ಬದಲಾವಣೆಗೆ ನ್ಯಾನೋ ವಿಜ್ಞಾನ ಸಹಕಾರಿ ಎಂದು ಮೈಸೂರು ವಿವಿಯ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಹೇಳಿದರು.
ಮೈಸೂರು ಎಂಜಿನಿಯರಗಳ ಸಂಸ್ಥೆಯು ಐಸಿಸಿ, ಎನ್ಐಇ ಹಾಗೂ ಮೈಸೂರು ವಿವಿಯ ಸಹಯೋಗದಲ್ಲಿ ಆಯೋಜಿಸಿರುವ ಶಕ್ತಿ, ಪರಿಸರ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ನ್ಯಾನೋ ತಂತ್ರಜ್ಞಾನ ಎಂಬ ವಿಷಯ ಕುರಿತ ಅಖಿಲ ಭಾರತ ಮಟ್ಟದ ಎರಡು ದಿನಗಳ ವಿಚಾರ ಸಂಕಿರಣವನ್ನು ಅವರು ಶನಿವಾರ ಉದ್ಘಾಟಿಸಿ ಮಾತನಾಡಿದರು.
21ನೇ ಶತಮಾನದ ಅತ್ಯಾಧುನಿಕ ಸಂಶೋಧನೆ ಎಂದರೇ ಅದು ನ್ಯಾನೋ ತಂತ್ರಜ್ಞಾನ. ಈ ತಂತ್ರಜ್ಞಾನದಿಂದ ಯಾವುದೇ ಉತ್ಪಾದನೆ ವಸ್ತುಗಳ ಸಾಮರ್ಥ್ಯ ಹೆಚ್ಚಿಸುವ ಕೌಶಲ ಹೊಂದಿದೆ. ನ್ಯಾನೋ ಕೇವಲ ತಂತ್ರಜ್ಞಾನ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ಮಾತ್ರವಲ್ಲ ಪ್ರತಿಯೊಂದು ಕ್ಷೇತ್ರಕ್ಕೂ ಅವಶ್ಯಕ. ಇದರಿಂದ ಸಮಗ್ರ ಸಾಮಾಜಿಕ ಬದಲಾವಣೆ ಸಾಧ್ಯವಾಗಲಿದೆ ಎಂದರು.
ವರದಿ ನೀಡಿದರೆ ನೆರವು: ಕೈಗಾರಿಕೆಗಳ ಮಾಲಿನ್ಯ ತಡೆಗೆ, ಕಚ್ಚಾ ಪದಾರ್ಥಗಳ ಗುಣಮಟ್ಟ ಹೆಚ್ಚಳಕ್ಕೆ, ಬ್ಯಾಕ್ಟೀರಿಯಗಳ ವಿನಾಶಕ್ಕೆ, ತ್ಯಾಜ್ಯಗಳ ನಿರ್ವಹಣೆಗೆ, ಹಸಿರು ಕಟ್ಟಡಗಳ ನಿರ್ಮಾಣಕ್ಕೆ ಹಾಗೂ ಔಷಧಿಗಳ ತಯಾರಿಕೆಗೆ ಮೌಲ್ಯಯುತ ಕೊಡುಗೆ ನೀಡಲಿದೆ. ಸಾರಿಗೆ, ನಗರಾಭಿವೃದ್ಧಿ, ಆರೋಗ್ಯ ಮುಂತಾದ ವಲಯಗಳ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಅವರು ತಿಳಿಸಿದರು.
ನ್ಯಾನೋ ತಂತ್ರಜ್ಞಾನ ಕುರಿತ ಪರಿಣಿತರು ಈ ವಿಚಾರ ಸಂಕಿರಣದಲ್ಲಿ ಚರ್ಚೆ ನಡೆಸಿ, ಅದರ ಅಭಿವೃದ್ಧಿಗೆ ಅಗತ್ಯವಾದ ಸಲಹೆ ಹಾಗೂ ಮಾರ್ಗದರ್ಶನದ ವರದಿ ನೀಡಿದರೆ ವಿವಿಯು ನೆರವಿಗೆ ಮುಂದಾಗಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗಮನ ಸೆಳೆದು ಮುಂದಿನ ಪೀಳೆಗೆಯ ಪ್ರಗತಿಗೆ ಸಹಕಾರ ನೀಡಲಿದೆ ಎಂದರು.
ತಂತ್ರಜ್ಞಾನ ಹಾಗೂ ವಿಜ್ಞಾನ ಮುಂತಾದ ಕ್ಷೇತ್ರಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂಥ ಕಾರ್ಯಕ್ರಮಗಳನ್ನು ಅನೇಕ ವರ್ಷಗಳಿಂದ ನಡೆಸುತ್ತಾ ಬಂದಿರುವ ಎಂಜಿನಿಯರ ಸಂಸ್ಥೆಯ ಕಾರ್ಯ ಚಟುವಟಿಕೆ ಶ್ಲಾಘನೀಯ ಎಂದ ಅವರು, ಇದು ಹೀಗೆ ಮುಂದುವರೆಯಲಿ ಎಂದು ಆಶಿಸಿದರು.
ಗುಣಮಟ್ಟದ ಸೇವೆ: ಮುಖ್ಯ ಅತಿಥಿಯಾಗಿ ಮಾತನಾಡಿದ ಜೆ.ಕೆ. ಟೈರ್ಸ್ ನಿರ್ದೇಶಕ ಡಾ. ಆರ್. ಮುಖ್ಯೋಪಧ್ಯಾಯ, ಕಡಿಮೆ ವಸ್ತುಗಳನ್ನು ಬಳಸಿ ಗುಣಮಟ್ಟದ ಸೇವೆಯು ನ್ಯಾನೋ ತಂತ್ರಜ್ಞಾನದಿಂದ ಸಾಧ್ಯವಾಗಲಿದೆ. ಪೂರ್ವಭಾವಿ ಯೋಜನೆಗಾಗಿ ಈಗಾಗಲೇ ಕೈಗಾರಿಕಾ ಕ್ಷೇತ್ರದ ಕೌಶಲ ಅಭಿವೃದ್ಧಿಗೆ ಸರ್ಕಾರ 2200 ಕೋಟಿ ವೆಚ್ಚ ಮಾಡುತ್ತಿದೆ ಎಂದರು.
ಸಿಎಫ್ಟಿಆರ್ಐ ಹಿರಿಯ ವಿಜ್ಞಾನ ಡಾ. ಆರ್. ಸುಬ್ರಹ್ಮಣ್ಯನ್ ಹಾಗೂ ಮೈಸೂರು ವಿವಿಯ ಇಂಟರನಲ್ ಕ್ವಾಲಿಟಿ ಮೈಸೂರು ಆಸ್ಯೂರೆನ್ಸ್ಸೆಲ್ ನಿರ್ದೇಶಕ ಡಾ. ಕೆ. ಬೈರಪ್ಪ ವಿಷಯ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಎಂಐಇ ಅಧ್ಯಕ್ಷ ಡಾ. ಟಿ. ಅನಂತಪದ್ಮನಾಭ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಎ.ಎಸ್. ಸತೀಶ್ ನಿರೂಪಿಸಿದರು. ಕಾರ್ಯದರ್ಶಿ ಪಿ. ಸಂಪತ್ತು ವಂದಿಸಿದರು.