ಅಪಘಾತದಲ್ಲಿ ಗಾಯಗೊಂಡಿದ್ದ ವಕೀಲ ನಿಧನ
ಮದ್ದೂರು: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ನಿಮ್ಹಾನ್ಸ್ಗೆ ದಾಖಲಾಗಿದ್ದ ವಕೀಲರ ಸಂಘದ ಸಹ ಕಾರ್ಯದರ್ಶಿ ಕೆ.ಸಿ. ಮಹೇಶ್ಗೌಡ (48) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಇದ್ದರು. ಮಹೇಶ್ ಗೌಡ ಅವರು, ಅ.15ರಂದು ಚನ್ನಪಟ್ಟಣ ಸಮೀಪದ ಬಂಡೂರು ಮತ್ತು ವಳೆಗರೆಹಳ್ಳಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಮೈಸೂರು ಅಪೊಲೋ ಆಸ್ಪತ್ರೆಗೆ ದಾಖಲಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮ್ಹಾನ್ಸ್ಗೆ ದಾಖಲು ಮಾಡಲಾಗಿತ್ತು. ಇವರ ಅಂತ್ಯಕ್ರಿಯೆ ಕುದುರಗುಂಡಿ ಗ್ರಾಮದಲ್ಲಿ ಅ.21ರ ಬೆಳಗ್ಗೆ 9ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರ ನಿಧನಕ್ಕೆ ಜೆಎಂಎಫ್ಸಿ ನ್ಯಾಲಾಯದ ನ್ಯಾಯಾಧೀಶರಾದ ಶಿವಕುಮಾರ್, ಎಂ. ಮನೋಹರ್, ವೆಂಕಟೇಶ್ನಾಯಕ್, ವಕೀಲರ ಸಂಘದ ಅಧ್ಯಕ್ಷ ಎಚ್. ಮಾದೇಗೌಡ, ಎಂ.ಎಂ. ಪ್ರಶಾಂತ್, ಪ್ರಭಾಕರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ನ. 9ರಂದು ಗುರುವಂದನಾ ಕಾರ್ಯಕ್ರಮ
ಪಾಂಡವಪುರ: ತಾಲೂಕಿನ ಗ್ರಾಮಾಂತರ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಇಲ್ಲಿನ ಪ್ರತಿಷ್ಠಿತ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ನ. 9ರಂದು ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪಿ. ಹೊನ್ನರಾಜು ಅಧ್ಯಕ್ಷತೆಯಲ್ಲಿ ನಡೆದ 1977-78ನೇ ಸಾಲಿನ ಹಳೇ ವಿದ್ಯಾರ್ಥಿಗಳ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಅಂದು (ನ.9) ಶಾಲಾ ಆವರಣದಲ್ಲಿ ವೇದಿಕೆ ನಿರ್ಮಿಸಿ ಶಿಕ್ಷಕರನ್ನು ಸನ್ಮಾನಿಸುವುದು. ಇದೇ ವೇಳೆ ಹಳೇ ವಿದ್ಯಾರ್ಥಿಗಳ ಸಂಘಟನೆ ಉದ್ಘಾಟಿಸಲಾಗುತ್ತದೆ ಎಂದು ಹೊನ್ನರಾಜು ಹೇಳಿದರು.
ಲಾರಿ ಡಿಕ್ಕಿ; ಬೈಕ್ ಸವಾರ ಸಾವು
ಹುಣಸೂರು: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಹಾಗೂ ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಬನ್ನಿಕುಪ್ಪೆ ಬಳಿ ಭಾನುವಾರ ಬೆಳಗ್ಗೆ ನಡೆದಿದೆ. ಕೇರಳ ರಾಜ್ಯದ ಕಣ್ಣೂರು ನಿವಾಸಿ ಶಶಿಕುಮಾರ್ ಎಂಬವರ ಪುತ್ರ ಸುಹಾಸ್(21) ಮೃತಪಟ್ಟವರು. ಈತನೊಂದಿಗಿದ್ದ ತ್ರೀವೇಂಡ್ರಂ ನಿವಾಸಿ ವಿವೇಕ್ ಮ್ಯಾಥ್ಯೂ ತೀವ್ರವಾಗಿ ಗಾಯಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಹಾಸ್ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದು, ಬನ್ನಿಕುಪ್ಪೆ ಬಳಿ ಎದುರಿನಿಂದ ಬಂದ ಲಾರಿಗೆ ಡಿಕ್ಕಿಯಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬಿಳಿಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪೆಟ್ರೋಲ್ ಬಂಕ್ ನೌಕರ ಸಾವು
ಹುಣಸೂರು: ವಿದ್ಯುತ್ ಸ್ಪರ್ಶದಿಂದ ಪೆಟ್ರೋಲ್ ಬಂಕ್ ನೌಕರನೊಬ್ಬ ಮೃತಪಟ್ಟಿರುವ ಘಟನೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಪಿರಿಯಾಪಟ್ಟಣ ತಾಲೂಕು ಹಾರೋಹಳ್ಳಿ ಹೋಬಳಿ ಅಡಗೂರು ನಿವಾಸಿ ನಿಂಗೇಗೌಡರ ಪುತ್ರ ಮಹದೇವ್(21) ಮೃತಪಟ್ಟವರು. ಕೂಲಿ ಕಾರ್ಮಿಕ ನಿಂಗೇಗೌಡರ ಪುತ್ರ ಮಹದೇವ್ ತಾಲೂಕಿನ ರಾಮಪಟ್ಟಣದ ಬಾವ ತಮ್ಮೇಗೌಡರ ಮನೆಯಲ್ಲಿದ್ದುಕೊಂಡು, ಪಟ್ಟಣದ ಕಿರಿಜಾಜಿ ರಸ್ತೆಯ ಛಾಯಾದೇವಿ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಟ್ಯಾಂಕರ್ನಲ್ಲಿ ಅಳತೆ ಕೋಲನ್ನು ಹಾಕಿ ಪರೀಕ್ಷಿಸುವಾಗ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪರಿಹಾರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಪಿರಿಯಾಪಟ್ಟಣ: ತಾಲೂಕು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಉಪಾಧ್ಯಕ್ಷರಾಗಿ ಹೆಮ್ಮಿಗೆ ಚಂದ್ರಶೆಟ್ಟಿ ಹಾಗೂ ಹಳೇಪೇಟೆ ಕಂಠಾಪುರದ ಅಣ್ಣಯ್ಯಪ್ಪ ಅವರನ್ನು ನೇಮಿಸಲಾಗಿದೆ ಎಂದು ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ತಾ. ಅಧ್ಯಕ್ಷ ಎ.ಸಿ. ಪ್ರಸನ್ನ ತಿಳಿಸಿದ್ದಾರೆ. ಸೋಹನ್ಕುಮಾರ್ ಪಿರಿಯಾಪಟ್ಟಣ(ಪ್ರ. ಕಾರ್ಯದರ್ಶಿ), ಜಯರಾಮೇಗೌಡ ರಾಜನ ಬಿಳುಗೂಲಿ, ಅಶ್ವತ್ ಮುತ್ತೂರು, ಸತ್ಯನಾರಾಯಣ ಚೌಡನಹಳ್ಳಿ, ಹರೀಶ್ ಹಿಟ್ನನಹಳ್ಳಿ(ಕಾರ್ಯದರ್ಶಿಗಳು), ಎಂ.ಕೆ. ಕುಮಾರ ಮೂಡಲಕೊಪ್ಪಲು(ಖಜಾಂಚಿ), ಕೆಪರಾಜ ಅರಸ್ ಬೆಳತೂರು, ದಶರಥ ವಡ್ಡರಹಳ್ಳಿ, ಕುಮಾರ್ ಆಲನಹಳ್ಳಿ, ಹರೀಶ ಹಿಟ್ಟನಹಳ್ಳಿ, ಗಣೇಶ ಗೊರಳ್ಳಿ, ಪವಿ ಆಯತನಹಳ್ಳಿ, ರಾಜು ಬಿಲ್ಲಳ್ಳಿ, ರವಿಗೌಡ ಬಾರಸೆಕೊಪ್ಪಲು, ಹನುಮಂತ ಪಿರಿಯಾಪಟ್ಟಣ, ಅಶೋಕ ಸೋಳೆಕೋಟೆ(ಕಾರ್ಯಕಾರಣಿ ಸಮಿತಿ ಸದಸ್ಯರು) ಆಯ್ಕೆಯಾಗಿದ್ದಾರೆ.
ನಗರದಲ್ಲಿ ಜೋರು ಮಳೆ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಗ್ಗೆ ಜೋರು ಮಳೆಯಾಯಿತು. ಶನಿವಾರ ರಾತ್ರಿ ಆರಂಭವಾದ ಮಳೆಯು ಭಾನುವಾರ ಮುಂಜಾನೆ ಸಹ ಮುಂದುವರೆದಿತ್ತು. ಮಳೆಯಿಂದಾಗಿ ನಗರದ ಕೆಲವು ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ. ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿದೆ. ಮಳೆಯಿಂದಾಗಿ ಮುಂಜಾನೆ ವಾಕಿಂಗ್, ಜಾಗಿಂಗ್ ಹೋಗುವವರು ತೊಂದರೆ ಅನುಭವಿಸಿದರು. ಯಾವುದೇ ರೀತಿಯ ಹಾನಿಯಾದ ವರದಿಯಾಗಿಲ್ಲ.
ಕ್ರಿಯಾಶೀಲತೆ ಬಗ್ಗೆ ಉಪನ್ಯಾಸ
ಮೈಸೂರು: ಮೈರಾ ಸ್ಕೂಲ್ ಆಫ್ ಬ್ಯುಸಿನೆಸ್ ವತಿಯಿಂದ ತಂಡದ ಕ್ರಿಯಾಶೀಲತೆ ಅರ್ಥ ಕುರಿತ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಾರ್ಟನ್ ಸ್ಕೂಲ್ನಲ್ಲಿ 2013ರಲ್ಲಿ ಎಂಬಿಎ ಪದವಿ ಪಡೆದ ಮುಕ್ತಾ ಡೆರೆರಾ ಅವರು ಒಟ್ಟು ವಿದ್ಯಾರ್ಥಿಗಳನ್ನು ನಾಲ್ಕು ತಂಡಗಳನ್ನಾಗಿ ವಿಂಗಡಿಸಿ ಅವರಿಗೆ ವಿವಿಧ ಚಟುವಟಿಕೆಗಳನ್ನು ನೀಡಿದರು. ಜತೆಗೆ ಆಂತರಿಕ ಮತ್ತು ಬಾಹ್ಯ ಅಭಿವ್ಯಕ್ತಿ, ಪ್ರಜ್ಞಾಪೂರ್ವಕ ಕಾರ್ಯ, ಚಿಂತನೆ ಮತ್ತು ಭಾವನೆ, ಅರ್ಥೈಸಿಕೊಳ್ಳುವುದು ಹಾಗೂ ನ್ಯಾಯಾಧೀಕರಣಗೊಳಿಸುವ ಬಗೆಗೆ ತಿಳಿಸಿಕೊಟ್ಟರು. ಇದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಗುಂಪಿನಲ್ಲಿ ಕೆಲಸ ಮಾಡುವ ಅನುಭವವನ್ನು ಗಳಿಸಿಕೊಂಡರು.
ವಧು-ವರರ ಸಮಾವೇಶ
ಮೈಸೂರು: ಜೆಎಸ್ಎಸ್ ವಿವಾಹ ವೇದಿಕೆ ಆಶ್ರಯದಲ್ಲಿ ಅ.27ರ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ರಾಜ್ಯ ಮಟ್ಟದ ವಧು-ವರರ ಸಮಾವೇಶ ಏರ್ಪಡಿಸಿದೆ. ವಿವಾಹ ವೇದಿಕೆಯಲ್ಲಿ ನೋಂದಾಯಿಸಿಕೊಂಡಿರುವವರು ಮಾತ್ರ ಈ ಸಮಾವೇಶದಲ್ಲಿ ಭಾಗವಹಿಸಬಹುದು. ನೋಂದಣಿಗೆ ಈಗಲೂ ಅವಕಾಶವಿದ್ದು, ಸಮಾವೇಶದ ದಿನದಂದು ಕೂಡ ನೋಂದಾಯಿಸಿಕೊಳ್ಳಬಹುದು. ಆಸಕ್ತರು ದೂ. 2430322, ಮೊ. 96110 70674 ಸಂಪರ್ಕಿಸಬಹುದು.
ಹ್ಯಾಮ್ಸ್: ರಾಷ್ಟ್ರೀಯ ಕಾರ್ ರ್ಯಾಲಿ
ಮೈಸೂರು: ಭಾರತೀಯ ಹ್ಯಾಮ್ಸ್ ಸಂಸ್ಥೆಯು ನವೆಂಬರ್ ಮತ್ತ ಡಿಸೆಂಬರ್ ತಿಂಗಳಲ್ಲಿ ಭಾರತೀಯ ರಾಷ್ಟ್ರೀಯ ಕಾರ್ ರ್ಯಾಲಿ ಚಾಂಪಿಯನ್ಶಿಪ್ ಆಯೋಜಿಸಿದೆ. ಈ ವೃತ್ತಿಯಲ್ಲಿನ ಪ್ರಾವೀಣ್ಯತೆ ಮತ್ತು ಅನುಭವ ಇರಬೇಕು. ವಿವರಕ್ಕೆ ದೂ. 080- 26664501 ಅಥವಾ 94483 02677 ಸಂಪರ್ಕಿಸಬಹುದು.