ಆಕಾಶವಾಣಿ ಸುಧಾರಣೆಗೆ ವಿಶ್ಲೇಷಣೆಯಾಗಲಿ
ಕ.ಪ್ರ.ವಾರ್ತೆ ಮೈಸೂರು ಅ. 20
ಆಕಾಶವಾಣಿ ಕಾರ್ಯಕ್ರಮಗಳ ಸುಧಾರಣೆಗೆ ಶ್ರೋತೃಗಳಿಂದ ವಿಶ್ಲೇಷಣೆಯಾಗಲಿ ಎಂದು ಸಾಹಿತಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಹೇಳಿದರು.
ಸಮುದ್ಯತಾ ಶ್ರೋತೃ ಸಂಘವು ಕೃಷ್ಣಮೂರ್ತಿಪುರಂನ ಶ್ರೀರಾಮಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಐದನೇ ವಾರ್ಷಿಕೋತ್ಸವವನ್ನು ಅವರು ಉದ್ಘಾಟಿಸಿ ಮಾತನಾಡಿ, ಅನೇಕ ಜಾತಿಗಳ ಸಂಘಟನೆ, ಕನ್ನಡ, ವಿಜ್ಞಾನ, ಮಹಿಳಾ ಹೆಸರಿನ ಸಂಘಗಳಿರುವುದನ್ನು ಕೇಳಿದ್ದೇನೆ. ಆದರೆ ಆಕಾಶವಾಣಿ ಕಾರ್ಯಕ್ರಮಗಳ ಆಲಿಸುವಂಥವರ ಶ್ರೋತೃ ಸಂಘ ಇರುವುದು ವೈಶಿಷ್ಟ್ಯವಾದುದು ಎಂದರು.
ಇಂತಹ ಸಂಘ ಕೇವಲ ಶ್ರೋತೃಗಳಿಗೆ ಮಾತ್ರ ಉಪಯೋಗವಲ್ಲ. ಬಾನುಲಿಗೂ ಸಹ ಪ್ರಯೋಜನಕಾರಿ. ಯಾವ ಸ್ವರೂಪದ ಕಾರ್ಯಕ್ರಮಗಳು ಬಿತ್ತರವಾಗಬೇಕು ಹಾಗೂ ಆಕಾಶವಾಣಿ ಸುಧಾರಣೆಗೂ ಇದು ಸಹಕಾರಿಯಾಗಲಿದೆ. ಈ ಸಂಘದ ಮೂಲ ಉದ್ದೇಶ ಆಕಾಶವಾಣಿ ಕಾರ್ಯಕ್ರಮಗಳನ್ನು ವಿಶ್ಲೇಷಣೆ ನಡೆಸುವಂತಾಗಬೇಕು ಎಂದು ಅವರು ತಿಳಿಸಿದರು.
ಗ್ರಾಹಕರ ಸಂಬಂಧ ವರ್ಧನೆಗೆ ಸ್ಪಂದಿಸುವುದರ ಜತೆಗೆ ಗುಣ ಹಾಗೂ ಅವಗುಣಗಳ ಬಗ್ಗೆ ಶ್ರೋತೃಗಳ ಸಲಹೆ ಹಾಗೂ ಸೂಚನೆಗಳನ್ನು ಬಾನುಲಿ ಅಧಿಕಾರಿಗಳು ಈ ಮೂಲಕ ಆಲಿಸುವಂತಾಗಬೇಕು. ಪರಸ್ಪರ ವಿಚಾರ ವಿನಿಮಯದ ವೇದಿಕೆ ಇದಾಗಬೇಕು. ಆಕಾಶವಾಣಿ ಮತ್ತು ಕೇಳುಗರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು. ಇಂತಹ ಸಂಘಗಳು ಪ್ರತಿ ಊರಿನಲ್ಲಿಯೂ ಸ್ಥಾಪಿತವಾಗಬೇಕು ಎಂದು ಅವರು ಆಶಿಸಿದರು.
ಕಲ್ಪನಾ ವಿಲಾಸಕ್ಕೆ ಶ್ರವಣ ಮಾಧ್ಯಮ ಪೂರಕವಾದುದು. ಆಲಿಸುವಿಕೆಯ ಕೌಶಲದಿಂದ ವ್ಯಕ್ತಿತ್ವ ವಿಕಾಸನವಾಗಲಿದೆ. ಆದರೆ ಇಂದು ಆಲಿಸುವಿಕೆಯತ್ತ ಮುಂದಾಗದೆ ನೋಟದತ್ತ ಆಕರ್ಷಿತರಾಗಿರುವುದರಿಂದ ಮನುಷ್ಯನಲ್ಲಿ ವಿಷಯ ಗ್ರಹಿಕೆ ಹಾಗೂ ಪ್ರತಿಕ್ರಿಯೆ ಕ್ಷೀಣಿಸುತ್ತಿದೆ. ಮನಸ್ಸು ಮತ್ತು ಬುದ್ಧಿ ಕೇಂದ್ರೀಕೃತವಾದಾಗ ವ್ಯಕ್ತಿತ್ವ ವಿಕಸನವಾಗಲಿದೆ ಎಂದರು.
ಇದೇ ವೇಳೆ ಮೈಸೂರು ಆಕಾಶವಾಣಿ ಉಪ ನಿರ್ದೇಶಕಿ ಹಾಗೂ ವಿದುಷಿ ರಾಜಲಕ್ಷ್ಮೀ ಶ್ರೀಧರ್ ಹಾಗೂ ಹಿರಿಯ ಉದ್ಘೋಷಕ ಎಂ. ಶಂಕರಪ್ಪ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿರುವ ರತ್ನ ಹಾಗೂ ಶ್ರೀಪನ್ನ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಚಿತ್ರನಟ ಮಂಡ್ಯ ರಮೇಶ್, ಮೈಸೂರು ಆಕಾಶವಾಣಿ ತಾಂತ್ರಿಕಿ ಉಪ ನಿರ್ದೇಶಕ ವಿ. ಶ್ರೀನಿವಾಸನ್ ಅವರು ಮುಖ್ಯ ಅತಿಥಿಯಾಗಿದ್ದರು. ಮೈಸೂರು ಆಕಾಶವಾಣಿ ಉಪ ನಿರ್ದೇಶಕ ಆನಂದ್ ವಿ. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷೆ ಎಂ.ಕೆ. ರುಕ್ಮಿಣಿ, ಅಧ್ಯಕ್ಷೆ ಜಯ ಲಿಂಗಣ್ಣ, ಕಾರ್ಯದರ್ಶಿ ಸುಧಾರಾಜ್ ಇದ್ದರು. ಸದಸ್ಯರಾದ ಟಿ.ಎನ್. ರಾಜೇಶ್ವರಿ ಸಂಘದ ವರದಿ ಓದಿದರು. ವೈಜಯಂತಿ ಸ್ವಾಗತಿಸಿದರು.
ಆಕಾಶವಾಣಿಯೂ ಅಮ್ಮನ ಕೈ ತುತ್ತೂ...
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ನನ್ನೂರು. ಅದೊಂದು ಪುಟ್ಟಗ್ರಾಮ. 1969-70ರ ಸಂದರ್ಭ ಇರಬೇಕು. ತಂದೆಯವರು ಮೊದಲಿಗೆ ರೇಡಿಯೋ ತಂದು ಪೂಜೆ ಮಾಡಿದ್ದು, ರೇಡಿಯೋ ನೋಡಲು ಹಾಗೂ ಕೇಳಲು ಮನೆ ಮುಂದೆ ಜನರ ದಂಡು ಜಮಾಯಿಸಿದ್ದು ನೆನಪಿದೆ. ನಾನಿನ್ನು ಆಗ ಚಿಕ್ಕವನಾದ್ದರಿಂದ ಯಾರೋ ರೇಡಿಯೋ ಒಳಗೆ ಕುಳಿತು ಹಾಡುತ್ತಾರೆ ಎಂದು ಭಾವಿಸಿದ್ದೆ. ಇಂತಹ ಕುತೂಹಲದಿಂದ ನನ್ನಣ್ಣ ರೇಡಿಯೋ ಬಿಚ್ಚಿ ನೋಡಿದ್ದು ಉಂಟು!. ಶುದ್ಧ ಶಾಸ್ತ್ರೀಯ ಸಂಗೀತ ಹಾಗೂ ಸಂಯಮದ ಕಾರ್ಯಕ್ರಮಗಳನ್ನು ನೀಡುವ ಆಕಾಶವಾಣಿ ಅಮ್ಮನ ಕೈ ತುತ್ತು ಇದ್ದಂತೆ. ಇನ್ನೂ ಸಿನಿಮಾ, ಟಿವಿಗಳು ಫಿಜ್ಜಾ, ಬರ್ಗರ್ ಇದ್ದಂತೆ. ಆಕಾಶವಾಣಿ ಅಂದಿನಿಂದ ಇರಿಸಿಕೊಂಡು ಬಂದಿರುವ ಕೆಲವು ಮಡಿವಂತಿಕೆಯನ್ನು ಬಿಡುವ ಅಗತ್ಯವಿದೆ.
- ಮಂಡ್ಯ ರಮೇಶ್, ನಟ, ರಂಗಕರ್ಮಿ