ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗೊಮ್ಮಟಗಿರಿ ಬಾಹುಬಲಿಗೆ ಮಜ್ಜನ

Srinivasa Murthy VN
Updated On : 21 Oct 2013, 1:00 am

ಧರ್ಮಾಪುರ ನಾರಾಯಣ್
ಕ.ಪ್ರ.ವಾರ್ತೆ ಮೈಸೂರು ಅ. 20
ತಾಲೂಕಿನ ಬಿಳಿಕೆರೆ ಹೋಬಳಿಯ ಬೆಟ್ಟದೂರು ಗ್ರಾಮದಲ್ಲಿನ ಗೊಮ್ಮಟಗಿರಿ ಕ್ಷೇತ್ರದಲ್ಲಿ ವೈರಾಗ್ಯ ಮೂರ್ತಿ ಗೊಮ್ಮಟೇಶ್ವರನಿಗೆ 64ನೇ ವರ್ಷದ ಮಸ್ತಕಾಭಿಷೇಕ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಶಿವಮೊಗ್ಗ ಜಿಲ್ಲೆಯ ಹೊಂಬುಜ ಶ್ರೀಕ್ಷೇತ್ರದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ವಿವಿಧ ಪೂಜಾ ಕಾರ್ಯಗಳು ಆರಂಭವಾದವು. ಮಧ್ಯಾಹ್ನ 12ಕ್ಕೆ ಪ್ರವಚನ ಹಾಗೂ ಕಳಸ ಹರಾಜಿನ ನಂತರ ಮಧ್ಯಾಹ್ನ 12.30ಕ್ಕೆ ನಡೆದ ಮಸ್ತಕಾಭಿಷೇಕದಲ್ಲಿ ಪವಿತ್ರವಾದ ನೀರು, ಎಳನೀರು, ಅರಿಸಿನ, ಕುಂಕುಮ, ಚಂದನ, ಕಷಾಯ, ಹಾಲು(ಕ್ಷೀರ), ಭಸ್ಮ, ಬತ್ತದ ಕಾಳು, ಅಕ್ಕಿ ಹಿಟ್ಟು, ಅಷ್ಟ ಗಂಧ, ಪುಷ್ಪಾರ್ಚನೆ, ಸೇರಿದಂತೆ ವಿವಿಧ ಬಗೆಯ ದ್ರವ್ಯ, ಧಾನ್ಯಗಳು ಹಾಗೂ ಪಂಚ ಕಳಸ ಮತ್ತು ಕುಂಭ ಕಳಸಗಳಿಂದ ಹಾಗೂ ಶುದ್ಧ ಕುಡಿಯುವ ನೀರಿನಿಂದ ಅಭಿಷೇಕ ಮಾಡಿ ಗೊಮಟೇಶ್ವರ ಮೂರ್ತಿಗೆ ಜೈನ ಧರ್ಮದ ಸಂಪ್ರದಾಯ ಧಾರ್ಮಿಕ ವಿಧಿ- ವಿಧಾನಗಳ ಮೂಲಕ ಮಸ್ತಕಾಭಿಷೇಕ ನೆರವೇರಿಸಲಾಯಿತು. ವೈರಾಗ್ಯ ಮೂರ್ತಿಗೆ ವಿವಿಧ ಬಗೆಯ ಅಭೀಷೇಕಗಳನ್ನು ಮಾಡುವ ಮೂಲಕ ಮೂರ್ತಿಗೆ ಮತ್ತಷ್ಟು ಮೆರಗು ತರಲಾಯಿತು.
ಹಾಸನ ಜಿಲ್ಲೆ ಚನ್ನರಾಯಪ್ಪಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಮಸ್ತಕಾಭಿಷೇಕವು ಪ್ರತಿ 12 ವರ್ಷಕೊಮ್ಮೆ ನಡೆಯುತ್ತದೆ. ಆದರೆ ಹುಣಸೂರು ತಾಲೂಕಿನ ಗೊಮ್ಮಟಗಿರಿಯಲ್ಲಿನ ಗೊಮ್ಮಟೇಶ್ವರನಿಗೆ ಪ್ರತಿ ವರ್ಷ ಮಸ್ತಕಾಭಿಷೇಕ ನೆರವೇರಿಸುವುದು ವಿಶೇಷ.
ಅಭಿಷೇಕ: ಗೊಮ್ಮಟೇಶ್ವರನಿಗೆ ಮಸ್ತಕಾಭಿಷೇಕ ಮಾಡಲು 3001 ರು.ಗಳಿಗೆ ಕ್ಷೀರಾಭಿಷೇಕವನ್ನು ಮೈಸೂರಿನ ಪದ್ಮರಾಜನ್, ಅಷ್ಟ ಗಂಧವನ್ನು 2501 ರು.ಗಳಿಗೆ ಗುಂಡಣ್ಣ, ಅರಿಸಿನ ಅಭಿಷೇಕವನ್ನು ಮೈಸೂರಿನ ಅಶೋಕ್ ಪಾಟೀಲ್, ಕನಕಾಭಿಷೇಕವನ್ನು 2501 ರು.ಗಳಿಗೆ ಯಲಚನಹಳ್ಳಿ ಗುಂಡಣ್ಣ, ಮಹಾಮಂಗಳಾರತಿ ಅಭಿಷೇಕವನ್ನು 1501 ರು.ಗಳಿಗೆ ಹಾಸನದ ಪದ್ಮರಾಜನ್ ಅವರು ಹರಾಜಿನ ಮೂಲಕ ಪಡೆದರು. ಚರ್ತುಷ ಕಳಸದಲ್ಲಿ ಮೊದಲನೆ ಕಳಸವನ್ನು ಗುಂಡಣ್ಣ, 2ನೇ ಕಳಸವನ್ನು ಎಚ್.ಡಿ. ಕೋಟೆಯ ಜಯಚಂದ್ರ, 3ನೇ ಕಳಸವನ್ನು ಸನಾತ್ ಕುಮಾರ್ ಅವರು ಹರಾಜಿನಲ್ಲಿ ಪಡೆದುಕೊಂಡರು. ಬಳಿಕ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದು ಮಂಗಳ ವಾದ್ಯ ಜೈಕಾರ ಘೋಷಣೆಯ ಮೂಲಕ ವೈರಾಗ್ಯ ಮೂರ್ತಿಗೆ ಮಸ್ತಕಾಭಿಷೇಕ ನೆರವೇರಿಸಲಾಯಿತು.
ತ್ಯಾಗಮೂರ್ತಿ: ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶಿವಮೊಗ್ಗ ಜಿಲ್ಲೆಯ ಹೊಂಬುಜ ಶ್ರೀಕ್ಷೇತ್ರದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಬಾಹುಬಲಿ ಚಕ್ರವರ್ತಿ ತನ್ನ ಸಹೋದರನ ಮೇಲೆ ಯುದ್ಧ ಮಾಡಿ ಗೆದ್ದರೂ ಸಹ ಅಧಿಕಾರ ಅನುಭವಿಸದೆ ತ್ಯಾಗ ಮನೋಭಾವದಿಂದ ಸಹೋದರ ಭರತನಿಗೆ ಆಸ್ಥಾನ ಬಿಟ್ಟು ಕೊಟ್ಟು ತಪಸ್ಸು ಮಾಡಿ ಲೋಕ ಶಾಂತಿ ಸ್ಮರಿಸಿದ ಬಾಹುಬಲಿಯನ್ನು ಜೈನ ಸಮುದಾಯ ಅನುಸರಿಸಿಕೊಂಡು ಅಚರಿಸುತ್ತಿದೆ. ಈಗ ಬಾಹುಬಲಿಯನ್ನು ವಿಶ್ವದಲ್ಲೆಡೆ ಆರಾಧಿಸಲಾಗುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement