ಗೊಮ್ಮಟಗಿರಿ ಬಾಹುಬಲಿಗೆ ಮಸ್ತಕಾಭಿಷೇಕ
ಕ.ಪ್ರ.ವಾರ್ತೆ ಮೈಸೂರು ಅ. 20
ತಾಲೂಕಿನ ಬಿಳಿಕೆರೆ ಹೋಬಳಿಯ ಬೆಟ್ಟದೂರು ಗ್ರಾಮದಲ್ಲಿನ ಗೊಮ್ಮಟಗಿರಿ ಕ್ಷೇತ್ರದಲ್ಲಿ ವೈರಾಗ್ಯ ಮೂರ್ತಿ ಗೊಮ್ಮಟೇಶ್ವರನಿಗೆ 64ನೇ ವರ್ಷದ ಮಸ್ತಕಾಭಿಷೇಕ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಶಿವಮೊಗ್ಗ ಜಿಲ್ಲೆಯ ಹೊಂಬುಜ ಶ್ರೀಕ್ಷೇತ್ರದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ವಿವಿಧ ಪೂಜಾ ಕಾರ್ಯಗಳು ಆರಂಭವಾದವು. ಮಧ್ಯಾಹ್ನ 12ಕ್ಕೆ ಪ್ರವಚನ ಹಾಗೂ ಕಳಸ ಹರಾಜಿನ ನಂತರ ಮಧ್ಯಾಹ್ನ 12.30ಕ್ಕೆ ನಡೆದ ಮಸ್ತಕಾಭಿಷೇಕದಲ್ಲಿ ಪವಿತ್ರವಾದ ನೀರು, ಎಳನೀರು, ಅರಿಸಿನ, ಕುಂಕುಮ, ಚಂದನ, ಕಷಾಯ, ಹಾಲು(ಕ್ಷೀರ), ಭಸ್ಮ, ಬತ್ತದ ಕಾಳು, ಅಕ್ಕಿ ಹಿಟ್ಟು, ಅಷ್ಟ ಗಂಧ, ಪುಷ್ಪಾರ್ಚನೆ, ಸೇರಿದಂತೆ ವಿವಿಧ ಬಗೆಯ ದ್ರವ್ಯ, ಧಾನ್ಯಗಳು ಹಾಗೂ ಪಂಚ ಕಳಸ ಮತ್ತು ಕುಂಭ ಕಳಸಗಳಿಂದ ಹಾಗೂ ಶುದ್ಧ ಕುಡಿಯುವ ನೀರಿನಿಂದ ಅಭಿಷೇಕ ಮಾಡಿ ಗೊಮಟೇಶ್ವರ ಮೂರ್ತಿಗೆ ಜೈನ ಧರ್ಮದ ಸಂಪ್ರದಾಯ ಧಾರ್ಮಿಕ ವಿಧಿ- ವಿಧಾನಗಳ ಮೂಲಕ ಮಸ್ತಕಾಭಿಷೇಕ ನೆರವೇರಿಸಲಾಯಿತು. ವೈರಾಗ್ಯ ಮೂರ್ತಿಗೆ ವಿವಿಧ ಬಗೆಯ ಅಭೀಷೇಕಗಳನ್ನು ಮಾಡುವ ಮೂಲಕ ಮೂರ್ತಿಗೆ ಮತ್ತಷ್ಟು ಮೆರಗು ತರಲಾಯಿತು.
ಹಾಸನ ಜಿಲ್ಲೆ ಚನ್ನರಾಯಪ್ಪಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಮಸ್ತಕಾಭಿಷೇಕವು ಪ್ರತಿ 12 ವರ್ಷಕೊಮ್ಮೆ ನಡೆಯುತ್ತದೆ. ಆದರೆ ಹುಣಸೂರು ತಾಲೂಕಿನ ಗೊಮ್ಮಟಗಿರಿಯಲ್ಲಿನ ಗೊಮ್ಮಟೇಶ್ವರನಿಗೆ ಪ್ರತಿ ವರ್ಷ ಮಸ್ತಕಾಭಿಷೇಕ ನೆರವೇರಿಸುವುದು ವಿಶೇಷ.