ಧರ್ಮಸ್ಥಳ ಶ್ರೀಕ್ಷೇತ್ರಕ್ಕೆ ಧಕ್ಕೆ ಖಂಡಿಸಿ ಕನ್ನಡ ವೇದಿಕೆ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಅ. 20
ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಆದರೆ, ಈ ಪ್ರಕರಣವನ್ನು ಮುಂದಿಟ್ಟುಕೊಂಡು ಧರ್ಮಸ್ಥಳ ಶ್ರೀಕ್ಷೇತ್ರಕ್ಕೆ ಧಕ್ಕೆ ತರುತ್ತಿರುವುದು ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿ ಮೈಸೂರು ಕನ್ನಡ ವೇದಿಕೆಯ ಕಾರ್ಯಕರ್ತರು ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಭಾನುವಾರ ಪ್ರತಿಭಟಿಸಿದರು. ಸೌಜನ್ಯಾ ಕೊಲೆ ಪ್ರಕರಣದಲ್ಲಿ ಯಾವ ತನಿಖೆ ಬೇಕಾದರೂ ಆಗಲಿ. ಅದಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಡಾ. ಹೆಗ್ಗಡೆ ಅವರೇ ಹೇಳಿದ್ದಾರೆ. ಹೀಗಾಗಿ ಧರ್ಮಸ್ಥಳ ಕ್ಷೇತ್ರವನ್ನು ಮತ್ತು ಹೆಗ್ಗಡೆ ಅವರನ್ನು ದೂಷಿಸುತ್ತಿರುವುದನ್ನು ನಿಲ್ಲಿಸಬೇಕು. ಸೌಜನ್ಯಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವವರು ಯಾರೇ ಆಗಲಿ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅವರು ಒತ್ತಾಯಿಸಿದರು. ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಅರವಿಂದ ಶರ್ಮ, ಮಹದೇವಸ್ವಾಮಿ, ಸುರೇಶಬಾಬು, ಗೋಪಿ, ಗಿರೀಶ, ಬಾಬು, ಗುರು, ಬೋಗಾದಿ ಸಿದ್ದೇಗೌಡ, ಕುಮಾರ್, ಚಿನ್ನಪ್ಪ, ವೆಂಕಟೇಶ, ಶಿವಲಿಂಗೇಗೌಡ ಇದ್ದರು.
ಸಚಿನ್ರಾಜ್ಗೆ ಪಿಎಚ್.ಡಿ ಪದವಿ
ಮೈಸೂರು: ಡಾ. ಭಾರತಿ ಪಿ. ಸಾಲಿಮಠ್ ಅವರ ಮಾರ್ಗದರ್ಶನದಲ್ಲಿ ಎಂ.ಎನ್. ಸಚಿನ್ರಾಜ್ ಅವರು ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಸಾದರಪಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿವಿ ಪಿಎಚ್.ಡಿ ಪದವಿ ನೀಡಿದೆ.
ಜಯಮಣಿಗೆ ಪಿಎಚ್.ಡಿ ಪದವಿ
ಮೈಸೂರು: ಡಾ. ಆಸಿಮಾ ನಸ್ರತ್ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಎಂ. ಜಯಮಣಿ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗಿಕರಿಸಿ ಅವರಿಗೆ ಭೂಗೋಳಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.
ಬಿಜೆಪಿಗೆ ನೇಮಕ
ಮೈಸೂರು: ನಗರ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಎಂ. ರಾಜೇಂದ್ರ ನೇಮಕವಾಗಿದ್ದಾರೆ.
ಮುದ್ರಾ ಶಿಬಿರ
ಮೈಸೂರು: ಚಾಮರಾಜ ಮೊಹಲ್ಲಾದಲ್ಲಿರುವ ವೇದವ್ಯಾಸ ಯೋಗ ಪ್ರತಿಷ್ಠಾನದಲ್ಲಿ ಅ.21ರಿಂದ 7 ದಿನಗಳ ಪ್ರಾಣಾಯಾಮ, ಧ್ಯಾನ, ಮುದ್ರಾ ಶಿಬಿರ ಏರ್ಪಡಿಸಿದ್ದು, ಮೊ. 94481 74457 ಸಂಪರ್ಕಿಸಬಹುದು.
ರ್ಯೂಮಟಾಲಜಿ 6 ದಿನಗಳ ಶಿಬಿರ
ಮೈಸೂರು: ಯಾದವಗಿರಿಯಲ್ಲಿರುವ ವಿಕ್ರಂ ಜ್ಯೇಷ್ಠ ಆಸ್ಪತ್ರೆಯಲ್ಲಿ ಅ.21ರಿಂದ 26ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ರ್ಯೂಮಟಾಲಜಿ(ಸಂಧಿವಾತ) ವೈದ್ಯಕೀಯ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದ್ದು, ದೂ. 0821- 2412121 ಸಂಪರ್ಕಿಸಬಹುದು.