ಪೊಲೀಸ್ ವರ್ಗಾವಣೆಯಲ್ಲಿ 'ಕೈ'ಯಾಡಿಸಿಲ್ಲ: ಕೆಂಪಯ್ಯ
ಮೈಸೂರು: ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿಗಳ ವರ್ಗಾವಣೆಯಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ ಎಂದು ನಿವೃತ್ತ ಎಡಿಜಿಪಿ ಕೆಂಪಯ್ಯ ಸ್ಪಷ್ಟಪಡಿಸಿದ್ದಾರೆ. ಮೈಸೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹೊಸ ವೆಬ್ಸೈಟ್ಗೆ ಸೋಮವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸರ ವರ್ಗಾವಣೆ ಕರ್ನಾಟಕ ಪೊಲೀಸ್ ಕಾಯ್ದೆ (ಕೆಪಿಎ) ಹಾಗೂ ಸುಪ್ರೀಂ ಕೋರ್ಟ್ ಸೂಚನೆಯಂತೇ ನಡೆಯುತ್ತಿದೆ. ಇದರಲ್ಲಿ ನನ್ನ ವೈಯಕ್ತಿಕ ಆಸಕ್ತಿಗಳಿಲ್ಲ. ನನ್ನ ಪಾತ್ರವೂ ಇಲ್ಲ. ಸರ್ಕಾರಿ ಹುದ್ದೆಯಲ್ಲಿದ್ದು ಅನುಭವ ಹೊಂದಿರುವ ನನ್ನ ಬಳಿ ಯಾರಾದರೂ ಸಲಹೆ ಕೇಳಿದರೆ ನೀಡುತ್ತೇನೆ. ಇದು ಮಾಧ್ಯಮಗಳ ಸೃಷ್ಟಿ. ಇದರ ಹಿಂದೆ ಹಿತಾಸಕ್ತಿಗಳು ಇರುವ ಗುಂಪುಗಳು ಮಾಧ್ಯಮಗಳ ಒಳಗೂ ಹೊರಗೂ ಇದ್ದಾರೆ.
ವರ್ಗಾವಣೆಯಲ್ಲಿ ಕೆಂಪಯ್ಯ ಹಸ್ತಕ್ಷೇಪ ಇರುವ ಬಗ್ಗೆ ಕೆಲವು ಶಾಸಕರು ಪತ್ರ ಬರೆದಿದ್ದರೆ ಪತ್ರ ಅಥವಾ ದಾಖಲೆ ನೀಡಲಿ. ಪೊಲೀಸ್ ಅಧಿಕಾರಿಗಳು ವರ್ಗಾವಣೆ ತೊಂದರೆ ಅನುಭವಿಸುತ್ತಿರುವುದು ನಿಜ. ಯಾರು ಎಲ್ಲಿಗೆ ಸೂಕ್ತರು ಎಂಬುದರ ಬಗ್ಗೆ ಗೊತ್ತಿರಬೇಕು. ಒಬ್ಬ ಅಧಿಕಾರಿ ಕನಿಷ್ಠ ಒಂದು ವರ್ಷ ಒಂದೆಡೆ ಸೇವೆ ಪೂರೈಸುವವರೆಗೂ ಅವರನ್ನು ವರ್ಗಾಯಿಸಬಾರದು. ಪೊಲೀಸರ ವರ್ಗಾವಣೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದರು.