ರಂಗೋಲಿ ಸ್ಪರ್ಧೆ; ಬೆಂಗಳೂರು ತಂಡಗಳಿಗೆ ಜಯ
ಮೈಸೂರು: ಕೇರಳ ಸಮಾಜವು ಸೆನೆಟ್ ಭವನದಲ್ಲಿ ಆಯೋಜಿಸಿದ್ದ ಹೂವಿನ ರಂಗೋಲಿ ಸ್ಪರ್ಧೆಯಲ್ಲಿ ಬೆಂಗಳೂರು ತಂಡಗಳು ಬಹುಮಾನ ಪಡೆದುಕೊಂಡಿವೆ.
ಬೆಂಗಳೂರಿನ ವಿ.ವಿ. ಮುಖೇಶ್ ನೇತೃತ್ವದ ಜಸ್ಟ್ ಲುಕ್ ಸಂಸ್ಥೆ ಪ್ರಥಮ, ಸೂರಜ್ ನೇತೃತ್ವದ 5 ಫ್ಲವರ್ಸ್ ಸಂಸ್ಥೆ ದ್ವಿತೀಯ ಮತ್ತು ಕಲಾ ಪ್ರತಾಪ್ ನೇತೃತ್ವದ ಕಲಾ ತಂಡ ತೃತೀಯ ಬಹುಮಾನ ಪಡೆದುಕೊಂಡಿತು. ಈ ಎಲ್ಲಾ ತಂಡಗಳಿಗೂ ಕ್ರಮವಾಗಿ ಟ್ರೋಫಿ ಜೊತೆಗೆ 15 ಸಾವಿರ, 10 ಸಾವಿರ ಮತ್ತು 5 ಸಾವಿರ ಬಹುಮಾನ ನೀಡಲಾಯಿತು.
ಅಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 14 ತಂಡಗಳಿಗೆ ತಲಾ 1,500 ಬಹುಮಾನ ನೀಡಲಾಯಿತು.
ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಬೆಂಗಳೂರಿನಿಂದ ಸುಮಾರು 70 ತಂಡಗಳು ಭಾಗವಹಿಸಿದ್ದವು. ಪ್ರತಿ ತಂಡದಲ್ಲೂ 5 ಮಂದಿ ಸ್ಪರ್ಧಿಗಳು ಇದ್ದರು. ಹೂ ಮತ್ತು ಎಲೆ ಬಳಸಿ ಪುಷ್ಪ ರಂಗೋಲಿ ಬಿಡಿಸಲು 2.30 ಗಂಟೆ ಅವಕಾಶ ನೀಡಲಾಗಿತ್ತು.
ತೀರ್ಪುಗಾರರಾಗಿ ಕಾವಾದ ಮಧು, ಮಂಜುನಾಥ್, ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಡಾ. ದೇವಿಪ್ರಸಾದ್ ಆಗಮಿಸಿದ್ದರು.