'ಕಾರಂಜಿ'ಯಲ್ಲಿ ಮತ್ತೆ ಅರಳಲಿದೆ ಹೂ
ಡಿ.ಎನ್. ಮಹೇಂದ್ರ
ಕ.ಪ್ರ.ವಾರ್ತೆ ಮೈಸೂರು ಅ. 21
ಮೈಸೂರಿನ ಕಾರಂಜಿ ಕೆರೆ ಇದುವರೆಗೆ ಕೇವಲ ದೋಣಿ ವಿಹಾರ ಮತ್ತು ಕೆಲವು ಜಾತಿಯ ಪಕ್ಷಿ ಸಂಕುಲಗಳ ವೀಕ್ಷಣೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಇನ್ನು ಮುಂದೆ ವಿವಿಧ ರೀತಿಯ ಹೊಸ ತಳಿಯ ಹೂವಿನ ಗಿಡಗಳು ಮತ್ತು ಹಣ್ಣಿನ ಗಿಡಗಳ ಪ್ರದರ್ಶನಕ್ಕೂ ತನ್ನನ್ನು ತಾನು ತೆರೆದುಕೊಳ್ಳಲಿದೆ.
ಕೆಲವು ವರ್ಷಗಳ ಹಿಂದೆ ದಸರಾ ಮಹೋತ್ಸವ ಸಂದರ್ಭದಲ್ಲಿ ಕಾರಂಜಿ ಕೆರೆ ಪುಷ್ಪೋದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿತ್ತು. ಆದರೆ ಆ ನಂತರದ ದಿನಗಳಲ್ಲಿ ಫಲಪುಷ್ಪ ಪ್ರದರ್ಶನ ನಿಲ್ಲಿಸಲಾಯಿತು. ಇತ್ತೀಚಿನ ಕೆಲವು ವರ್ಷಗಳಿಂದ ಕೇವಲ ದೋಣಿ ವಿಹಾರಕ್ಕೆ ಮಾತ್ರ ಕಾರಂಜಿ ಕೆರೆ ಬಳಸಿಕೊಳ್ಳಲಾಗುತ್ತಿತ್ತು.
ಕಳೆದ ಐದು ವರ್ಷಗಳಿಂದೀಚೆಗೆ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿರುವ ಕಾರಂಜಿ ಕೆರೆಯಲ್ಲಿ ಈಗ ಸಾರಸ್ ಸ್ಕ್ರೇನ್, ಹಲವು ಜಾತಿಯ ಪಕ್ಷಿಗಳು ಲಭ್ಯವಿದೆ. ಕಾರಂಜಿ ಕೆರೆಯಲ್ಲಿಯೆ ವಾಸಿಸುವ ಪಕ್ಷಿಗಳು ಮತ್ತು ವಲಸೆ ಬರುವ ಪಕ್ಷಿಗಳಿಗಾಗಿ ಕೃತಕ ಗೂಡುಗಳನ್ನು ನಿರ್ಮಿಸಲಾಗಿದೆ. ಸಂತಾನೋತ್ಪತ್ತಿಗೆ ಬರುವ ಪಕ್ಷಿಗಳು ಇಲ್ಲಿ ಮೊಟ್ಟೆ ಇಡಲು ಅನುಕೂಲ ಕಲ್ಪಿಸಲಾಗಿದೆ. ಆ ಮೂಲಕ ಅನೇಕ ಪಕ್ಷಿ ಸಂಕುಲಗಳ ಆವಾಸ ಸ್ಥಾನವಾಗಿ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿ ಹೆಚ್ಚು ಅಭಿವೃದ್ಧಿ ಹೊಂದತೊಡಗಿದೆ.
ಮುಂದಿನ ತಿಂಗಳು ಸಿದ್ಧ: ಇದಕ್ಕೆ ಪೂರಕ ಎಂಬಂತೆ ಈಗ ಪಕ್ಷಿ ಮನೆಯ ಎದುರು ಆರ್ಚಿಡ್ ಪ್ಲಾಂಟ್ ನಿರ್ಮಿಸಲಾಗಿದೆ. ಸುಮಾರು 20್ಢ30 ಅಡಿ ಅಳತೆಯ ಜಾಗದಲ್ಲಿ ಈ ಆರ್ಚಿಡ್ಸ್ ಪ್ಲಾಂಟ್ ನಿರ್ಮಿಸಿದ್ದು, ಮುಂದಿನ ತಿಂಗಳು ಸಾರ್ವಜನಿಕರ ಪ್ರದರ್ಶನಕ್ಕೆ ಸಿದ್ಧವಾಗಲಿದೆ. ಪ್ರಾಥಮಿಕ ಹಂತದಲ್ಲಿರುವ ಈ ಕೇಂದ್ರದಲ್ಲಿ ಎದುರು ಬದುರಾಗಿ ಕಬ್ಬಿಣದಿಂದ ನಿರ್ಮಿಸಿರುವ ಸ್ಟ್ಯಾಂಡ್ಗಳನ್ನು ಇಡಲಾಗಿದೆ. ರಾಜ್ಯದ ವಿವಿಧೆಡೆಗಳಿಂದ ಅಲಂಕಾರಿಕ ಗಿಡಗಳು ಮತ್ತು ಹಣ್ಣಿನ ಗಿಡಗಳನ್ನು ತಂದು ಇಲ್ಲಿ ಪ್ರದರ್ಶಿಸುವ ಉದ್ದೇಶ ಇದೆ. ಆಗ ಕೇವಲ ದೋಣಿ ವಿಹಾರ ಮತ್ತು ಪಕ್ಷಿ ವೀಕ್ಷಣೆಗೆ ಬರುತ್ತಿದ್ದ ಮಂದಿ ಮುಂದೆ ಆರ್ಚಿಡ್ ವೀಕ್ಷಣೆಗೆ ಬರುವ ಅವಕಾಶ ಇದೆ.
ಸ್ವಚ್ಛತೆಗೆ ಆದ್ಯತೆ: ಒಂದೂವರೆ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಈ ಆರ್ಚಿಡ್ ಪ್ಲಾಂಟ್ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲು ಇನ್ನೂ ಒಂದು ತಿಂಗಳು ಬೇಕಾಗುತ್ತದೆ. ಈಗಷ್ಟೆ ಆರಂಭಿಕ ಹಂತದಲ್ಲಿದೆ. ವಿವಿಧ ಆರ್ಚಿಡ್ ಗಿಡಗಳನ್ನು ಖರೀದಿಸಬೇಕಿದೆ ಎಂದು ಕಾರಂಜಿ ಕೆರೆ ಉಸ್ತುವಾರಿ ವಹಿಸಿಕೊಂಡಿರುವ ಆರ್ಎಫ್ಒ ಪ್ರಮೋದ್ಕುಮಾರ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಇತ್ತೀಚೆಗೆ ಕೆರೆ ಏರಿ ಮೇಲೆ ಮಕ್ಕಳ ಆಟಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಹಿಂದೆ ಕಬ್ಬಿಣಿದ ಜಾರುಬಂಡೆ ಮತ್ತಿತರ ವಸ್ತುಗಳು ಇದ್ದವು. ಆದರೆ ಈಗ ಪ್ಲಾಸ್ಟಿಕ್ ಮತ್ತು ಫೈಬರ್ನಿಂದ ಮಾಡಿದ ಆಟಿಗಳು ಅಲ್ಲಿ ಲಭ್ಯವಿದೆ. ಕುಡಿಯುವ ನೀರು, ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಆರ್ಚಿಡ್ ಪ್ಲಾಂಟ್ ಸೇರಿದಂತೆ ಅಗತ್ಯವಿರುವೆಡೆಯಲ್ಲಿ ಕೂರಲು ಕಲ್ಲು ಬೆಂಚು ಹಾಕಿಸಲಾಗಿದೆ.