ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಚುಂಚನಕಟ್ಟೆ ಕಾರ್ಖಾನೆ ಪುನಾರಂಭದ ಆಸೆಗೆ ತಣ್ಣೀರು

Srinivasa Murthy VN
Updated On : 22 Oct 2013, 12:24 pm

ಕುಪ್ಪೆ ಮಹದೇವಸ್ವಾಮಿ
ಕ.ಪ್ರ.ವಾರ್ತೆ ಕೆ.ಆರ್. ನಗರ ಅ.  21
ಜಿಲ್ಲೆಯವರೆ ಆದ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ನಂತರ, ಕಳೆದ 20 ತಿಂಗಳಿನಿಂದ ಸ್ಥಗಿತಗೊಂಡಿದ್ದ ಜಿಲ್ಲೆಯ ಏಕೈಕ ಸಹಕಾರ ಸಕ್ಕರೆ ಕಾರ್ಖಾನೆಯಾಗಿರುವ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಕಾರ್ಯ ಆರಂಭಿಸುತ್ತದೆ ಎಂಬ ಆಸೆ ಹೊತ್ತಿದ್ದ ಕಾರ್ಮಿಕರು ಮತ್ತು ರೈತರಿಗೆ ಸರ್ಕಾರ ತಣ್ಣೀರೆರಚಿದೆ.
ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ನಿರ್ದೇಶಕರು ಕಾರ್ಖಾನೆಯ ವಿಶೇಷಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗೆ ಆದೇಶ ನೀಡಿ, ಕಾರ್ಖಾನೆಯ ಎಲ್ಲ ಕಾರ್ಮಿಕರನ್ನು ಮುಂದಿನ ಆದೇಶದವರೆಗೆ ಲೇ ಆಫ್(ಅರ್ಧ ವೇತನ ಸಹಿತ ರಜೆ ನೀಡಿ) ಮಾಡಿ ಬಿಡುಗಡೆ ಮಾಡಬೇಕೆಂದು ಸೂಚಿಸಿದ್ದಾರೆ.
ಈ ಆದೇಶದ ಪ್ರಕಾರ ಜಿಲ್ಲಾಧಿಕಾರಿ ತಿಂಗಳಾಂತ್ಯದ ವೇಳೆಗೆ ಎಲ್ಲ ಕಾರ್ಮಿಕರನ್ನು ಸೇವೆಯಿಂದ ಬಿಡುಗಡೆ ಮಾಡುವ ಅಧಿಕಾರ ಹೊಂದಿದ್ದು, ಒಂದು ವರ್ಷದವರೆಗೆ ರಜೆ ನೀಡಬಹುದಾಗಿದೆ. ಸರ್ಕಾರದ ಆದೇಶದಿಂದ ಕಾರ್ಮಿಕರು ಕಂಗಾಲಾಗಿದ್ದು, ಕಳೆದ 5 ತಿಂಗಳಿನಿಂದ ಸಂಬಳವಿಲ್ಲದೆ ಪರದಾಡುತ್ತಿದ್ದವರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆಯಲ್ಲದೆ ಕಾರ್ಖಾನೆಯ ವ್ಯಾಪ್ತಿಯ ರೈತರು ಕಬ್ಬು ಬೆಳೆಯುವುದನ್ನೆ ಬಿಡುವ ಅನಿವಾರ್ಯತೆ ಎದುರಾಗಿದೆ.
ಯಕ್ಷಪ್ರಶ್ನೆ: ಕಾರ್ಖಾನೆಯ ಆರ್ಥಿಕ ಅಭಿವೃದ್ಧಿ ಮತ್ತು ಪುನಾರಂಭಕ್ಕೆ ಕ್ರಮ ಕೈಗೊಂಡು ರೈತರ ವಾರ್ಷಿಕ ಮಹಾಸಭೆ ಕರೆದು ನೂತನ ಆಡಳಿತ ಮಂಡಳಿಯ ಚುನಾವಣೆ ನಡೆಸಲು ಗಮನಹರಿಸುವಂತೆ ಕಳೆದ ತಿಂಗಳು ಆದೇಶಿಸಿದ್ದ ಸರ್ಕಾರ ಈಗ ಇದ್ದಕ್ಕಿದ್ದಂತೆ ಯು ಟರ್ನ್ ಹೊಡೆಯುತ್ತಿರುವುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ರಾಜ್ಯದಲ್ಲಿ ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಕೋಟ್ಯಂತರ ರು.ಗಳ ಆರ್ಥಿಕ ಸಹಕಾರ ನೀಡುವ ಸರ್ಕಾರ ಚುಂಚನಕಟ್ಟೆ ಕಾರ್ಖಾನೆ ವಿಚಾರದಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿರುವುದಕ್ಕೆ ರಾಜಕೀಯ ಕಾರಣ ಇರಬಹುದು ಎಂಬ ಅನುಮಾನ ಎಲ್ಲರನ್ನು ಕಾಡುತ್ತಿದ್ದು, ಇದಕ್ಕೆ ಉತ್ತರಿಸುವವರು ಇಲ್ಲವಾಗಿದ್ದಾರೆ.
ಈಗಾಗಲೇ ಸರ್ಕಾರದ ಆದೇಶದಂತೆ ಕಾರ್ಮಿಕರನ್ನು ಲೇ ಆಫ್ ಮಾಡಲು ಕ್ರಮ ಕೈಗೊಂಡು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದು, ಯಾವುದೇ ಕ್ಷಣದಲ್ಲಿ ಜಿಲ್ಲಾಧಿಕಾರಿ ಆದೇಶ ಹೊರಡಿಸಬಹುದು, ಇದರಿಂದ ಅಸಹಾಯಕರಾಗಿರುವ ಕಾರ್ಮಿಕರು ಆದೇಶ ರದ್ದುಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಶಾಸಕ ಸಾ.ರಾ. ಮಹೇಶ್ ಮತ್ತು ಸಂಸದ ಎಚ್. ವಿಶ್ವನಾಥ್ ಅವರಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement