ದೇಬೂರು ಹಾಲು ಉತ್ಪಾದಕರ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಅ. 21
ನಂಜನಗೂಡು ತಾಲೂಕು ದೇಬೂರು ಹಾಲು ಉತ್ಪಾದಕರ ಸಹಕಾರ ಸಂಘದವರು ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿರುವ ಸಹಕಾರ ಇಲಾಖೆ ಸಹಾಯಕ ಉಪ ನಿಬಂಧಕರ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.
ಸಂಘದ ಕಾರ್ಯದರ್ಶಿ ಶಿವಕುಮಾರ್ ಎಂಬವರು ಹಣ ದುರುಪಯೋಗ ಮಾಡಿದ್ದು, ಅವರನ್ನು ಕೆಲಸದಿಂದ ತೆಗೆದು ಹಾಕಿ, ಆ ಸ್ಥಾನಕ್ಕೆ ಪಂಕಜ ಎಂಬವರನ್ನು ನೇಮಿಸಿದ್ದು, ಸಂಘದ ಕಾರ್ಯ ಸುಗಮವಾಗಿ ನಡೆಯುತ್ತಿದೆ. ಹೀಗಿರುವಾಗ ಶಿವಕುಮಾರ್ ಮತ್ತೆ ಸಂಘದ ಕಾರ್ಯದರ್ಶಿಯಾಗಿ ಬರುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಯಾವುದೇ ಕಾರಣಕ್ಕೂ ಶಿವಕುಮಾರ್ ಸಂಘಕ್ಕೆ ಬರುವುದು ಬೇಡ ಎಂದು ಅವರು ಆಗ್ರಹಿಸಿದರು.
ಸಹಾಯಕ ಉಪ ನಿಬಂಧಕ ಎ.ಆರ್. ಗೋಪಾಲಯ್ಯ ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿ, ಸಂಘಕ್ಕೆ ಕಾರ್ಯದರ್ಶಿ ನೇಮಿಸಿಕೊಳ್ಳುವ ಹಾಗೂ ತೆಗೆದು ಹಾಕುವ ಅಧಿಕಾರ ಆಯಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿದೆ. ಈ ವಿಚಾರದಲ್ಲಿ ನಾವು ಏನು ಮಾಡಲು ಸಾಧ್ಯವಿಲ್ಲ. ಸಂಘದ ಹಣ ದುರುಪಯೋಗ ಆಗಿರುವ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದರು. ಸಂಘದ ಅಧ್ಯಕ್ಷ ಶಿವಣ್ಣ ನೇತೃತ್ವದಲ್ಲಿ 50 ಮಂದಿ ಹಾಲು ಉತ್ಪಾದಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಚದುರಂಗದಲ್ಲಿ ಗೆದ್ದ ಗಂಗಮ್ಮ
ಕ.ಪ್ರ.ವಾರ್ತೆ ಮೈಸೂರು ಅ. 21
ಬೆಂಗಳೂರಿನ ಪದವಿ ಪೂರ್ವ ಶಿಕ್ಷಣ ಇಲಾಖೆಯು ಚಾಮರಾಜನಗರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ನಗರದ ವಿಜಯವಿಠ್ಠಲ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಬಿ.ಎನ್. ಗಂಗಮ್ಮ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಅಂತಿಮ ಪಂದ್ಯದಲ್ಲಿ ಮಂಗಳೂರಿನ ಕೆ. ಮಹಿಮಾ ಅವರನ್ನು ಪರಾಭವಗೊಳಿಸುವುದರ ಮೂಲಕ 9ಕ್ಕೆ 8 ಅಂಕಗಳನ್ನು ಪಡೆದಿದ್ದಾರೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಅ.27ರಿಂದ 30ರವರೆಗೆ ನಡೆಯುವ ರಾಜ್ಯ ಮಟ್ಟದ 19 ವರ್ಷದೊಳಗಿನವರ ಚೆಸ್ ಪಂದ್ಯಾವಳಿಯಲ್ಲಿ ಅವರು ರಾಜ್ಯವನ್ನು ಪ್ರತಿನಿಧಿಸುವರು. ಇವರ ಸಾಧನೆಗೆ ವಿಜಯವಿಠ್ಠಲ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಹಾಗೂ ಬೋಧಕ ಮತ್ತು ಬೋಧಕೇತರ ವರ್ಗ ಅಭಿನಂದಿಸಿದೆ.