ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೈಸೂರಿನಲ್ಲಿ ಮಳೆ ಮುಂದುವರಿಕೆ

Srinivasa Murthy VN
Updated On : 22 Oct 2013, 12:26 pm

ಮೈಸೂರು: ನಗರದಲ್ಲಿ ಸೋಮವಾರ ಸಂಜೆ ಮಳೆ ಸುರಿಯಿತು. ಸಂಜೆ ಆರಂಭವಾದ ಮಳೆಯೂ ರಾತ್ರಿಯಾದರೂ ಮುಂದುವರೆದಿತ್ತು. ಮಳೆಯಿಂದಾಗಿ ಸಂಜೆಯ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ದತ್ತು ಸ್ವೀಕಾರ
ಮೈಸೂರು: ಮೈಸೂರು ಮೃಗಾಲಯ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ವಿವಿಧ ಪ್ರಾಣಿ ಹಾಗೂ ಪಕ್ಷಿಗಳನ್ನು ಸಾರ್ವಜನಿಕರು ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ ಎಂದು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ. ಬೆಂಗಳೂರಿನವರಾದ ಎನ್. ಪ್ರಕಾಶ್ ಎರಡು ಇಂಡಿಯನ್ ಕ್ರೋಬಾ ಹಾಗೂ ಒಂದು ನವಿಲು, ಎನ್.ಎಸ್. ಯೋಗೀಶ್ವರ್ ಅವರು ಏಷ್ಯಾಟಿಕ್ ಆನೆ, ಉಷಾ ಹರೀಂದ್ರ ಅವರು ಫಾಲೋ ಡೀರ್, ಮೈಸೂರಿನವರಾದ ಪಿ. ಸುರೇಶ್ ಅವರು ಹಿಮಾಲಯನ್ ಇಂಪಿಯನ್ ಫೆಸೆಂಟ್. ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸಂಸ್ಥೆಯು ಇಂಡಿಯನ್ ಬ್ಲಾಕ್ ಟಾರ್‌ಟಲ್ ಹಾಗೂ ಸೌಂದರ್ಯ ಪಿ. ರಾವ್ ಅವರು ಗಿಳಿ ದತ್ತು ಪಡೆದಿದ್ದಾರೆ. ಈ ಎಲ್ಲಾ ಪ್ರಾಣಿ ಪ್ರಿಯರಿಗೂ ಮೃಗಾಲಯದ ಪರವಾಗಿ ಅಭಿನಂದಿಸಿದ್ದಾರೆ.

ಬಿಜೆಪಿಗೆ  ನೇಮಕ
ಮೈಸೂರು: ಬಿಜೆಪಿ ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್‌ಕುಮಾರ್ ಅವರನ್ನು ನಗಾಧ್ಯಕ್ಷ ಇ. ಮಾರುತಿರಾವ್ ಪವಾರ್ ನೇಮಕ ಮಾಡಿದ್ದಾರೆ.

ತಪಾಸಣೆ ಶಿಬಿರ
ಮೈಸೂರು: ವಾಣಿವಿಲಾಸ ರಸ್ತೆಯಲ್ಲಿರುವ ಪ್ರೀತಿ ಕ್ಯಾನ್ಸರ್ ಸೆಂಟರ್‌ನಲ್ಲಿ ಅ.24ರಂದು ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದ್ದು, ಒಂದು ತಿಂಗಳಿಗೂ ಮೇಲ್ಪಟ್ಟು ವಾಸಿಯಾಗದ ಗಾಯ, ರಕ್ತಸ್ರಾವ, ಊತ, ಗಡಸುತನ, ನುಂಗುವಾಗಿನ ತೊಂದರೆ, ಗಂಟಲಲ್ಲಿ ಉರಿತ ಅಥವಾ ತಡೆತ, ಧ್ವನಿ ಬದಲಾವಣೆ ಇರುವ ರೋಗಿಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ದೂ. 0821- 4259259 ಸಂಪರ್ಕಿಸಬಹುದು.

ಡಿಕ್ಕಿ; ವೃದ್ಧೆ ಸಾವು
ಮೈಸೂರು: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ಸೋಮವಾರ ಮೃತಪಟ್ಟಿದ್ದಾರೆ. ಗಾಂಧಿನಗರ ನಿವಾಸಿ ಕಮಲಮ್ಮ(72) ಮೃತಪಟ್ಟವರು. ಇವರು ಸಂತ ಫಿಲೋಮಿನಾ ಚರ್ಚ್‌ನಲ್ಲಿ ಭಾನುವಾರ ಬೆಳಗ್ಗೆ ಪ್ರಾರ್ಥನೆ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಗುಡ್ ಶೆಪರ್ಡ್ ಶಾಲೆ ಬಳಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ದೇವರಾಜ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಆರ್.ಪಿ. ಅಶೋಕ್, ಎಸ್‌ಐ ಬಿ.ಜಿ. ಪ್ರಕಾಶ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿ ಸಾವು
ಮೈಸೂರು: ವಾಹನ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೂಟಗಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಹುಣಸೂರು ತಾಲೂಕು ಗಾವಡಗೆರೆ ಹೋಬಳಿ ಮಂಚಬಾಯನಹಳ್ಳಿ ನಿವಾಸಿ ಸ್ವಾಮಿನಾಯಕ ಎಂಬವರ ಪುತ್ರ ಲೋಕೇಶ್(30) ಮೃತಪಟ್ಟವರು. ಇವರು ಗಾರೆ ಕೆಲಸ ಮಾಡಿಕೊಂಡಿದ್ದು, ಹುಣಸೂರು ರಸ್ತೆಯಲ್ಲಿರುವ ಹೂಟಗಳ್ಳಿ ಜಿ.ಜಿ. ಬ್ಲಾಕ್ ಬಳಿ ಹೋಗುತ್ತಿದ್ದಾಗ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ವಿವಿ ಪುರಂ ಸಂಚಾರ ಠಾಣೆ ಎಸ್‌ಐ ಡಿ. ಯೋಗೇಶ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇಬ್ಬರ ನಾಪತ್ತೆ
ಮೈಸೂರು: ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಪುರುಷೋತ್ತಮ್ ಪಾಂಡೆ ಎಂಬವರ ಪತ್ನಿ ಶೀತಲ್ ಪಾಂಡೆ(39) ಹಾಗೂ ಪುತ್ರಿ ಅಹನ ಪಾಂಡೆ(8) ಬುಧವಾರದಿಂದ ನಾಪತ್ತೆಯಾಗಿದ್ದಾರೆ. ಶೀತಲ್ ಚಹರೆ- 5.1 ಅಡಿ ಎತ್ತರ, ದಪ್ಪನೆ ಮೈಕಟ್ಟು, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ. ಅಹನ ಚಹರೆ- 4.1 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ. ಇಬ್ಬರು ಹಿಂದಿ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418117, 317 ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.

ವಿಜ್ಞಾನ ಪದವೀಧರರ ಪರಿಗಣಿಸಿ
ಕ.ಪ್ರ.ವಾರ್ತೆ ಮೈಸೂರು ಅ. 21
ಮೈಸೂರು ವಿವಿಯಲ್ಲಿ ಪರಿಸರ ವಿಜ್ಞಾನ ಅಧ್ಯಯನ ವಿಭಾಗ ಆರಂಭವಾಗಿ 20 ವರ್ಷವಾಗಿದ್ದರೂ, ಈವರೆಗೆ ಪರಿಸರ ವಿಜ್ಞಾನ ಪದವೀಧರರನ್ನು ಯಾವುದೇ ಉದ್ಯೋಗಕ್ಕೆ ನೇಮಕಾತಿ ಮಾಡಿಲ್ಲ ಎಂದು ಮಾನಸಗಂಗೋತ್ರಿಯ ಪರಿಸರ ವಿಜ್ಞಾನ ಪದವೀಧರರ ಸಂಘ ಆರೋಪಿಸಿದೆ. ಈ ಸಂಬಂಧ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿರುವ ಸಂಘವು, ಪರಿಸರ ವಿಜ್ಞಾನ ವಿಷಯದಲ್ಲಿ ಪದವಿ, ಪಿಎಚ್.ಡಿ ಹಾಗೂ ಎನ್‌ಇಟಿ ಮತ್ತು ಎಸ್‌ಇಟಿ ಪದವಿ ಪಡೆದವವರ ವಯೋವುತಿ ಮೀರಿದ್ದು ಹಾಗೂ ಮೀರುತ್ತಿದ್ದು, ಇದರಿಂದ ಯಾವುದೇ ಸರ್ಕಾರಿ ಕೆಲಸಗಳನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಸಂಘದ ಅಧ್ಯಕ್ಷ ಡಾ. ಜೆ. ಮಹದೇವು ತಿಳಿಸಿದ್ದಾರೆ. ಪರಿಸರ ಅಧ್ಯಯನ ವಿಷಯ ಎಲ್ಲಾ ಕಾಲೇಜುಗಳಲ್ಲಿ ಕಡ್ಡಾಯ ಬೋಧನಾ ವಿಷಯವಾಗಿರುವುದರಿಂದ, ಕಾಲೇಜುಗಳಲ್ಲಿ ಪರಿಸರ ಅಧ್ಯಯನ ವಿಷಯ ಬೋಧಿಸಲು ಉಪನ್ಯಾಸಕರ ಹುದ್ದೆಗಳಿಗೆ ಪರಿಸರ ವಿಜ್ಞಾನ ಪದವೀಧರರನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
---
ಸುದ್ದಿ ಸಂಕ್ಷೇಪ
ಬ್ರೆಜಿಲ್‌ಗೆ ಪ್ರೊ. ಶಾಲಿನಿ ಅರಸ್
ಮೈಸೂರು: ಮೈಸೂರು ವಿವಿ ಇಂಟರ್‌ನ್ಯಾಷನಲ್ ಸ್ಕೂಲ್ ಆಫ್ ಇನ್ಫರ್ಮೇಷನ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕಿ ಪ್ರೊ. ಶಾಲಿನಿ ಅರಸ್ ಅವರು ಬ್ರೆಜಿಲ್‌ನ ಸೊ ಪೊಲೊದಲ್ಲಿ ಅ.22ರಿಂದ 25ರವರೆಗೆ ನಡೆಯುವ ವೈಜ್ಞಾನಿಕ ವಿದ್ಯುನ್ಮಾನ ಗ್ರಂಥಾಲಯ ಆನ್‌ಲೈನ್ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಲಿದ್ದಾರೆ.

ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ
ಮೈಸೂರು: ನಗರದ ರಾಮಸ್ವಾಮಿ ವೃತ್ತದ ಬಳಿಯಿರುವ ವಿದ್ಯಾಭವನದಲ್ಲಿ ಬ್ಯಾಂಕಿಂಗ್ ಪರೀಕ್ಷೆ ತರಬೇತಿ ನೀಡಲಿದೆ. ಮಾನಸಿಕ ಸಾಮರ್ಥ್ಯ, ಸಾಮಾನ್ಯ ಇಂಗ್ಲಿಷ್, ಬ್ಯಾಂಕಿಂಗ್, ಕ್ವಾಂಟಿಟೀಟಿವ್ ಆಪ್ಟಿಟೂಡ್ ಹಾಗೂ ಪ್ರಚಲಿತ ವಿದ್ಯಮಾನಗಳ ವಿಷಯಗಳ ಬಗ್ಗೆ ತರಗತಿಗಳು ನಡೆಯಲಿದೆ. ವಿವರಕ್ಕೆ ಡಾ. ಎ.ಎನ್. ಸೋಮಶೇಖರ್, ಮೊ. 94489 38469, ದೂ. 2481873 ಸಂಪರ್ಕಿಸಬಹುದು.

25ರಂದುಚಿತ್ರಕಲೆ ಸ್ಪರ್ಧೆ
ಮೈಸೂರು: ಮೈಸೂರು ವಿಜ್ಞಾನ ಪ್ರತಿಷ್ಠಾನ ಮತ್ತು ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದ ಸಂಯುಕ್ತಾಶ್ರಯದಲ್ಲಿ ಅ.25ರಂದು ವಸ್ತು ಸಂಗ್ರಹಾಲಯದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿದೆ. ಪರಿಸರ ಕಾಳಜಿ ಬೆಳೆಸುವ ನಿಟ್ಟಿನಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಟಾಕಿ ಸ್ಫೋಟಿಸುವುದರಿಂದ ಆಗುವ ದುಷ್ಪರಿಣಾಮಗಳು ಕುರಿತ ವಿಷಯ ಸೂಚಿಸಲಾಗಿದೆ. ಆಸಕ್ತರು ಮೊ. 98444 05284, 96119 68785 ಸಂಪರ್ಕಿಸಬಹುದು.

ಸಿಇಟಿ ತರಬೇತಿ
ಮೈಸೂರು: ಚಾಮರಾಜ ಮೊಹಲ್ಲಾದಲ್ಲಿರುವ ಜ್ಞಾನದೀಪ್ತಿ ಟ್ರಸ್ಟ್‌ನಲ್ಲಿ ಐಬಿಪಿಎಸ್, ರಾಷ್ಟ್ರಕೃತ ಬ್ಯಾಂಕುಗಳ ಪ್ರೊಬೇಷನರಿ ಮತ್ತು ಕ್ಲರ್ಕ್ ಹುದ್ದೆಗೆ ತರಬೇತಿ ನೀಡಲಿದ್ದು, ಆಸಕ್ತರು ಆ.25ರೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ಮೊ. 96860 72224 ಸಂಪರ್ಕಿಸಬಹುದು.

ಚಿಕಿತ್ಸಾಲಯಕ್ಕೆ ಶಂಕುಸ್ಥಾಪನೆ
ನಂಜನಗೂಡು: ಕಾರ್ಮಿಕರ ರಾಜ್ಯ ವಿಮಾ ನಿಗಮದ ವತಿಯಿಂದ ಅ.23ರ ಬೆಳಗ್ಗೆ 11ಕ್ಕೆ ವಿದ್ಯಾವರ್ಧಕ ಸಂಘದ ಪಕ್ಕದ ಮೈದಾನದಲ್ಲಿ ಇಎಸ್‌ಐ ಚಿಕಿತ್ಸಾಲಯ ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ನ ಶಂಕುಸ್ಥಾಪನೆಯನ್ನು ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಕೋಡಿಕುನ್ನಿಲ್ ಸುರೇಶ್ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅಧ್ಯಕ್ಷತೆ ವಹಿಸುವರು. ಕಾರ್ಮಿಕ ಖಾತೆ ಸಚಿವ ಪರಮೇಶ್ವರ ನಾಯ್ಕ, ಸಚಿವ ಯು.ಟಿ. ಖಾದರ್, ಸಂಸದ ಧ್ರುವನಾರಾಯಣ, ಜಿಪಂ ಅಧ್ಯಕ್ಷ ಮಹದೇವು ಭಾಗವಹಿಸುವರು.

ಭಾರಿ ಮಳೆಗೆ ಮನೆ ಕುಸಿತ
ನಂಜನಗೂಡು: ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ಮನೆಯೊಂದು ಕುಸಿದ ಘಟನೆ ಮಡುವಿನಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಗ್ರಾಮದ ಪುಟ್ಟಸ್ವಾಮಪ್ಪ ಎಂಬವರ ಮಗ ಬಸವಣ್ಣ ಎಂಬವರ ಮನೆಯ ಒಂದು ಭಾಗದ ಗೋಡೆ ಭಾರಿ ಮಳೆಯಿಂದಾಗಿ ಕುಸಿದು ಮರದ ಸಾಮಾಗ್ರಿಗಳು ನಾಶವಾಗಿ ಪಕ್ಕದಲ್ಲಿದ್ದ ಹಸುವಿಗೆ ಗಾಯವಾಗಿದೆ. ಮನೆಯ ಮಣ್ಣಿನ ಗೋಡೆ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಏಕಾಏಕಿ ಕುಸಿದು ಬಿದ್ದಿದೆ. ಸುದ್ದಿ ತಿಳಿದ ಹೆಡಿಯಾಲ ಗ್ರಾಪಂ ಅಧ್ಯಕ್ಷ ಜೆ. ನೇಮತ್ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ಮೋಹನ್ ನೇಮಕ
ಕೆ.ಆರ್. ನಗರ: ತಾಲೂಕು ಬಿಜೆಪಿ ಹಿದುಳಿದ ವರ್ಗಗಳ ಅಧ್ಯಕ್ಷರಾಗಿ ಮೋಹನ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ತಿಳಿಸಿದ್ದಾರೆ.

ಚುನಾವಣೆ ಸಭೆ
ಕೆ.ಆರ್. ನಗರ: ತೆರವಾಗಿರುವ ತಾಪಂ ಅಧ್ಯಕ್ಷ ಸ್ಥಾನಕ್ಕೆ ನ.11ರಂದು ಚುನಾವಣೆ ನಡೆಯಲಿದ್ದು, ಅಂದು ಮಧ್ಯಾಹ್ನ 12 ಗಂಟೆಗೆ ಹುಣಸೂರು ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಚುನಾವಣೆ ಸಭೆ ನಡೆಯಲಿದೆ.

ವಾಲ್ಮೀಕಿ ಜಯಂತಿ
ಹುಣಸೂರು: ತಾಲೂಕಿನ ಹನಗೋಡು ಹೋಬಳಿಯ ಬೀರತಮ್ಮನಹಳ್ಳಿ ಗ್ರಾಮದ ಯುವಕ ಸಂಘದವರು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶಾಲಾ ಆವರಣದಲ್ಲಿ ಗಿಡ ನೆಡುವುದರ ಮೂಲಕ ವಿಶಿಷ್ಟವಾಗಿ ಆಚರಿಸಿದರು. ಮಹರ್ಷಿ ವಾಲ್ಮೀಕಿಯವರ ಭಾವಚಿತ್ರವನ್ನು ಶೃಂಗರಿಸಿ ಎತ್ತಿನ ಗಾಡಿಯಲ್ಲಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಸಂಘದ ಎಲ್ಲಾ ಸದಸ್ಯರು ಗಿಡ ನೆಟ್ಟು, ವಾಲ್ಮೀಕಿಯವರಲ್ಲಿದ್ದ ಪರಿಸರ ಹಾಗೂ ಪ್ರಕೃತಿಯನ್ನು ಪ್ರೀತಿಸುವ ಭಾವನೆ ಎತ್ತಿಹಿಡಿದರು. ಗ್ರಾಪಂ ಸದಸ್ಯರಾದ ಲೋಕೇಶ್ ನಾಯ್ಕ, ರಾಜಪ್ಪ, ದೇವಮ್ಮ, ಮಂಜುಳ, ಸಂಘದ ಅಧ್ಯಕ್ಷ ರಾಜನಾಯ್ಕ, ಬಿ.ಸಿ. ನಟೇಶ್, ಮಾದೇಗೌಡ, ರವಿಕುಮಾರ್, ದೇವರಾಜ್ ನಾಯ್ಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement