ರೋಟರಿ ಪೂರ್ವ ಮಂಥನ ಉದ್ಯೋಗ ಮೇಳ
ಕ.ಪ್ರ.ವಾರ್ತೆ ಮೈಸೂರು ಅ. 21
ನಗರ ಹಾಗೂ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗಾಗಿ ರೋಟರಿ ಮೈಸೂರು ಪೂರ್ವ ಸಂಸ್ಥೆಯು ಪೂರ್ವ ಮಂಥನ ಉದ್ಯೋಗ ಮೇಳವನ್ನು ಏರ್ಪಡಿಸಿತ್ತು.
ಶಾರದ ವಿಷನ್ ಗುರುಕುಲ ಸಂಸ್ಥೆ ಸಹಭಾಗಿತ್ವದಲ್ಲಿ ಕುವೆಂಪುನಗರದ ಕಾವೇರಿ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಈ ಮೇಳದಲ್ಲಿ ಮೈಸೂರು, ಬೆಂಗಳೂರು ಹಾಗೂ ಚೆನ್ನೈನ ಸುಮಾರು 14 ಕಂಪನಿಗಳು ಭಾಗವಹಿಸಿದ್ದವು.
ಈ ಮೇಳದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ವಿವಿಧ ಪದವಿಗಳ ಸುಮಾರು 500 ಮಂದಿ ಯುವಕ ಹಾಗೂ ಯುವತಿಯರು ಸಂದರ್ಶನದಲ್ಲಿ ಭಾಗವಹಿಸಿದ್ದರು. ವಿಮಾ ಕಂಪನಿಗಳು, ತಂತ್ರಜ್ಞಾನ ಸಂಸ್ಥೆಗಳು, ವಾಣಿಜ್ಯ ಉದ್ಯಮ ಸೇರಿದಂತೆ ವಿವಿಧ ಸಂಸ್ಥೆಗಳು ಇದರಲ್ಲಿ ಪಾಲ್ಗೊಂಡು ತಮ್ಮ ಕಂಪನಿಗಳಿಗೆ ಅಗತ್ಯವಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡರು. ಸುಮಾರು 125ಕ್ಕೂ ಹೆಚ್ಚು ಮಂದಿ ವಿವಿಧ ಹುದ್ದೆಗಳಿಗೆ ಮೊದಲ ಹಂತದಲ್ಲಿ ಆಯ್ಕೆಯಾದರು.
ಟಾಫೆ ಬೆಂಗಳೂರು, ಆರಿಜನ್ ರೀಟೈಲ್ ಸ್ಟೋರ್, ವಿಶಲ್ ಎಂಟರ್‌ಪ್ರೈಸಸ್, ಫಸ್ಟ್ ಸೋರ್ಸ್ ಸಲ್ಯೂಷನ್, ಕಂಟ್ರಿ ಕ್ಲಬ್, ಐಸಿಐಸಿಐ, ಭಾರತೀಯ ಜೀವ ವಿಮಾ ನಿಗಮ, ಹಿಂದುಜಾ ಗ್ಲೋಬಲ್ ಸಲ್ಯೂಷನ್ ಹಾಗೂ ಮತ್ತಿತರ ಕಂಪನಿಗಳು ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಅಧ್ಯಕ್ಷ ಶ್ರೀನಿವಾಸ್ ದಾಸೇಗೌಡ, ಇದೇ ಮೊದಲ ಬಾರಿಗೆ ಸಂಸ್ಥೆಯ ವತಿಯಿಂದ ಈ ಮೇಳ ಹಮ್ಮಿಕೊಳ್ಳಲಾಗಿದ್ದು, ಮೈಸೂರಿನ ಸುತ್ತಮುತ್ತ ಇರುವ ನಿರುದ್ಯೋಗಿಗಳ ಅನುಕೂಲಕ್ಕಾಗಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಇನ್ನು ಮುಂದೆಯೂ ಇಂತಹ ಮೇಳ ನಡೆಸಲಾಗುವುದು ಎಂದರು.
ಕಾರ್ಯದರ್ಶಿ, ವಸಂತಕುಮಾರ್, ಶಾರದ ವಿಷನ್ ಗುರುಕುಲ ಸಂಸ್ಥೆ ಅಧ್ಯಕ್ಷ ವಿಶ್ವನಾಥ್, ಕಾರ್ಯನಿರ್ವಣಾಧಿಕಾರಿ ಶ್ರುತಿ ಇದ್ದರು.