'ಒಳ್ಳೆಯ ಪ್ರೇಕ್ಷಕರಿದ್ದರೆ ಒಳ್ಳೆಯ ನಾಟಕ ಸಾಧ್ಯ'
ಕ.ಪ್ರ.ವಾರ್ತೆ ಮೈಸೂರು ಅ. 22
ಒಳ್ಳೆ ವಿದ್ಯಾರ್ಥಿಗಳಿದ್ದರೆ ಒಳ್ಳೆಯ ಪಾಠ ಮಾಡಲು ಸಾಧ್ಯ. ಅದೇ ರೀತಿ ಒಳ್ಳೆಯ ಪ್ರೇಕ್ಷಕರಿದ್ದರೆ ಒಳ್ಳೆಯ ನಾಟಕ ಅಭಿನಯಿಸಲು ಸಾಧ್ಯ ಎಂದು ಹಿರಿಯ ನಟ ಲೋಹಿತಾಶ್ವ ಹೇಳಿದರು.
ರಂಗಾಯಣದ ಭೂಮಿಗೀತದಲ್ಲಿ ಮಂಗಳವಾರ ನಡೆದ ಬಿ.ವಿ. ಕಾರಂತ ಕಾಲೇಜು ಯುವರಂಗೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಟಕ ವ್ಯಕ್ತಿತ್ವ ರೂಪಿಸುತ್ತದೆ. ಅಭಿನಯವನ್ನು ಗಂಭೀರವಾಗಿ ತೆಗೆದುಕೊಂಡರೆ ವ್ಯಕ್ತಿತ್ವ ಬೆಳೆಸಿಕೊಳ್ಳಬಹುದು. ನಾಟಕ ಆಡಿಯೇ ನಾನು ಮನುಷ್ಯನಾಗಿದ್ದೇನೆ. ಇದನ್ನು ಯುವ ಕಲಾವಿದರು ಅರಿತುಕೊಳ್ಳಬೇಕು ಎಂದರು.
ಇತ್ತೀಚೆಗೆ ನಾನು ಮಾತನಾಡುವುದನ್ನು ನಿಲ್ಲಿಸಿದ್ದೇನೆ. ಎಲ್ಲಿಯೂ ಉಪನ್ಯಾಸ ಕೊಡಲು ಹೋಗುವುದಿಲ್ಲ. ಜನ್ನಿ ಅವರ ಮೇಲಿನ ಪ್ರೀತಿಯಿಂದ ರಂಗಾಯಣಕ್ಕೆ ಕುಟುಂಬ ಸಮೇತ ಬಂದೆ. ಬಿ.ವಿ. ಕಾರಂತರು ಕಟ್ಟಿ ಬೆಳೆಸಿದ ರಂಗಾಯಣಕ್ಕೆ ಬರುವುದಕ್ಕೆ ಖುಷಿಯಾಗುತ್ತದೆ. ಕಾರಂತರು ನಮ್ಮ ಮನೆಗೆ ಬಂದು ಹೋಳಿಗೆ ಊಟ ಮಾಡಿದ್ದು, ಅವರು ನನ್ನ ಧ್ವನಿಯನ್ನು ಗ್ರಹಿಸಿದ್ದು ನಾನು ಕಲಾವಿದನಾಗಲು ಸಾಧ್ಯವಾಯಿತು ಎಂದರು. ನಟ ಶರತ್ ಲೋಹಿತಾಶ್ವ, ರಂಗಾಯಣ ನಿರ್ದೇಶಕ ಎಚ್. ಜನಾರ್ದನ್, ಉಪನಿರ್ದೇಶಕ ಎಸ್.ಐ. ಭಾವಿಕಟ್ಟಿ, ಸಂಚಾಲಕಿ ಸರೋಜ ಹೆಗಡೆ ಇದ್ದರು.
ಜಿಲ್ಲಾ ಮಟ್ಟದ ಯುವಜನೋತ್ಸವ
ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಅ.31 ರಂದು ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಯುವಜನೋತ್ಸವ ಆಯೋಜಿಸಲಾಗಿದೆ. 15 ರಿಂದ 35 ವರ್ಷ ವಯೋವುತಿಯೊಳಗೆ ವಿದ್ಯಾರ್ಥಿಗಳು, ಯುವಕ- ಯುವತಿಯರು ಭಾಗವಹಿಸಬಹುದು. ಜತೆಗೆ ಯುವಕ ಸಂಘಗಳು, ಯುವತಿ ಮಂಡಳಿಗಳು ಹಾಗೂ ರಾಜೀವ್ ಗಾಂಧಿ ಯುವಶಕ್ತಿ ಸಂಘಗಳ ಪದಾಧಿಕಾರಿಗಳು ತಮ್ಮ ಪ್ರವೇಶ ಪತ್ರದೊಂದಿಗೆ ಅ.31ರ ಬೆಳಗ್ಗೆ 10ಕ್ಕೆ ಚಾಮುಂಡಿ ವಿಹಾರದಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಇಲಾಖೆಯ ಸಹಾಯಕ ನಿರ್ದೇಶಕ ತಿಳಿಸಿದ್ದಾರೆ.0821-2564179 ಸಂಪರ್ಕಿಸಿ.