ಕಸ್ತೂರಿ ರಂಗನ್ ವರದಿ ಸ್ವೀಕರಿಸದಂತೆ ಆಗ್ರಹ
ಕ.ಪ್ರ.ವಾರ್ತೆ ಮೈಸೂರು ಅ. 22
ಕೇಂದ್ರ ಪರಿಸರ ಅರಣ್ಯ ಇಲಾಖೆಯು ಪಶ್ಚಿಮ ಘಟ್ಟದ ಉಳಿವಿನ ಕುರಿತು ಪರಿಸರ ತಜ್ಞ ಮಾದವ ಗಾಡ್ಗಿಲ್ ವರದಿಯನ್ನು ಬದಿಗಿರಿಸಿ ಕಸ್ತೂರಿ ರಂಗನ್ ವರದಿಯನ್ನು ಸ್ವೀಕರಿಸಿರುವುದು ಇಡೀ ಪಶ್ಚಿಮ ಘಟ್ಟವನ್ನು ಕಾರ್ಪೊರೇಟ್ ಧಣಿಗಳಿಗೆ ಲೂಟಿ ಮಾಡಲು ಅವಕಾಶ ನೀಡಿದಂತೆ ಎಂದು ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಆರೋಪಿಸಿದೆ.
ಪಶ್ಚಿಮ ಘಟ್ಟದ ಉಳಿವು ಕುರಿತು ಅಧ್ಯಯನ ಮಾಡಿ ವರದಿ ಸಲ್ಲಿಸಲು 2010ರಲ್ಲಿ ಇದೇ ಕೇಂದ್ರ ಸರ್ಕಾರ ಗಾಡ್ಗಿಲ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಗುಜರಾತ್ನಿಂದ ಕೇರಳದವರೆಗೆ ಹಬ್ಬಿರುವ ಪಶ್ಚಿಮ ಘಟ್ಟದಲ್ಲಿ ಗಾಡ್ಗಿಲ್ ಅವರ ತಂಡ ಸುತ್ತಾಡಿ 1,40,000 ಚ. ಮೈಲಿಗಳನ್ನು ಸೂಕ್ಷ್ಮ ಪ್ರದೇಶವೆಂದು, ಇಲ್ಲಿ ಯಾವುದೇ ಗಣಿಗಾರಿಕೆಗೆ ಅವಕಾಶವಿಲ್ಲವೆಂದೂ, ಅತ್ಯಂತ ಜೀವ ವೈವಿಧ್ಯತೆಯಿಂದ ಕೂಡಿದ ಪ್ರದೇಶವೆಂದು ಘೋಷಿಸಿತು.
ಹೀಗಿರುವಾಗ ತಜ್ಞರಲ್ಲದ ಕಸ್ತೂರಿ ರಂಗನ್ 60 ಸಾವಿರ ಚದರ ಮೈಲಿಗಳನ್ನು ಮಾತ್ರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿದ್ದಾರೆ. ಇನ್ನುಳಿದ ಪ್ರದೇಶವನ್ನು ಅಭಿವೃದ್ಧಿಯ ನೆಪದಲ್ಲಿ ಲೂಟಿಗೆ ಪೂರಕವಾದಂತೆ ವರದಿ ಸಲ್ಲಿಸಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ನಡೆದಿದೆ ಎಂದು ಜಿಲ್ಲಾಧ್ಯಕ್ಷ ಕಂದೇಗಾಲ ಶ್ರೀನಿವಾಸ್ ಕಿಡಿಕಾರಿದ್ದಾರೆ.
ಆದ್ದರಿಂದ ದೇಶದ ಪ್ರತಿಯೊಬ್ಬ ನಾಗರಿಕನೂ ಈ ವರದಿ ಅನುಷ್ಠಾನ ಪ್ರಕ್ರಿಯೆಯನ್ನು ಖಂಡಿಸಬೇಕಿದೆ. ಬೆನ್ನು ಹುರಿಯನ್ನೇ ಕತ್ತರಿಸಿದಂತೆ ಇರುವ ಕಸ್ತೂರಿ ರಂಗನ್ ವರದಿಯನ್ನು ರದ್ದುಪಡಿಸಿ ಪರಿಸರ ತಜ್ಞ ಮಾದವ ಗಾಡ್ಗಿಲ್ ವರದಿ ಅನುಷ್ಠಾನಕ್ಕೆ ತರಲು ಎಲ್ಲರೂ ಹೋರಾಟ ನಡೆಸುವಂತೆ ಅವರು ಕರೆ ನೀಡಿದ್ದಾರೆ.