ಮತದಾನ ಮಾಡಿದರೆ ಕರ್ತವ್ಯ ಮುಗಿಯಲ್ಲ
ಕ.ಪ್ರ.ವಾರ್ತೆ ಮೈಸೂರು ಅ. 22
ಚುನಾವಣೆ ಮಹತ್ವ ಹಾಗೂ ಭಾಗವಹಿಸುವಿಕೆ ಕುರಿತು ವಿವೇಕಾನಂದ ಇನ್ಸ್ಟಿಟ್ಯೂಟ್ ಫಾರ್ ಲೀಡರ್ಶಿಪ್ ಡೆವಲೆಪ್ಮೆಂಟ್ ಆಯೋಜಿಸಿರುವ ಪ್ರಜಾಪ್ರಭುತ್ವ ಸಬಲೀಕರಣ ಅಭಿಯಾನಕ್ಕೆ ಹಿರಿಯ ಪತ್ರಕರ್ತ ಕೃಷ್ಣ ವಟ್ಟಂ ಮಂಗಳವಾರ ಚಾಲನೆ ನೀಡಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2014ನೇ ಸಾಲಿನ ಲೋಕಸಭಾ ಚುನಾವಣೆ ಮಹತ್ವದಾಗಿದ್ದು, 15 ಕೋಟಿ ಯುವಜನತೆ ಮೊದಲ ಬಾರಿಗೆ ಮತದಾನದ ಹಕ್ಕು ಪಡೆಯಲಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಪ್ರಜ್ಞೆ ಮೂಡಿಸುವಲ್ಲಿ ಈ ರೀತಿಯ ಅಭಿಯಾನ ದಿಕ್ಸೂಚಿಯಾಗಲಿದೆ ಎಂದರು.
ಕೇವಲ ಐದು ವರ್ಷಕ್ಕೊಮ್ಮೆ ಮತದಾನ ಮಾಡಿದರೆ ನಮ್ಮ ಕರ್ತವ್ಯ ಮುಗಿಯಲಿಲ್ಲ. ನಂತರ ನಾವು ಆಯ್ಕೆ ಮಾಡಿದವರು ಯಾವ ರೀತಿ ಆಡಳಿತ ನಡೆಸುತ್ತಾರೆ ಎಂಬುದು ಗಮನಿಸಬೇಕು. ಈ ದಿಸೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ಅವಶ್ಯಕ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯು ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಡೆಸಿದ ಅಭಿಯಾನದ ಮೇಕಿಂಗ್ ಡೆಮಾಕ್ರಸಿ ವರ್ಕ್ ಎಂಬ ಮಾಹಿತಿ ಪುಸ್ತಕವನ್ನು ಬಿಡುಗಡೆಗೊಳಿಸಿದ ಕೃಷ್ಣವಟ್ಟಂ, ಸಂಸ್ಥೆಯ ಅಂತರ್ಜಾಲ ತಾಣವನ್ನು ಅನಾವರಣಗೊಳಿಸಿದರು.ಸ್ವಾಮಿ ವಿವೇಕಾನಂದ ಯೂತ್ಮೂವಮೆಂಟ್ ಸ್ಥಾಪಕ ಅಧ್ಯಕ್ಷ ಡಾ.ಆರ್. ಬಾಲಸುಬ್ರಹ್ಮಣ್ಯಂ ಮಾತನಾಡಿ, ಪ್ರಜಾಪ್ರಭುತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳನ್ನು ಅಭಿಯಾನದಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಯುವ ಮತ್ತು ಹೊಸ ಮತದಾರರ ನೋಂದಣಿಗೆ ಹಾಗೂ ಮತ ಚಲಾಯಿಸಲು ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶ ಎಂದರು.
ಮೈಸೂರು ಕೊಡಗು ವ್ಯಾಪ್ತಿಯ ಲೋಕಸಭಾ ಚುನಾವಣೆಗಾಗಿ ಈ ಅಭಿಯಾನ ಕೈಗೊಂಡಿದ್ದು, ಉತ್ತಮ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆಯನ್ನು ತಯಾರಿಸಿ ಸಂಘ ಸಂಸ್ಥೆಗಳಿಗೆ, ಮಹಿಳಾ ಸಂಘಗಳಿಗೆ ನೀಡಲಾಗುವುದು. ಜಾಥಾ, ಬೀದಿ ನಾಟಕ ಹಾಗೂ ಹಳ್ಳಿಗಳ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗುವುದು. ಇನ್ಫೋಸಿಸ್ನ ಸುಮಾರು 600 ಮಂದಿ ಸ್ವಯಂಸೇವಕರಾಗಿ ಭಾಗವಹಿಸುವರು ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ವೆಚ್ಚವನ್ನು ಚುನಾವಣಾ ಆಯೋಗ 16 ಲಕ್ಷಕ್ಕೆ ಮಿತಿಗೊಳಿಸಿದೆ. ಆದರೆ ಒಂದು ಕ್ಷೇತ್ರದ ಚುನಾವಣೆ ಕಾರ್ಯಕ್ಕೆ ಅದೇ ಆಯೋಗ 18 ರಿಂದ 22 ಲಕ್ಷ ಖರ್ಚು ಮಾಡಲಿದೆ. ಕೇವಲ 16 ಲಕ್ಷ ವೆಚ್ಚದಲ್ಲಿ ಇಂದು ಚುನಾವಣೆ ಎದುರಿಸಲು ಸಾಧ್ಯವಿಲ್ಲ ಎಂಬುದು ಸತ್ಯ ಸಂಗತಿ. ಹಾಗೆಯೇ ಚುನಾವಣೆಯಲ್ಲಿ ಆಯೋಗ ಮಿತಿಗೊಳಿಸಿರುವಷ್ಟೆ ಹಣ ಖರ್ಚು ಮಾಡಿ ಗೆದ್ದವರಿದ್ದಾರೆ ಎಂಬುದು ನಂಬದ ಸಂಗತಿ.
ಡಾ. ಆರ್. ಬಾಲಸುಬ್ರಹ್ಮಣ್ಯಂ, ಸ್ಥಾಪಕ ಅಧ್ಯಕ್ಷ, ಸ್ವಾಮಿ ವಿವೇಕಾನಂದ ಯೂತ್ಮೂವ್ಮೆಂಟ್