ವಸ್ತು ಪ್ರದರ್ಶನದಲ್ಲಿ ಜಿಪಂ ಮಳಿಗೆ ಉದ್ಘಾಟನೆ
ಕ.ಪ್ರ.ವಾರ್ತೆ ಮೈಸೂರು ಅ. 22
ಮೈಸೂರು ಜಿಲ್ಲಾ ಪಂಚಾಯಿತಿ ನಿರ್ಮಿಸಿರುವ ಪ್ರಜಾಪ್ರತಿ ನಿಧಿ ಸಭೆ ಮಾದರಿಯ ಮಳಿಗೆಯನ್ನು ವಸ್ತು ಪ್ರದರ್ಶನ ಆವರಣದಲ್ಲಿ ಮಂಗಳವಾರ ಉದ್ಘಾಟಿಸಲಾಯಿತು.
ಮೈಸೂರು ಅರಮನೆಗೆ 101 ವರ್ಷ ತುಂಬಿದ ನೆನಪಿಗಾಗಿ ಮಳಿಗೆಯ ಮುಖ್ಯ ದ್ವಾರವನ್ನು ಅರಮನೆ ಮಾದರಿಯಲ್ಲಿ ರೂಪಿಸಲಾಗಿದೆ. ದ್ವಾರದ ಮುಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ, ಪಕ್ಕದಲ್ಲಿ ಎರಡು ಆನೆಗಳು ಮತ್ತು ಹಸು ಇರಿಸಲಾಗಿದೆ. ಮಳಿಗೆ ಒಳಗೆ ದರ್ಬಾರ್ ಮಾದರಿಯಲ್ಲಿ ಮಂಟಪ ನಿರ್ಮಿಸಿ ಸಿಂಹಾಸನಾರೂಢರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೇಶದಲ್ಲಿಯೇ ಮೊದಲ ಬಾರಿ ಜಾರಿಗೆ ತಂದ ಪ್ರಜಾಪ್ರತಿನಿಧಿ ಸಭೆ ನಡೆಸುತ್ತಿರುವಂತೆಯೂ, ಅವರ ಮುಂದೆ ದಿವಾನರು ಮತ್ತು ಪ್ರಜಾಪ್ರತಿನಿಧಿಗಳು ಕುಳಿತಿರುವಂತೆ ರೂಪಿಸಲಾಗಿದೆ.
ಫೈಬರ್ನಿಂದ ನಿರ್ಮಿಸಿರುವ ಮಂಟಪದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯೂ ಫೈಬರ್ನಿಂದಲೆ ಮಾಡಲಾಗಿದೆ. ಉಳಿದಂತೆ ಪ್ರಜಾಪ್ರತಿನಿಧಿಗಳನ್ನು ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ನಿರ್ಮಿಸಲಾಗಿದೆ. ಮಳಿಗೆಯ ಗೋಡೆಗಳಲ್ಲಿ ನಾಲ್ವಡಿ ಅವರು ಸ್ಥಾಪಿಸಿದ ಉಕ್ಕಿನ ಕಾರ್ಖಾನೆ, ಚಿನ್ನದ ಗಣಿ, ಕೆ.ಆರ್. ಆಸ್ಪತ್ರೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಬಾಲಕ ನಾಲ್ವಡಿ ಅವರ ಭಾವಚಿತ್ರ, ಕನ್ನಡ ಸಾಹಿತ್ಯ ಪರಿಷತ್ತು, ಕೆಆರ್ಎಸ್ ಅಣೆಕಟ್ಟು, ಮೈಸೂರು ವಿವಿಯ ಕಾರ್ಯಸೌಧ ಮತ್ತು ನಾಲ್ವಡಿ ಅವರು ಪತ್ನಿ ಸಮೇತರಾಗಿ ನಿಂತಿರುವ ಭಾವಚಿತ್ರ ಪ್ರದರ್ಶಿಸಲಾಗಿದೆ.
ಇದರ ಹಿಂಭಾಗದಲ್ಲಿ ಕೂರ್ಗಳ್ಳಿ ಗ್ರಾಮ ರೂಪಿಸಲಾಗಿದೆ.
ಮಾದರಿ ಗ್ರಾಮಗಳ ನಿರ್ಲಕ್ಷ್ಯ: ಮೈಸೂರು ಜಿಲ್ಲೆ ಮತ್ತು ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಅನುದಾನ ಪಡೆದು ಮಾದರಿ ಗ್ರಾಮವಾಗಿ ರೂಪುಗೊಂಡು ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದ ಅನೇಕ ಗ್ರಾಮಗಳಿವೆ. ಈ ಪೈಕಿ ತಾಲೂಕಿನ ಬೋಗಾದಿ, ಹಿನಕಲ್, ಧನಗಳ್ಳಿ ಪ್ರಮುಖವಾದದ್ದು, ಅಲ್ಲದೆ ಈ ಸಾಲಿನಲ್ಲಿ ಪ್ರಶಸ್ತಿಗೆ ಶಿಫಾರಸು ಪಡೆದ ಗ್ರಾಮಗಳಲ್ಲಿ ಚಾಮುಂಡಿಬೆಟ್ಟ ಗ್ರಾಪಂ ಮತ್ತು ಬೆಳವಾಡಿ ಸೇರಿದಂತೆ 18 ಗ್ರಾಪಂ ಇದೆ. ಈ ಎರಡೂ ಪಟ್ಟಿಯಲ್ಲಿ ಕೂರ್ಗಳ್ಳಿ ಹೆಸರು ಇಲ್ಲ.
ಈ ಮಳಿಗೆಯನ್ನು ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವು ಉದ್ಘಾಟಿಸಿದರು. ಉಪಾಧ್ಯಕ್ಷೆ ಎಸ್. ಭ್ರಮರಾಂಬ, ಸದಸ್ಯರಾದ ಸಿ.ಜೆ.ದ್ವಾರಕೀಶ್, ಎಂ.ಬಿ. ಸಿದ್ದೇಗೌಡ, ರೇಣುಕಾ, ಮಾದಪ್ಪ, ಜವರೇಗೌಡ, ಚಿಕ್ಕಣ್ಣೇಗೌಡ, ಸಿಇಒ ಪಿ.ಎ. ಗೋಪಾಲ್, ಯೋಜನಾ ನಿರ್ದೇಶಕಿ ವಸುಂದರಾದೇವಿ, ಎನ್.ಆರ್. ವಿಜಯ್ ಇದ್ದರು.
ನಿರ್ಮಾಣ ವಿವರ
ಮೈಸೂರಿನ ಕಲಾವಿದ ಆನಂದಮೂರ್ತಿ ಈ ಮಳಿಗೆ ನಿರ್ಮಿಸಿದ್ದಾರೆ. ಸುಮಾರು 7.50 ಲಕ್ಷ ವೆಚ್ಚದಲ್ಲಿ ಈ ಮಳಿಗೆ ನಿರ್ಮಿಸಿದ್ದು, 1 ತಿಂಗಳ ಕಾಲ ಸುಮಾರು 30 ಮಂದಿ ನೌಕರರು ಶ್ರಮಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತ 10 ನಿಮಿಷಗಳ ಸಾಕ್ಷ್ಯಚಿತ್ರ ಪ್ರದರ್ಶಿಸುವ ಉದ್ದೇಶ ಇತ್ತು. ಆದರೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸಮಸ್ಯೆಯಾಗಿದೆ. ನಾಳೆಯಿಂದ ಈ ಸಾಕ್ಷ್ಯಚಿತ್ರ ಪ್ರದರ್ಶಿಸುವುದಾಗಿ ಡಿ. ಆನಂದಮೂರ್ತಿ ತಿಳಿಸಿದರು.