ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಾಲಕಿ, ಯುವಕ ನಾಪತ್ತೆ

Srinivasa Murthy VN
Updated On : 23 Oct 2013, 11:56 am

ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಬಾಲಕಿ ಮತ್ತು ಯುವಕ ನಾಪತ್ತೆಯಾಗಿದ್ದಾರೆ. ನಾಚನಹಳ್ಳಿಪಾಳ್ಯ ನಿವಾಸಿ ಷಷಿವುಲ್ಲಾ ಎಂಬವರ ಪುತ್ರಿ ಎಸ್. ಹಾಜಿರಾಬಿ (17) ಸೋಮವಾರದಿಂದ ನಾಪತ್ತೆಯಾಗಿದ್ದಾರೆ. ಚಹರೆ- 5 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ಕನ್ನಡ ಮತ್ತು ಉರ್ದು ಮಾತನಾಡುತ್ತಾರೆ. ಎಡಗಣ್ಣಿನ ಹತ್ತಿರ ಕಪ್ಪು ಮಚ್ಚೆ ಇದೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418322, 522 ಸಂಪರ್ಕಿಸಲು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಕೋರಿದ್ದಾರೆ. ಉದಯಗಿರಿ ಠಾಣೆ ವ್ಯಾಪ್ತಿಯ ನಿವಾಸಿ ಸೈಯದ್ ಟಿಪ್ಪು ಸುಲ್ತಾನ್ ಎಂಬವರ ಪುತ್ರ ಸೈಯದ್ ಜಾಕೀರ್ (22) ಸೋಮವಾರ ಬಟ್ಟೆ ಐರನ್ ಮಾಡಿಸಲು ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 5.5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಹಿಂದಿ, ಮರಾಠಿ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.0821- 2418309, 509 ಸಂಪರ್ಕಿಸಬಹುದು.

ಹಾಸ್ಟೆಲ್‌ನಲ್ಲಿ ಸಿಲಿಂಡರ್ ಕದ್ದವರ ಸೆರೆ
ಸಾಲಿಗ್ರಾಮ
: ವಿದ್ಯಾರ್ಥಿನಿಲಯದಲ್ಲಿ ಸಿಲಿಂಡರ್ ಕದ್ದ ಭೂಪರು ಪೊಲೀಸರ ಬಲೆಗೆ ಬಿದ್ದು, ನ್ಯಾಯಾಂಗ ಬಂಧನಕ್ಕೆ ಒಳಗಾದ ಘಟನೆ ಜರುಗಿದೆ. ಸಾಲಿಗ್ರಾಮದ ಉಮೇಶ್ ಅ. ಕೃಷ್ಣ ಮತ್ತು ಮಹೇಂದ್ರ ಅ. ಮಾಯಿ ಬಂಧಿತ ಆರೋಪಿಗಳು. ಇಬ್ಬರು ಆರೋಪಿಗಳು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೇರಳಾಪುರ ಗ್ರಾಮದಲ್ಲಿದ್ದ ಇವರನ್ನು ಮಾಹಿತಿ ದೊರೆತ ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ಅವರನ್ನು ಬಂಧಿಸಿ, ವಿಚಾರಣೆ ನಡೆಸಿದರು. ನಂತರ ಸಿಲಿಂಡರ್‌ಗಳು ಮತ್ತು ಕಂಪ್ಯೂಟರ್ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.
ಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಅ.20ರ ರಾತ್ರಿ ಆರು ಸಿಲಿಂಡರ್‌ಗಳು ಹಾಗೂ ಕಂಪ್ಯೂಟರ್ ಕಳವು ಆಗಿತ್ತು. ಈ ಸಂಬಂಧ ಹಾಸ್ಟೆಲ್ ವಾರ್ಡನ್ ಸಿದ್ದರಾಜು, ಪೊಲೀಸರಿಗೆ ದೂರು ನೀಡಿದ್ದರು. ಸರ್ಕಲ್ ಇನ್‌ಸ್ಪೆಕ್ಟರ್ ಸಿದ್ದಯ್ಯ ಮತ್ತು ಎಸ್‌ಐ ಮಹೇಶ್ ನೇತೃತ್ವದಲ್ಲಿ  ಕಳ್ಳರನ್ನು ಬಂಧಿಸಿದ್ದಾರೆ. ಈ ಪ್ರಕರಣದೊಂದಿಗೆ ಮತ್ತೊಂದು ಕಳ್ಳತನದ ಪ್ರಕರಣ ಬಯಲಾಗಿದೆ. ಸೆ.9 ರಂದು ಕೆ.ಆರ್. ನಗರ ತಾಲೂಕಿನ ಚಿಕ್ಕವಡ್ಡರಗುಡಿ ಗ್ರಾಮದಲ್ಲಿ ಉಮೇಶ್ ಅ. ಕೃಷ್ಣ ಬೈಕ್ ಕಳ್ಳತನ ಮಾಡಿರುವುದು ಹೊರಬಿದ್ದಿದೆ.

ಪಿಡಿಒ ಸರ್ವಾಧಿಕಾರಿ ವರ್ತನೆ ಆರೋಪ
ಹುಣಸೂರು:
ತಾಲೂಕಿನ ಗಾವಡಗೆರೆಯ ಗ್ರಾಪಂ ಪಿಡಿಒ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಸದಸ್ಯರು ಎರಡು ಬಾರಿ ನಡೆದಿರುವ ಸಾಮಾನ್ಯ ಸಭೆ ಬಹಿಷ್ಕರಿಸಿದ್ದಾರೆ. ಪಿಡಿಒ ನಾಗಮ್ಮ ಅವರು ಸಭೆಯ ನಿರ್ಣಯ ಗೌರವಿಸುವುದಿಲ್ಲ. ಸಭೆಯ ಗಮನಕ್ಕೆ ತಾರದೆ ನೌಕರರ ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ನೀಡಿರುವ ಅರ್ಜಿಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ. ವಿವಿಧ ವಸತಿ ಯೋಜನೆಯಡಿ ಮಂಜೂರಾಗಿರುವ ಮನೆಗಳ ಫಲಾನುಭವಿಗಳ ಆಯ್ಕೆ ಪಟ್ಟಿ ತಯಾರಿಸುವ ಸಲುವಾಗಿ ನಡೆಯಬೇಕಿದ್ದ ವಿಶೇಷ ಸಭೆ ಸಹ ನೆನೆಗುದಿಗೆ ಬಿದ್ದಿದೆ. ಗ್ರಾಪಂ ಅಧ್ಯಕ್ಷರು ಸದಸ್ಯರ ಮಾತಿಗೆ ಮನ್ನಣೆ ನೀಡುತ್ತಿಲ್ಲ. ಇವರ ಅವಧಿಯಲ್ಲಿ ಕೆಲಸಗಳು ಕುಂಠಿತವಾಗಿದ್ದು ಜನರಿಂದ ಬೈಸಿಕೊಳ್ಳುವಂತಾಗಿದೆ. ಇವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಜಿಪಂ ಸಿಇಒ, ಜಿಲ್ಲಾಧಿಕಾರಿ ಹಾಗೂ ತಾಪಂಗೆ ಮನವಿ ನೀಡಲಾಗಿದೆ ಎಂದು ಅಧ್ಯಕ್ಷೆ ಸೀತಮ್ಮ ತಿಳಿಸಿದ್ದಾರೆ.

ನಾಳೆ ಪ್ರಶಸ್ತಿ ಪ್ರದಾನ
ಮೈಸೂರು: ಭಾರತೀಯ ಗ್ರಾಮೀಣ ಶೈಕ್ಷಣಿಕ ಅಭಿವೃದ್ಧಿ ಹಾಗೂ ಅವಿಷ್ಕಾರಿ ತಂತ್ರಜ್ಞಾನ ಕೇಂದ್ರ (ಕ್ರೆಡಿಟ್-ಐ) ಸಂಸ್ಥೆಯ 7ನೇ ವರ್ಷದ ಸಂಭ್ರಮಾಚರಣೆ ಹಾಗೂ ಕರ್ನಾಟಕದ ಕಣ್ಮಣಿ ರಾಜ್ಯ ಪ್ರಶಸ್ತಿ ವಿತರಣಾ ಸಮಾರಂಭವು ಅ.25ರ ಸಂಜೆ 5.30ಕ್ಕೆ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ನಡೆಯಲಿದ್ದು, ಶಾಸಕ ಎಂ.ಕೆ. ಸೋಮಶೇಖರ್ ಉದ್ಘಾಟಿಸುವರು.

ಕಾರ್ಯಾಗಾರ

ಚಾಮರಾಜಪುರಂ ರೇಲ್ವೆ ಗೇಟ್ ಬಳಿ ಇರುವ ಅನರ್ಘ್ಯ ಐಎಎಸ್ ಅಕಾಡೆಮಿಯಲ್ಲಿ ಅ.25ರ ಸಂಜೆ 4ಕ್ಕೆ ಕನ್ನಡ ಸಾಹಿತ್ಯ ಮತ್ತು ಸಾಮಾನ್ಯ ಅಧ್ಯಯನ ಬಗ್ಗೆ ವಿಶೇಷ ಮಾರ್ಗದರ್ಶನ ಮತ್ತು ಕಾರ್ಯಾಗಾರ ಏರ್ಪಡಿಸಿದ್ದು, ಮೊ. 99166 08300 ಸಂಪರ್ಕಿಸಬಹುದು.

ಉಪನ್ಯಾಸ
ಯಾದವಗಿರಿಯ ಶ್ರೀರಾಮಕೃಷ್ಣ ಆಶ್ರಮದಲ್ಲಿ ಅ.26ರ ಸಂಜೆ 6ಕ್ಕೆ ಸ್ವಾಮಿ ನಿತ್ಯೆಶಾನಂದಜಿ ಅವರಿಂದ ವಿವೇಕಾ ಚೂಡಾಮಣಿ, ಅ.27ರ ಸಂಜೆ 6ಕ್ಕೆ ಸ್ವಾಮಿ ವೀರೇಶಾನಂದಜಿ ಅವರು ಶ್ರೀಮದ್ಭಾಗವತ-ದಸಮಸ್ಕಂದ ಹಾಗೂ ಅ. 29ರ ಸಂಜೆ 6ಕ್ಕೆ ಸ್ವಾಮಿ ವೀರೇಶಾನಂದಜಿ ಅವರು ಮಾಂಡೊಕ್ಯೋಪನಿಷತ್ ವಿಷಯದ ಬಗ್ಗೆ ಉಪನ್ಯಾಸ ನೀಡುವರು.

ಪೂರ್ವಭಾವಿ ಸಭೆ
ಸಿದ್ದಾರ್ಥನಗರದ ಸಂತ ಶ್ರೀ ಕನಕದಾಸರ ಜಯಂತ್ಯುತ್ಸವ ಸಮಿತಿ ವತಿಯಿಂದ ಅ.26ರ ಸಂಜೆ 4.30ಕ್ಕೆ 526ನೇ ಜಯಂತ್ಯುತ್ಸವ ಆಚರಣೆ ಸಂಬಂಧವಾಗಿ ಪೂರ್ವಭಾವಿ ಸಭೆ ನಡೆಯಲಿದೆ. ಶಾಸಕ ಎಂ.ಕೆ. ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಸಮಿತಿಯ ಎಲ್ಲಾ ಸದಸ್ಯರು, ಮುಖಂಡ ಹಾಗೂ ಚುನಾಯಿತ ಪ್ರತಿನಿಧಿಗಳು ಭಾಗವಹಿಸುವಂತೆ ಪ್ರಧಾನ ಕಾರ್ಯದರ್ಶಿ ಎಂ. ಪುಟ್ಟಸ್ವಾಮಿ ಕೋರಿದ್ದಾರೆ.

ಪದಗ್ರಹಣ ಸಮಾರಂಭ
ಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್ ವತಿಯಿಂದ ಅ.26ರ ಸಂಜೆ 7.30ಕ್ಕೆ ಯಾದವಗಿರಿಯ ಹೊಟೇಲ್ ದಾಸಪ್ರಕಾಶ್ ಪ್ಯಾರಡೈಸ್‌ನಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪ್ರೊ.ಟಿ.ಜೆ. ರಾಮಮೂರ್ತಿ ಎಂ. ಅನಿಲ್‌ಕುಮಾರ್ ಭಾಗವಹಿಸುವರು. ಎಂ.ಎಸ್.ಎಸ್. ಪ್ರಸಾದ್ ಅಧ್ಯಕ್ಷತೆ ವಹಿಸುವರು.

ತಪಾಸಣೆ ಶಿಬಿರ
ಸೃಷ್ಟಿ ಕಿಡ್ನಿ ಮತ್ತು ಡಯಾಲಿಸಿಸ್ ಸೆಂಟರ್‌ನಲ್ಲಿ ಅ.29ರ ಬೆಳಗ್ಗೆ 7 ರಿಂದ ಮಧ್ಯಾಹ್ನ 2ರವರೆಗೆ ಕಿಡ್ನಿ, ರಕ್ತ ಪರೀಕ್ಷೆ, ರಕ್ತದೊತ್ತಡ ತಪಾಸಣೆ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಡಾ.ಎಲ್. ವಿಜಯಕುಮಾರ್, ದೂ. 4258285, ಮೊ. 9972616063 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement