ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲೋಕಾಯುಕ್ತ ಪೊಲೀಸರಿಗೆ ದೂರುಗಳ ಮಹಾಪೂರ

Srinivasa Murthy VN
Updated On : 23 Oct 2013, 11:51 am

ಕೆ.ಆರ್. ನಗರ: ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡುವಾಗ ಅಗತ್ಯ ದಾಖಲೆ ಮತ್ತು ಸಾಕ್ಷ್ಯಗಳ ಸಹಿತ ಸಲ್ಲಿಸಿದ್ದರೆ ಅಂತಹ ದೂರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಲೋಕಾಯುಕ್ತ ಡಿವೈಎಸ್‌ಪಿ ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ಆರು ದೂರುಗಳು ಬಂದಿದ್ದು ಇವುಗಳಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ದೂರುಗಳೆ ಹೆಚ್ಚಿವೆ. ಕಳೆದ ಬಾರಿ ಐದು ದೂರುಗಳು ಬಂದಿದ್ದವು. ಅವುಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಿ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ತಾಲೂಕಿನ ಚಿಕ್ಕಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೆ.ಎಸ್. ನಾಗರಾಜು ದೂರು ನೀಡಿ, ಬಿಇಒ ಕಚೇರಿಯಲ್ಲಿ 2012 ರಲ್ಲಿ ಆರೋಗ್ಯ ಶುಲ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದು, ಗುಮಾಸ್ತ ನಟೇಶ ಎಂಬವರು 2012-13ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲಾ ಶಿಕ್ಷಕರಿಗೂ ಬಿಲ್ ಪಾವತಿಸಿದ್ದು, ಉದ್ದೇಶ ಪೂರ್ವಕವಾಗಿ ನನ್ನ ಬಿಲ್ಲನ್ನು ತಡೆ ಹಿಡಿದಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡು ತಡೆ ಹಿಡಿದಿರುವ ಬಿಲ್ ಮಾಡಿಸಿಕೊಡಬೇಕೆಂದು ಕೋರಿದ್ದಾರೆ.
ಜತೆಗೆ ನಾಗೇಶ್ ಅವರು 2009-10 ಮತ್ತು 2010-11 ಸಾಲಿನಲ್ಲಿ ನನ್ನ ಸಂಬಳದಿಂದ 24 ಸಾವಿರ ಜಿಪಿಎಫ್ ಕಂತು ಕಟಾಯಿಸಿದ್ದು, ಅದನ್ನು ಸರಿಯಾದ ಸಮಯಕ್ಕೆ ಜಮಾವಣೆ ಮಾಡದೆ ನನಗೆ ಬರಬೇಕಾದ 2 ಸಾವಿರ ಬಡ್ಡಿ ಸಿಗದಂತೆ ಮಾಡಿದ್ದಾರೆ. ನಾನು ಹಬ್ಬದ ಮುಂಗಡ ಹಣ ಪಡೆಯದಿದ್ದರೂ 2011ರಲ್ಲಿ ಹಣ ಕಟಾಯಿಸಿದ್ದಾರೆ. 2012ರಲ್ಲಿ ಬೇರೆ ಶಿಕ್ಷಕಿಯ ಎಲ್‌ಐಸಿ ಸಂಖ್ಯೆ ನಮೂದಿಸಿ ಹಣ ಜಮಾ ಮಾಡಿದ್ದು, ಎಚ್.ಆರ್.ಎಂ.ಎಸ್ ಮಾಹಿತಿ ತುಂಬಲು ಪ್ರತಿ ಶಿಕ್ಷಕರಿಂದ ತಲಾ 150 ಬಲವಂತವಾಗಿ ವಸೂಲಿ ಮಾಡಿದ್ದು, ಇದರ ವಿರುದ್ಧ ದೂರು ನೀಡಿದರೂ ನನ್ನ ಕೆಲಸ ಮಾಡಿ ಕೊಡುತ್ತಿಲ್ಲ ಎಂದು ದೂರಿದ್ದಾರೆ.
ಇನ್‌ಕ್ರಿಮೆಂಟ್ ಕೊಟ್ಟಿಲ್ಲ: ಶಿಕ್ಷಣ ಇಲಾಖೆಯಲ್ಲಿ 8 ವರ್ಷಗಳ ಇನ್‌ಕ್ರಿಮೆಂಟ್ ಕೊಟ್ಟಿಲ್ಲ. 2006 ಮತ್ತು 2011ನೇ ಸಾಲಿನಲ್ಲಿ ಸಂಬಳದ ಫಿಕ್ಷೇಷನ್ ಮಾಡದೆ ಸತಾಯಿಸುತ್ತಿದ್ದು, ಇದರ ಬಗ್ಗೆ ಹತ್ತಾರು ಬಾರಿ ಸಂಬಂಧಪಟ್ಟ ಅಧಿಕರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಇದಕ್ಕೆ ಸಂಬಂಧಿಸಿ ಗುಮಾಸ್ತ ನಟೇಶ್ ಅವರನ್ನು ವಿಚಾರಿಸಿದಾಗ ನಿಮ್ಮ ಫೈಲ್ ಕಳೆದು ಹೋಗಿದೆ ಎಂದು ಉತ್ತರ ನೀಡಿದ್ದಾರೆ. ಈ ರೀತಿಯ ನೂರಾರು ಪ್ರಕರಣಗಳು ಈ ಕಚೇರಿಯಲ್ಲಿ ನಿತ್ಯ ನಡೆಯುತ್ತಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಾಚಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಟಿ. ಸೋಮನಾಯಕ ದೂರು ಸಲ್ಲಿಸಿದ್ದಾರೆ.
ಹಳಿಯೂರು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯವರು ಅಕ್ರಮವಾಗಿ ಶಾಲಾವರಣದಲ್ಲಿ ಸಂಘದ ಕಚೇರಿ ಕಟ್ಟಡ ನಿರ್ಮಿಸಿದ್ದು, ಶಾಲೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಕಾಳೇಗೌಡ ದೂರಿದರು.
ಮಾಯಿಗೌಡನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಕೆರೆಗಳಿವೆ, ಅವುಗಳನ್ನು ಬಿಟ್ಟು ಗ್ರಾಮದ ದೇವರ ಕೆರೆಯನ್ನು ಅಕ್ರಮವಾಗಿ ಹರಾಜು ಮಾಡಿದ್ದು 20 ರಂದು ಹರಾಜಿನ ಪ್ರಕಟಣೆ ಹೊರಡಿಸಿ, 21ರಂದೇ ತರಾತುರಿಯಲ್ಲಿ ಹರಾಜು ಮಾಡಿ ಪಂಚಾಯಿತಿಯವರು ಅಕ್ರಮವೆಸಗಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮಾಯಗೌಡನಹಳ್ಳಿ ಚಲುವೇಗೌಡ ಲೋಕಾಯುಕ್ತರಿಗೆ ಮನವಿ ಸಲ್ಲಿಸಿದರು.
ಗಂಧನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯದರ್ಶಿ ಜಿ.ಕೆ. ಮಹದೇವ ಮತ್ತು ಅಧ್ಯಕ್ಷ ಜಿ.ಎಚ್. ಶಿವಸ್ವಾಮಿ ಸೇರಿ ಕಳೆದ 20 ವರ್ಷಗಳಿಂದ ಸುಮಾರು 50 ಲಕ್ಷದಷ್ಟು ಹಣ ದುರುಪಯೋಗವಾಗಿದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರಿದರೂ ಕ್ರಮ ಕೈಗೊಂಡಿಲ್ಲ. ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗಂಧನಹಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ರಾಮಕೃಷ್ಣೇಗೌಡ ಕೋರಿದರು.
ಲೋಕಾಯುಕ್ತ ಇನ್ಸ್‌ಪೆಕ್ಟರ್ ಬೈರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಯದುಗಿರೀಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಆರ್. ರವಿಕುಮಾರ್ ಮತ್ತು ಗ್ರಾಪಂ ಪಿಡಿಒ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement