ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಸರ್ವೆ
ಸಾಲಿಗ್ರಾಮ: ಸರ್ಕಾರಿ ಒತ್ತುವರಿ ಜಾಗ ತೆರವುಗೊಳಿಸುವ ಸಲುವಾಗಿ ಸರ್ವೆ ಮಾಡುತ್ತಿದ್ದಾಗ ಕಾರ್ಯಕ್ಕೆ ತಡೆಯೊಡ್ಡಿದ ಘಟನೆ ಸಮೀಪದ ಹರದನಹಳ್ಳಿ ಗ್ರಾಮದಲ್ಲಿ ಜುರುಗಿದೆ.
ಕೆ.ಆರ್. ನಗರ ತಾಲೂಕಿನ ಹರದನಹಳ್ಳಿ ಗ್ರಾಮದ ವ್ಯಾಪ್ತಿಗೆ ಸೇರುವ ಶೀಗವಾಳು ರಸ್ತೆಯಲ್ಲಿನ ಸರ್ವೆ ನಂ. 271, 272 ಹಾಗೂ 274ಗಳ ವ್ಯಾಪ್ತಿಯಲ್ಲಿ ಜಾಗವು ಒತ್ತುವರಿಯಾಗಿದ್ದು, ಆ ಭಾಗದಲ್ಲಿನ ರೈತರು ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಲು ತಿರುಗಾಡಬೇಕಾದ ಜಾಗದಲ್ಲೆ ತಮ್ಮಯ್ಯ ಎಂಬವರು ಒತ್ತುವರಿ ಮಾಡಿಕೊಂಡಿದ್ದಾರೆಂದು ದೂರು ನೀಡಿದ್ದರು.
ದೂರಿನ ಮೇರೆಗೆ ಬುಧವಾರ ಉಪ ತಹಸೀಲ್ದಾರ್ ತಿಮ್ಮಯ್ಯ ನೇತೃತ್ವದಲ್ಲಿ ಸ್ಥಳ ಪರಿಶೀಲಿಸಿ ಸರ್ವೆ ಮಾಡಿಸಲು ತೆರಳಿದಾಗ, ತಮ್ಮಯ್ಯ, ಈ ಜಾಗ ಮಾತ್ರವಲ್ಲ ಈ ಸುತ್ತಮುತ್ತ ಹಲವು ಜಾಗಗಳು ಒತ್ತುವರಿಯಾಗಿವೆ, ಅವುಗಳನ್ನು ತೆರವುಗೊಳಿಸಿ ಅದನ್ನು ಬಿಟ್ಟು ನಮ್ಮೊಬ್ಬರನ್ನೆ ಗುರಿಯಾಗಿರಿಸಿಕೊಂಡು ಈ ಕೆಲಸ ಮಾಡುತ್ತಿರುವುದು ನ್ಯಾಯ ಸಮ್ಮತವಾಗಿಲ್ಲ. ಅಲ್ಲದೆ ಈ ಜಾಗವನ್ನು ನಮ್ಮ ತಾಲೂಕಿನವರು ಸರ್ವೆ ಮಾಡಿದರೆ ನಮಗೆ ಅನ್ಯಾಯವಾಗುತ್ತದೆ. ಹಾಗಾಗಿ ಬೇರೆ ತಾಲೂಕಿನಿಂದ ಸರ್ವೆಯರುಗಳು ಬಂದು ಸರ್ವೆ ಮಾಡಲಿ, ಅಲ್ಲಿಯವರೆಗೂ ಈ ಜಾಗದಲ್ಲಿ ಏನು ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು, ಸರ್ವೆ ಕಾರ್ಯ ತಡೆದರು. ಮಾತಿನ ಚಕಮಕಿ: ಉಪ ತಹಸೀಲ್ದಾರ್ ಮಾತನಾಡಿ, ಸರ್ಕಾರಿ ಆದೇಶದಂತೆ ಈ ಕೆಲಸ ಮಾಡಲು ಅನುವು ಮಾಡಿಕೊಡಿ. ಈ ಸಂಬಂಧ ನಿಮ್ಮ ಮನವಿ ಇದ್ದರೆ ಕೊಡಿ, ಅದನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಲಾಗುವುದು ಎಂದು ಹೇಳಿದರು. ಇದೆ ವೇಳೆ ಅಧಿಕಾರಿಗಳಿಗೂ ಹಾಗೂ ತಮ್ಮಯ್ಯ ಅವರಿಗೂ ಮಾತಿನ ಚಕಮಕಿ ನಡೆಯಿತು. ಆದರೂ ಸರ್ವೆ ಕಾರ್ಯವು ನಡೆಯಲು ಬಿಡದ ಕಾರಣ ಮಹಜರ್ ಮಾಡಿಕೊಂಡು ಸ್ಥಳದಲ್ಲಿದ್ದ ಗ್ರಾಮಸ್ಥರಿಂದ ಸಹಿ ಪಡೆದು, ಬಂದ ದಾರಿಗೆ ಸುಂಕವಿಲ್ಲದಂತೆ ಬರಿಗೈಲಿ ವಾಪಸ್ ತೆರಳಿದರು.