ಸಿಲ್ಕ್ ಇಂಡಿಯಾ ವಸ್ತು ಪ್ರದರ್ಶನ ಆರಂಭ
ಮೈಸೂರು: ಅಭಿವೃದ್ಧಿ ಸಂಸ್ಥೆಯು ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿರುವ ಸಿಲ್ಕ್ ಇಂಡಿಯಾ ಹೆಸರಿನ ಎಲ್ಲಾ ರಾಜ್ಯಗಳ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮೇಯರ್ ಎನ್.ಎಂ. ರಾಜೇಶ್ವರಿ ಉದ್ಘಾಟಿಸಿದರು.
ಈ ಮೇಳದಲ್ಲಿ ದೇಶದ ನಾಲ್ಕು ರೀತಿಯ ರೇಷ್ಮೆ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿರುವುದು ವಿಶೇಷ. ತಸ್ಸರ್ ರೇಷ್ಮೆ, ಮೈಸೂರು ಭಾಗದ ರೇಷ್ಮೆ, ಮುಲ್ಬಾರಿ ಮತ್ತು ಏರಿ ರೇಷ್ಮೆಯ ಉತ್ಪನ್ನಗಳು ಇಲ್ಲಿ ಲಭ್ಯ. ದೇಶದ ನಾಲ್ಕು ರೀತಿಯ ರೇಷ್ಮೆ ಉತ್ಪನ್ನಗಳನ್ನು ಒಂದೇ ಸೂರಿನಡಿ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿರುವುದು ಇದೆ ಮೊದಲು.
ಕಂಚಿ ಸಿಲ್ಕ್ ಮತ್ತು ಮದುವೆ ಸೀರೆಗಳು, ಡಿಸೈನರ್ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಬಲ್ಚೂರಿ ರೇಷ್ಮೆ, ಮಟ್ಕಾ ಸೀರೆಗಳು, ಪ್ರಿಂಟೆಡ್ ಸೀರೆಗಳು, ಪಶ್ಮೀನಾ ಸೀರೆಗಳು, ಡಿಸೈನರ್ ಡ್ರೆಸ್ ಮೆಟಿರಿಯಲ್ಸ್, ಬಾಗಲ್ಪುರ್ ರೇಷ್ಮೆಸೀರೆ, ಉಪ್ಪಡಾ ಮತ್ತು ಗೊಡ್ವಾಲ್ ಸೀರೆಗಳು, ಮಹೇಶ್ವರಿ ಮತ್ತು ಕೋಟಾ ಸಿಲ್ಕ್, ಟೆಂಪಲ್ ಬಾರ್ಡಾರ್, ಉಚ್ಚಾ ಮುಲ್ಬಾರಿ ಸಿಲ್ಕ್, ಮೈಸೂರು ರೇಷ್ಮೆ, ಕೋಲ್ಕತಾ ರೇಷ್ಮೆ ಸೀರೆಗಳು, ಬನಾರಸ್ ಮತ್ತು ಜಮ್ದಾನಿ ರೇಷ್ಮೆ, ಶಿಫಾನ್ ಸೀರೆಗಳು, ಬುಟ್ಟಿ ಸೀರೆಗಳು, ಚಂದೇರಿ ಸಿಲ್ಕ್ ಮತ್ತು ಕೈ ಅಚ್ಚಿನ ಸೀರೆಗಳು ಪ್ರದರ್ಶನಗೊಳ್ಳುತ್ತಿವೆ.
ಇವುಗಳ ಜೊತೆಗೆ ಸ್ಟೂಲ್ಸ್, ಶಾಲುಗಳು, ಸಲ್ವಾರ್ ಕಮೀಜ್ ಮತ್ತು ಉಡುಪಿನ ಬಟ್ಟೆಗಳು, ಜಾಕೆಟ್ಗಳು, ಕುಶನ್ ಕವರ್ಗಳು ಮತ್ತು ಬೆಡ್ಶೀಟ್ಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಇಂದಿನಿಂದ 6 ದಿನಗಳ ಕಾಲ ಬೆಳಗ್ಗೆ 10.30 ರಿಂದ ರಾತ್ರಿ 8.30 ರವರೆಗೆ ಈ ಪ್ರದರ್ಶನ ಮತ್ತು ಮಾರಾಟ ಮಳಿಗೆ ತೆರೆದಿರುತ್ತದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಟಿ. ಅಭಿನಂದ್ ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕರಕುಶಲ ಮಾರುಕಟ್ಟೆ ಮತ್ತು ವಿಸ್ತರಣಾ ಕೇಂದ್ರದ ಸಹಾಯಕ ನಿರ್ದೇಶಕ ಪಿ. ಶಶಿಧರ್, ಎ.ರಾಖೇಶ್ ರೈ, ಎ. ಸೀತಾರಾಮ ರೈ ಇದ್ದರು.
ರೇಲ್ವೆ ಸ್ಟೇಷನ್ ಮಾಸ್ಟರ್ಸ್ಗಳ ಧರಣಿ
ಮೈಸೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅಖಿಲ ಭಾರತ ಸ್ಟೇಷನ್ ಮಾಸ್ಟರ್ಸ್ ಸಂಘದವರು ಮೈಸೂರು ವಿಭಾಗದ ಡಿಆರ್ಎಂ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.
ಮೈಸೂರು ವಿಭಾಗ 84 ರೈಲು ನಿಲ್ದಾಣಗಳಲ್ಲಿ ತಲಾ ಒಬ್ಬರು ಮಾತ್ರ ಸ್ಟೇಷನ್ ಮಾಸ್ಟರ್ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ರೈಲು ಸಂಚಾರ ಹೆಚ್ಚಾಗಿರುವುದರಿಂದ ಒತ್ತಡ ಸಹ ಹೆಚ್ಚಾಗಿದೆ. ಹೀಗಾಗಿ ಪ್ರತಿ ರೈಲು ನಿಲ್ದಾಣಗಳಿಗೂ ಹೆಚ್ಚುವರಿ ಸ್ಟೇಷನ್ ಮಾಸ್ಟರ್ಗಳನ್ನು ನೇಮಿಸಬೇಕು ಎಂದು ಅವರು ಒತ್ತಾಯಿಸಿದರು.
ಸ್ಟೇಷನ್ ಮಾಸ್ಟರ್ಗಳಿಗೆ ಗ್ರೇಡ್ಪೇ ಕನಿಷ್ಠ 4200 ನೀಡಬೇಕು. 12 ಗಂಟೆ ಸೇವಾವಧಿಯನ್ನು ತೆಗೆದುಹಾಕಿ, 8 ಗಂಟೆ ಸೇವಾವಧಿ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘದ ವಿಭಾಗೀಯ ಅಧ್ಯಕ್ಷ ಜಯಾನಂದಮೂರ್ತಿ, ಕಾರ್ಯದರ್ಶಿ ಎಸ್.ಜಿ. ಗಿರೀಶ್, ಹೆಚ್ಚುವರಿ ಕಾರ್ಯದರ್ಶಿ ವೇಲ್ರಾಜ್ ಇದ್ದರು.