ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಾಲು ಉತ್ಪಾದಕರ ಸಂಘದಲ್ಲಿ ಅವ್ಯವಹಾರ: ತನಿಖೆಗೆ ಆಗ್ರಹ

Srinivasa Murthy VN
Updated On : 23 Oct 2013, 11:51 am

ಕೆ.ಆರ್. ನಗರ: ತಾಲೂಕಿನ ಗಂಧನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಳೆದ 20 ವರ್ಷಗಳಿಂದ ಲಕ್ಷಾಂತರ ರು. ಅವ್ಯವಹಾರ ನಡೆದಿದ್ದು, ಈ ಪೈಕಿ ಕಾರ್ಯದರ್ಶಿ ಜಿ.ಕೆ. ಮಹದೇವ ಮತ್ತು ಅಧ್ಯಕ್ಷ ಜಿ.ಎಚ್. ಶಿವಸ್ವಾಮಿ ಅವರ ಪಾತ್ರವಿದ್ದು ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಈಗಿನ ಆಡಳಿತ ಮಂಡಳಿ ರದ್ದುಪಡಿಸಿ ಚುನಾವಣೆ ನಡೆಸಬೇಕು ಎಂದು ಗಂಧನಹಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ರಾಮಕೃಷ್ಣೇಗೌಡ ಒತ್ತಾಯಿಸಿದರು. ಕಳೆದ 10 ವರ್ಷಗಳಿಂದಲೂ ಸಂಘದ ಆಡಳಿತ ಚುಕ್ಕಾಣಿ ಮತ್ತು ಸಿಬ್ಬಂದಿ ಒಂದೇ ಕುಟುಂಬದ ಕೈಯಲ್ಲಿರುವುದು ಅಕ್ರಮಕ್ಕೆ ಕಾರಣವಾಗಿದೆ. ಆದ್ದರಿಂದ ಹಾಲು ಉತ್ಪಾದಕರಿಗೆ ಮೋಸವಾಗುತ್ತಿದೆ. ಸಂಘದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ದೂರಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. 10 ಸಾವಿರ ಜನಸಂಖ್ಯೆ ಇರುವ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕೇವಲ 65 ಮಂದಿ ಷೇರುದಾರರಿದ್ದು ಹೊಸ ಷೇರುದಾರರಿಗೆ ಅವಕಾಶ ನೀಡದೆ ಅಕ್ರಮ ಮಾಡಲು ತಮಗೆ ಬೇಕಾದವರನ್ನೇ ನಿರ್ದೇಶಕರಾಗಿ ನೇಮಕ ಮಾಡಿಕೊಂಡಿರುವುದರ ಜತೆಗೆ ಹಾಲು ಸರಬರಾಜು ಮಾಡದವರನ್ನು ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಿ.ಡಿ. ಕುಮಾರ್, ನೀರು ಬಳಕೆದಾರರ ಸಂಘದ ಅಧ್ಯಕ್ಷ ಜಿ.ಎಚ್. ನಾಗರಾಜು, ಜಿ.ಡಿ. ರಾಜೇಗೌಡ, ಜಿ.ಆರ್. ಸ್ವಾಮಿಗೌಡ, ಜಿ.ಬಿ. ಮಂಜುನಾಥ್, ಶಿವಣ್ಣ ಇದ್ದರು.

ಆದಿವಾಸಿಗಳ ಪ್ರತಿಭಟನೆ ಅಂತ್ಯ
ಎಚ್.ಡಿ. ಕೋಟೆ:
ತಾಲೂಕು ಅಂತರಸಂತೆ ಹೋಬಳಿ ಬಳ್ಳೆ ಅರಣ್ಯ ಇಲಾಖೆಯ ಎದುರು ಆದಿವಾಸಿಗಳು ನಡೆಸುತ್ತಿದ್ದ ಮೂರು ದಿನಗಳ ಪ್ರತಿಭಟನೆ ಶಾಂತಿಯುತವಾಗಿ ಮುಕ್ತಾಯವಾಯಿತು. ಸ್ಥಳಕ್ಕೆ ತಹಸೀಲ್ದಾರ್ ಕೃಷ್ಣ ಭೇಟಿ ನೀಡಿ, ಪ್ರತಿಭಟನಾಕಾರರೊಂದಿಗೆ ಮಾತನಾಡಿ, ತಕ್ಷಣಕ್ಕೆ ಕಾಡಿನ ಒಳಗೆ ಆದಿವಾಸಿಗಳು ಕಿರು ಉತ್ಪನ್ನಗಳಲ್ಲಿ ಒಂದಾದ ಮರದ ಪಾಚಿ ಸಂಗ್ರಹಿಸಲು ಅನುಮತಿ ನೀಡಿದರು. ನ.8 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಗಿರಿಜನ ಮುಖಂಡರ ಸಭೆ ಕರೆಯಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement