ಇಂದು- ನಾಳೆ ಸೈಕ್ಲಿಂಗ್
ಮೈಸೂರು: ಮೈಸೂರು ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಗಂಗೋತ್ರಿ ಘಟಕವು ರಜತ ಮಹೋತ್ಸವ ಅಂಗವಾಗಿ ಅ.26 ಮತ್ತು 27 ರಂದು ಎಚ್.ಡಿ. ಕೋಟೆ ತಾಲೂಕು ಬೀಚನಹಳ್ಳಿ ಕಬಿನಿ ಹಿನ್ನೀರಿನಲ್ಲಿ ಸೈಕ್ಲಿಂಗ್ ಕಾರ್ಯಕ್ರಮ ಏರ್ಪಡಿಸಿದ್ದು, ಯುವ ತಂಡವು ಅ.26ರ ಮಧ್ಯಾಹ್ನ 3.30ಕ್ಕೆ ಮೈಸೂರಿನಿಂದ ನಿರ್ಗಮಿಸಲಿದೆ. ಮೊ. 98802 44649 ಸಂಪರ್ಕಿಸಬಹುದು.
ನ್ಯಾಯಕ್ಕಾಗಿ ಓಟ ಮಿನಿ ಮ್ಯಾರಥಾನ್
ಮೈಸೂರು: ಮಹಾಜನ ಪ್ರಥಮ ದರ್ಜೆ ಕಾಲೇಜಿನಿಂದ ಅ.27ರ ಬೆಳಗ್ಗೆ 7ಕ್ಕೆ ಕಾಲೇಜಿನ ಜಗದೀಶ ಪ್ರಸಾದ್ ಕ್ರೀಡಾಂಗಣದಿಂದ ನ್ಯಾಯಕ್ಕಾಗಿ ಓಟ ಮಿನಿ ಮ್ಯಾರಥಾನ್ ಏರ್ಪಡಿಸಿದ್ದು, ಮೇಯರ್ ಎನ್.ಎಂ. ರಾಜೇಶ್ವರಿ, ಶಾಸಕರಾದ ಜಿ.ಟಿ. ದೇವೇಗೌಡ, ರಘು ಆಚಾರ್, ಡಾ.ಎಂ.ಎ. ಸಲೀಂ, ಆರ್. ವಾಸುದೇವಮೂರ್ತಿ ಭಾಗವಹಿಸುವರು.
28ರಂದು ಸನ್ಮಾನ ಸಮಾರಂಭ
ಮೈಸೂರು: ಜಯಲಕ್ಷ್ಮೀಪುರಂ ಹಿರಿಯ ನಾಗರಿಕರ ಮಂಡಳಿ, ಹಿರಿಯ ನಾಗರಿಕರ ವಿಶ್ವಸ್ಥ ಮಂಡಳಿ ವತಿಯಿಂದ ಅ.28ರ ಬೆಳಗ್ಗೆ 11ಕ್ಕೆ ಮಂಡಳಿಯ ಸರಸ್ವತಿ ಸಮುದಾಯ ಭವನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಸನ್ಮಾನ ಸಮಾರಂಭ ಏರ್ಪಡಿಸಿದ್ದು, ಶ್ರೀ ಸೋಮೇಶ್ವರನಾಥ ಸ್ವಾಮೀಜಿ ವಿಶ್ರಾಂತ ಕುಲಪತಿ ಪ್ರೊ.ಬಿ. ಷೇಕ್ ಅಲಿ ಅವರನ್ನು ಸನ್ಮಾನಿಸುವರು.
ಇಬ್ಬರು ನಾಪತ್ತೆ
ಮೈಸೂರು: ನಗರದ ವಿವಿ ಮೊಹಲ್ಲಾದ ನಿವಾಸಿ ದೇವಪುತ್ರಮ್ಮ ಎಂಬವರು ಅ.11 ರಿಂದ ಕಾಣೆಯಾಗಿದ್ದಾರೆ. ಚಹರೆ ಇಂತಿದೆ- 68 ವರ್ಷ, 5.8 ಎತ್ತರ, ಸಾಧಾರಣ ಮೈಕಟ್ಟು, ಕೆಂಪು ಬಣ್ಣ, ಕೋಲು ಮುಖ, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ವಿವಿ ಪುರಂ ಠಾಣೆಯ ದೂ.0821- 2418314, 2418514, 2418340 ತಿಳಿಸುವಂತೆ ಕೋರಲಾಗಿದೆ. ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಮುಬೀನಾ ಅ. 20 ರಿಂದ ಕಾಣೆಯಾಗಿದ್ದಾರೆ. ಚಹರೆ ಇಂತಿದೆ- 19 ವರ್ಷ, 4.7 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಬಣ್ಣ, ಕೋಲು ಮುಖ, ಕನ್ನಡ ಮತ್ತು ಉರ್ದು ಮಾತನಾಡುತ್ತಾರೆ. ಮಾಹಿತಿ ಸಿಕ್ಕಲ್ಲಿ ವಿವಿ ಪುರಂ ಠಾಣೆಯ ದೂ. 0821- 2418314, 2418514, 2418340 ತಿಳಿಸುವಂತೆ ಕೋರಲಾಗಿದೆ.
ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
ಮೈಸೂರು: ಕನ್ನಡ ಪುಸ್ತಕ ಪ್ರಾಧಿಕಾರವು 2012ನೇ ಸಾಲಿಗೆ ಯುವ ಬರಹಗಾರರು ಕನ್ನಡ ಸಾಹಿತ್ಯದಲ್ಲಿ ರಚಿಸಿರುವ ಚೊಚ್ಚಲ ಕೃತಿಗಳಿಗೆ ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ಪದವಿಗೆ ಸಿದ್ಧಪಡಿಸಿದ ಪ್ರಬಂಧಗಳನ್ನು ಹೊರತುಪಡಿಸಿ, ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ, ಲೇಖನ, ಪ್ರಬಂಧ ಮುಂತಾದ ಸಾಹಿತ್ಯದ ಪ್ರಕಾರಣಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವ್ಯಕ್ತಿಗಳು 18 ರಿಂದ 35 ವರ್ಷದೊಳಗಿನವರಾಗಿದ್ದು, ವಯಸ್ಸಿನ ದಾಖಲಾತಿ ಬಗ್ಗೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯೊಂದಿಗೆ ಚೊಚ್ಚಲ ಕೃತಿ ಎಲ್ಲಿಯೂ ಪ್ರಕಟವಾಗದೇ ಇರುವ ಬಗ್ಗೆ ಸ್ವಯಂ ದೃಢೀಕರಣ ಪತ್ರದೊಂದಿಗೆ, ತಾವು ರಚಿಸಿರುವ ಚೊಚ್ಚಲ ಕೃತಿಯನ್ನು ಬೆರಳಚ್ಚು ಮಾಡಿಸಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- 560002. ಇಲ್ಲಿಗೆ ನ.22 ರೊಳಗೆ ಕಳುಹಿಸುವಂತೆ ಕೋರಲಾಗಿದೆ. ದೂ. 080- 22484516, 22017704 ಸಂಪರ್ಕಿಸಬಹುದು.
ಹಲ್ಲೆ ಖಂಡಿಸಿ: ವಕೀಲರ ಧರಣಿ
ಮೈಸೂರು: ಟಿ.ನರಸೀಪುರದಲ್ಲಿ ನಡೆದ ವಕೀಲರ ಮೇಲಿನ ಹಲ್ಲೆ ಖಂಡಿಸಿ ಮೈಸೂರಿನ ವಕೀಲರ ಸಂಘದ ಪದಾಧಿಕಾರಿಗಳು ಶುಕ್ರವಾರ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರತಿಭಟಿಸಿದರು. ಟಿ. ನರಸೀಪುರದಲ್ಲಿ ವಕೀಲರಾದ ಎಸ್.ಸಿ. ಶಾಂತ ನಾಗರಾಜು ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ವಕೀಲರು ನ್ಯಾಯಾಲಯದ ಕಲಾಪದಿಂದ ಹೊರಗುಳಿದರು. ವಿಚ್ಚೇದನ ವಿಷಯಕ್ಕೆ ಸಂಬಂಧಿಸಿದಂತೆ ಕಕ್ಷಿದಾರರ ಕಡೆಯವರು ವಕೀಲರಾದ ಶಾಂತ ನಾಗರಾಜು ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಶಾಂತ ನಾಗರಾಜು ಅವರು ಜಿಲ್ಲಾ ಸಂಘಕ್ಕೆ ಪತ್ರ ಬರೆದು ತಮಗೆ ಬೆಂಬಲ ನೀಡಬೇಕು ಎಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದ ವಕೀಲರ ಸಂಘವು ಅವರಿಗೆ ಬೆಂಬಲ ನೀಡುವ ಸೂಚಕವಾಗಿ ಕಲಾಪಕ್ಕೆ ವಕೀಲರು ಗೈರು ಹಾಜರಾದರು.
ನಾಳೆ ವಧು-ವರರ ಸಮಾವೇಶ
ಮೈಸೂರು: ಜೆಎಸ್ಎಸ್ ವಿವಾಹವೇದಿಕೆ ವತಿಯಿಂದ ಅ.27ರ ಬೆಳಗ್ಗೆ 10ಕ್ಕೆ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜಿನ ಸಭಾಂಗಣದಲ್ಲಿ ರಾಜ್ಯಮಟ್ಟದ ವಧು-ವರರ 4ನೇ ಸಮಾವೇಶ ನಡೆಯಲಿದೆ. ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ನೀಡುವರು. ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಅಧ್ಯಕ್ಷತೆ ವಹಿಸುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎನ್.ಆರ್. ವಿಜಯ್ ಉದ್ಘಾಟಿಸುವರು. ಪ್ರೊ.ಎಸ್. ನಂಜುಂಡಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸುಲಿಗೆ: 3 ವರ್ಷ ಕಠಿಣ ಸಜೆ
ಮೈಸೂರು: ಒಂಟಿಯಾಗಿ ತಿರುಗಾಡುವ ವೃದ್ಧ ಮಹಿಳೆಯರನ್ನು ನಂಬಿಸಿ, ಸುಲಿಗೆ ಮಾಡುತ್ತಿದ್ದವನಿಗೆ ಒಂದನೆ ಹೆಚ್ಚುವರಿ ಒಂದನೇ ಸಿಜೆ ನ್ಯಾಯಾಲಯವು 3 ವರ್ಷ ಕಠಿಣ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿದೆ.ಬೆಂಗಳೂರಿನ ಮೈಲಸಂದ್ರ ನಿವಾಸಿ ಸೋಮಶೇಖರಾಚಾರಿ ಅ. ಸೋಮ ಅ. ಸೂರ್ಯ ಶಿಕ್ಷೆಗೆ ಒಳಗಾದವನು. ಈತ ತನ್ನ ಮಾರುತಿ 800 ಕಾರಿನಲ್ಲಿ ಬಂದು ವಯಸ್ಸಾದ ಒಂಟಿ ಮಹಿಳೆಯರನ್ನು ತುಂಬಾ ಪರಿಚಯದವರಂತೆ ಮಾತನಾಡಿಸಿ, ನಮ್ಮ ತಾಯಿಗೆ ಹುಷಾರಿಲ್ಲವೆಂದು ನಿಮ್ಮನ್ನು ಕರೆದುಕೊಂಡು ಬರುವಂತೆ ಹೇಳಿದ್ದಾರೆಂದು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕು ತೋರಿಸಿ ಬೆಲೆಬಾಳುವ ಚಿನ್ನದ ವಸ್ತು ಕಸಿದು ಪರಾರಿಯಾಗುತ್ತಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಅತ್ಯಾಚಾರ ಆರೋಪಿ ಸೆರೆ
ಎಚ್.ಡಿ. ಕೋಟೆ: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ತಾಲೂಕು ಅಂತರಸಂತೆ ಹೋಬಳಿ ಕಾರಾಪುರ ಗ್ರಾಮದ ಕುಮಾರ (17) ಬಂಧಿತ ಆರೋಪಿ. ಈತ ಅ.2 ರಂದು ಅದೇ ಗ್ರಾಮದ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ. ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ತಾಯಿ ಅ.4ರಂದು ಕುಮಾರನ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಹುಣಸೂರು ತಾಲೂಕು ಗದ್ದಿಗೆ ಗ್ರಾಮದ ಬಸ್ ನಿಲ್ದಾಣದ ಬಳಿ ಶುಕ್ರವಾರ ಬೆಳಗಿನ ಜಾವ ಆರೋಪಿಯನ್ನು ಸರ್ಕಲ್ ಇನ್ಸ್ಪೆಕ್ಟರ್ ಶಿವಸ್ವಾಮಿ ಹಾಗೂ ತಂಡ ಬಂಧಿಸಿದರು.