ಕನ್ನಡ ಉಪಭಾಷೆಗಳ ವ್ಯಾಪಕ ಸಂಶೋಧನೆಯಾಗಲಿ
ಕ.ಪ್ರ.ವಾರ್ತೆ ಮೈಸೂರು ಅ. 25
ರಾಜ್ಯದ ವಿವಿಧ ಭಾಗಗಳಲ್ಲಿರುವ ಕನ್ನಡ ಉಪಭಾಷೆಗಳ ವ್ಯಾಪಕ ಸಂಶೋಧನೆಯಾಗಬೇಕು ಎಂದು ನಾಡಿನ ಹೆಸರಾಂತ ವಿದ್ವಾಂಸ ಹಾಗೂ ವಿಮರ್ಶಕ ಡಾ.ಚಿದಾನಂದಮೂರ್ತಿ ಹೇಳಿದರು.
ಭಾರತೀಯ ಭಾಷಾ ಸಂಸ್ಥೆಯಲ್ಲಿ ಕನ್ನಡ ಶಾಸ್ತ್ರೀಯ ಭಾಷೆಯ ಉನ್ನತ ಅಧ್ಯಯನ ಕೇಂದ್ರವು ಆಯೋಜಿಸಿರುವ ಮೂರು ದಿನಗಳ ಉನ್ನತ ಮಟ್ಟದ ಸಭೆ ಹಾಗೂ ಕಾರ್ಯಯೋಜನೆಗಳ ಸಿದ್ಧತಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ಪ್ರಾಚೀನ ಆಕರಗಳ ಶೋಧ ಹಾಗೂ ವಿಶ್ಲೇಷಣೆ ಜತೆಗೆ ಕನ್ನಡಕ್ಕೂ ಇತರೆ ದ್ರಾವಿಡ ಭಾಷೆಗಳಿಗೂ ಇರುವ ಸಂಬಂಧಗಳ ಬಗ್ಗೆ ಅಧ್ಯಯನ ಆಗಬೇಕು. ಕನ್ನಡದ ಉಪಭಾಷೆಗಳ ವ್ಯಾಪಕ ಸಂಶೋಧನೆಯಾಗಬೇಕು. ಆ ಉಪಭಾಷೆಗಳಲ್ಲಿ ಎಲ್ಲಾ ವರ್ಗದವರ ಉಪಭಾಷೆ ಸೇರಿರಬೇಕು ಎಂದರು.
ಕೇಂದ್ರಗಳ ಅಧ್ಯಯನ: ಶ್ರವಣಬೆಳಗೊಳ, ಕೊಪ್ಪಳ, ಬನವಾಸಿ, ಬಸವಕಲ್ಯಾಣ, ಹಂಪಿ, ಮೈಸೂರು, ಉಡುಪಿ, ತಿರುಮಕೂಡಲು ನರಸೀಪುರ, ಐಹೊಳೆ - ಪಟ್ಟದಕಲ್ಲು ಮುಂತಾದ ಪ್ರಾಚೀನ ಕೇಂದ್ರಗಳ ಸಮಗ್ರ ಅಧ್ಯಯನ ಅವಶ್ಯಕ. ಇಲ್ಲಿನ ಸ್ಥಳನಾಮ, ಇತಿಹಾಸ, ಶಾಸನಗಳು, ಶಿಲ್ಪ, ಜಾನಪದ, ದೇವಾಲಯಗಳು, ಪೂಜಾ ವಿಧಾನಗಳು ಹಾಗೂ ಜಾತ್ರೆಗಳ ಬಗ್ಗೆ ವಿಶ್ಲೇಷಣೆಯಾಗಬೇಕು ಎಂದು ತಿಳಿಸಿದರು.
ಕರ್ನಾಟಕದ ಹಿಂದಿನ ಸಾಹಿತ್ಯ ಶ್ರೇಷ್ಠರ ಇಂದಿನ ವಂಶಸ್ಥರ ಬಗ್ಗೆ ಮತ್ತು ಅವರ ಕುರುಹುಗಳ ಕುರಿತು ಸಂಶೋಧನೆಯಾಗಬೇಕು. ಅವರ ಸ್ಮಾರಕಗಳ ಸಂರಕ್ಷಣೆ ಹಾಗೂ ಅವರ ಇಂದಿನ ವಂಶಸ್ಥರ ಸಾಕ್ಷ್ಯಚಿತ್ರ ತಯಾರಿಸಬೇಕು. ಬೌದ್ಧ, ಜೈನ, ವೀರಶೈವ ಅಲ್ಲದೆ ಕಾವಾಲಿಕ, ಕೌಳ ಲುಕುಲೀಶ ಹಾಗೂ ನಾಥ ಪಂಥಗಳ ಅಧ್ಯಯನವಾಗಬೇಕು. ಪ್ರಾಚೀನ ವಿಶ್ವಕೋಶಗಳು, ಪೌರಾಣಿಕ ಗ್ರಂಥಗಳ ವಿಶ್ಲೇಷಣೆಯಾಗಬೇಕು ಎಂದರು.
ಕರ್ನಾಟಕದ ದೊರೆಗಳು ಇಂದಿನ ಕರ್ನಾಟಕದ ಹೊರಗೆ ಹೋಗಿ ಬೇರೆ ಬೇರೆ ಕಡೆಗಳಲ್ಲಿ ನೆಲೆಸಿ, ಆಳಿ, ಅಪೂರ್ವ ಕೊಡುಗೆ ನೀಡಿದ್ದಾರೆ. ಇದರ ಬಗ್ಗೆ ಕ್ಷೇತ್ರ ಕಾರ್ಯವಾಗಬೇಕು. ಕಾವೇರಿಯಿಂದ ಗೋದವರಿಯವರೆಗೂ ಅಂದು ವಿಸ್ತಾರವಾಗಿದ್ದ ಕನ್ನಡ ನಾಡಿನ ಕೆಲವು ಭಾಗಗಳು ಮಹಾರಾಷ್ಟ್ರ ವ್ಯಾಪ್ತಿಗೆ ಸೇರಿದ್ದು, ಅಲ್ಲಿ ಇಂದಿಗೂ ಬಳಸುತ್ತಿರುವ ಕನ್ನಡ ಪದಗಳ ಅಧ್ಯಯನ ನಡೆಸಬೇಕು ಎಂದು ತಿಳಿಸಿದರು.
ಕನ್ನಡ ಭಾಷೆ ಮತ್ತು ಸಾಹಿತ್ಯದ ಅವಶೇಷಗಳು ಹಾಗೂ ಶಾಸನಗಳ ಸಂರಕ್ಷಣೆಯಾಗಬೇಕು. ಶ್ರೇಷ್ಠ ಕೃತಿಗಳ ಗಣಕೀಕರಣ, ಕನ್ನಡ ಕೃತಿಗಳನ್ನು ಬೇರೆ ಭಾಷೆಗಳಿಗೆ ಅನುವಾದ ಆಗಬೇಕು. ವ್ಯವಸಾಯ, ನೇಯ್ಗೆ, ಕುಂಬಾರಿಕೆ, ವಿಶ್ವಕರ್ಮ ವೃತ್ತಿಗಳು, ಶಿಲ್ಪ, ನೃತ್ಯ ಶಾಸ್ತ್ರ, ಮೀನುಗಾರಿಕೆ ಗಣಿಗಾರಿಕೆ ಇದರ ಸಮಗ್ರ ಪ್ರತ್ಯಕ್ಷಿಕೆ ಸಮೀಕ್ಷೆಯಾಗಬೇಕು ಎಂದು ಸಲಹೆ ನೀಡಿದರು.
ನಾಡಿನ ವಿದ್ವಾಂಸರಾದ ಟಿ.ವಿ. ವೆಂಕಟಾಚಲ ಶಾಸ್ತ್ರಿ, ಎಸ್.ಎಂ. ವೃಷಬೇಂದ್ರಸ್ವಾಮಿ, ಆರ್.ವಿ.ಎಸ್. ಸುಂದರಂ, ಶಂಕರನಾರಾಯಣ, ಕಾರ್ತಿಕ್, ಶರಶ್ಚಂದ್ರ, ಶ್ಯಾಮ್ ಮೋಹನ್ಲಾಲ್ ಹಾಗೂ ಸಿಐಐಎಲ್ ನಿವೃತ್ತ ಉಪನಿರ್ದೇಶಕ ಆರ್. ಸುಬ್ಬುಕೃಷ್ಣ ಹಾಗೂ ಕಾರ್ಯಾಗಾರದ ಸಂಯೋಜಕ ಮತ್ತು ಸಂಸ್ಥೆ ಸಹಾಯಕ ನಿರ್ದೇಶಕ ಎಂ. ಬಾಲಕುಮಾರ್ ಇದ್ದರು.
ಇದಕ್ಕೂ ಮುನ್ನ ಕರ್ನಾಟಕ ವಿವಿಯ ನಿವೃತ್ತ ಪ್ರಾಧ್ಯಾಪಕ ಹಾಗೂ ಸಿಐಐಎಲ್ ಸೀನಿಯರ್ ಫೇಲೋ ಪ್ರೊ.ಎಚ್.ಎಂ. ಮಹೇಶ್ವರಯ್ಯ ಅವರು ಪ್ರಾತ್ಯಕ್ಷಿಕೆ ಮೂಲಕ ಶಾಸ್ತ್ರೀಯ ಭಾಷೆಯ ಅಭಿವೃದ್ಧಿಗೆ ಇರುವ ಯೋಜನೆಗಳನ್ನು ಸಾದರಪಡಿಸಿದರು.
'ಹಳೆಗನ್ನಡದ ಕಲಿಕೆಗೆ ಕೋರ್ಸ್ ಆರಂಭಿಸಿ'
ಹಳೆಗನ್ನಡ ಕಲಿಕೆಗೆ ಉತ್ತೇಜಿಸಲು ಕೋರ್ಸ್ ಆರಂಭಿಸುವುದು ಅವಶ್ಯಕ ಎಂದು ವಿದ್ವಾಂಸ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಹೇಳಿದರು.
ಕನ್ನಡ ಶಾಸ್ತ್ರೀಯ ಭಾಷೆಯ ಉನ್ನತ ಅಧ್ಯಯನ ಕೇಂದ್ರದ ಉನ್ನತ ಮಟ್ಟದ ಸಭೆ ಹಾಗೂ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅಜ್ಞಾತವಾಗಿರುವ ಕನ್ನಡ ಸಾಹಿತ್ಯ ಸಂಪತ್ತನ್ನು ಇಂದಿನ ಜನರಿಗೆ ತಲುಪಿಸು ಕೆಲಸವಾಗಬೇಕು. ಹಳೆಗನ್ನಡ ಕಲಿಕೆ ತುಂಬ ಕಷ್ಟ ಎನ್ನುವ ಮಾತಿದೆ. ಆದರೆ ಕಲಿಯಲು ಆಸಕ್ತಿ ಇರುವವರ ಸಂಖ್ಯೆಯೂ ಇಲ್ಲ ಎನ್ನುವಂತಿಲ್ಲ. ಆದರೆ ಕಲಿಸುವವರ ಕೊರತೆಯೂ ಇದೆ. ಆದ್ದರಿಂದ ಇದಕ್ಕಾಗಿ ಕಾರ್ಯಾಗಾರ ನಡೆಸಬೇಕು. ಒಂದು ತಿಂಗಳ ಅವಧಿಯ ಕೋರ್ಸ್ ಆರಂಭಿಸಿದರೆ ತುಂಬ ಅನುಕೂಲವಾಗಲಿದೆ. ವಿದೇಶಗಳಲ್ಲಿ ಪ್ರೊಫೆಸರ್ ಆಫ್ ಕ್ಲಾಸಿಕ್ ಎಂಬ ಹುದ್ದೆಗಳಿವೆ ಎಂದರು. ಪ್ರಾಚೀನ ಕನ್ನಡ ಸಾಹಿತ್ಯದ ಬಗ್ಗೆ ಯಾರು ಆಸಕ್ತಿ ವಹಿಸದಿರುವುದು ನೋವಿನ ಸಂಗತಿ. ನೂರಾರು ಹಳಗನ್ನಡ ಹಾಗೂ ನಡುಗನ್ನಡ ಶಾಸ್ತ್ರೀಯ ಕೃತಿಗಳ ಪ್ರಕಟಣೆಯಾಗಿಲ್ಲ. ಚಂಪು ಕಾವ್ಯವೂ ಪ್ರಕಟಣೆ ಕಂಡಿಲ್ಲ. ಆದ್ದರಿಂದ ಇವುಗಳನ್ನು ಶೋಧಿಸಿ, ಪರಿಷ್ಕರಿಸಿ ಪ್ರಕಟಿಸಿ ಪ್ರಚಾರಪಡಿಸುವ ಮಹತ್ವದ ಕೆಲಸವಾಗಬೇಕು ಎಂದು ತಿಳಿಸಿದರು.
ಗೊಂದಲ: ಯುವ ವಿದ್ವಾಂಸರು ಸುಮಾರು 150 ವರ್ಷಗಳ ಕಾಲ ಕೆಲಸ ಮಾಡಿದರೂ ಸಹ ಕನ್ನಡ ಸಾಹಿತ್ಯ ಕೆಲಸ ಮುಗಿಯುವುದಿಲ್ಲ. ಅಷ್ಟು ಕೆಲಸ ಮಾಡಲು ಅವಕಾಶ ಒದಗಿದೆ. ಆದರೆ ಕೇಂದ್ರದ ಧನಸಹಾಯ ಬಳಕೆಗೆ ಸಂಬಂಧಿಸಿದಂತೆ ಶಾಸ್ತ್ರೀಯ ಭಾಷಾ ಸಂಶೋಧನೆ ಎಂದರೆ ಕೇವಲ ಪ್ರಾಚೀನ ಸಾಹಿತ್ಯದ ಸಂಶೋಧನೆಗೆ ಮನ್ನಣೆಯೋ ಅಥವಾ ಕನ್ನಡ ಭಾಷೆಯ ಸಂಶೋಧನೆಯೋ ಎಂಬ ಗೊಂದಲವಿದೆ. ಇದರ ಸ್ಪಷ್ಟತೆಯು ಮೊದಲು ನಿರ್ಧಾರವಾಗಬೇಕು ಎಂದರು.