ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲಕ್ಷ್ಮಣತೀರ್ಥ ಕಲುಷಿತ ತಡೆಯಲು ಮನವಿ

Srinivasa Murthy VN
Updated On : 26 Oct 2013, 12:40 pm

ಕ.ಪ್ರ.ವಾರ್ತೆ ಹುಣಸೂರು ಅ. 25
ಕಾವೇರಿ ಉಪನದಿ ಲಕ್ಷ್ಮಣ ತೀರ್ಥಕ್ಕೆ ಕಲುಷಿತ ನೀರು ಮತ್ತು ತ್ಯಾಜ್ಯ ವಸ್ತು ಸೇರುವುದನ್ನು ತಡೆಯುವಂತೆ ಅಖಿಲ ಭಾರತೀಯ ಸನ್ಯಾಸಿಗಳ ಸಂಘ ಮತ್ತು ವಿಎಚ್‌ಪಿ ಹಾಗೂ ಬಜರಂಗದಳದ ಸದಸ್ಯರು ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಅವರಿಗೆ ಮನವಿ ಸಲ್ಲಿಸಿದರು.
ತಲಕಾವೇರಿಯಿಂದ ತಮಿಳುನಾಡಿನ ಪೂಂಬಹಾರ್‌ಗೆ ತೆರಳುತ್ತಿದ್ದ ಕಾವೇರಿ ನದಿ ಉಳಿಸಿ ಜಾಗೃತಿ ಅಭಿಯಾನದಲ್ಲಿ, ಪಟ್ಟಣದ ಬ್ರಾಹ್ಮಣರ ಬೀದಿಯ ಲಕ್ಷ್ಮಣತೀರ್ಥ ನದಿಗೆ ಪೂಜೆ ಸಲ್ಲಿಸಿದ ನಂತರ ಶ್ರೀರಂಗಪಟ್ಟಣದ ಸ್ವಾಮಿ ಗಣೇಶಾನಂದ ಸ್ವರೂಪಗಿರಿ ಸ್ವಾಮೀಜಿ ಮಾತನಾಡಿದರು.
ಸಪ್ತ ನದಿಗಳಲ್ಲೊಂದಾದ ಕಾವೇರಿ ನದಿ 800 ಕಿ.ಮೀ ಹರಿಯುತ್ತಿದ್ದು, ಉಪನದಿಗಳಲ್ಲೊಂದಾದ ಲಕ್ಷ್ಮಣತೀರ್ಥನದಿ ಸಹ ಸಂಪೂರ್ಣ ಕಲುಷಿತಗೊಂಡಿದ್ದು, ಮುಂದಿನ ಪೀಳಿಗೆಗೆ ವಿಷಯುಕ್ತ ನೀರುಣಿಸುವಂತಾಗಿದೆ. ನದಿಗಳು ಕಲುಷಿತಗೊಂಡಲ್ಲಿ ಮನುಕುಲ ನಾಶಕ್ಕೆ ನಾಂದಿ ಯಾಗಲಿದೆ. ಈ ಯಾತ್ರೆ ಜನರಲ್ಲಿ  ಜಾಗೃತಿ ಮೂಡಿಸುವ ಸಲುವಾಗಿ ಕಳೆದ ಮೂರು ವರ್ಷದಿಂದ ಹಮ್ಮಿಕೊಂಡಿದ್ದು, ತಲಕಾವೇರಿಯಿಂದ ಪ್ರತಿ ವರ್ಷ ಪ್ರಾರಂಭಗೊಂಡು ತಮಿಳುನಾಡಿನ ಪೂಂಬಹಾರ್‌ವರೆಗೆ ತೆರಳುತ್ತಿರುವುದಾಗಿ ತಿಳಿಸಿದರು. ಕೂಡಲೆ ತ್ಯಾಜ್ಯ ಸೇರುವುದನ್ನು ತಡೆಯಲು ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಅರಣ್ಯ ಸಚಿವ ಸಿ.ಎಚ್. ವಿಜಯಶಂಕರ್ ಮಾತನಾಡಿ, ತಾಲೂಕಿನಲ್ಲಿ ಐಟಿಸಿ ಕಂಪೆನಿ ವತಿಯಿಂದ ಕೆರೆಗಳ ಹೂಳೆತ್ತಲಾಗುತ್ತಿದೆ. ಅದರ ಜೊತೆಯಲ್ಲೆ ರಾಮೇನಹಳ್ಳಿಯಿಂದ ಕಟ್ಟೆಮಳಲವಾಡಿವರೆಗಿನ 8 ಕಿ.ಮೀ ಉದ್ದದಲ್ಲಿ ನದಿ ಹೂಳೆತ್ತುವುದು ಹಾಗೂ ಇಕ್ಕೆಲಗಳಲ್ಲಿ ಹಸಿರೀಕರಣಕ್ಕೆ ಆದ್ಯತೆ ನೀಡಲಾಗುವುದು. ನದಿಗೆ ಕಲುಷಿತ ನೀರು ಸೇರುತ್ತಿರುವ ವಿಷಯದಲ್ಲಿ ಜನಪ್ರತಿನಿಧಿಗಳಾದ ತಾವೂ ಸೇರಿದಂತೆ ಎಲ್ಲರೂ ಎಡವಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮವಹಿಸುವ ಭರವಸೆ ನೀಡಿದರು.
ಸೇಲಂನ ವಿದ್ಯಾಂಬ ಸರಸ್ವತಿ ಮಾತಾಜಿ, ತಿರುವಣ್ಣಾಮಲೈನ ರತ್ನಚೈತನ್ಯ ಸ್ವಾಮೀಜಿ, ಮೈಸೂರಿನ ರಾಮಕೃಷ್ಣಾಶ್ರಮದ ಸ್ವಾಮೀಜಿ, ಜ್ಞಾನಗಂಗಾ ಸರಸ್ವತಿಸ್ವಾಮಿ ಅದ್ವೈತಾನಂದ ಸ್ವಾಮೀಜಿ, ರಮಾನಂದ, ವರದರಾಜಪಿಳ್ಳೆ, ಎಚ್.ಆರ್. ಗುರುರಾಜ್, ಪಿ.ಪಿ. ಸಾಯಿನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement