ಸಪ್ತ ಯೋಜನೆಗೆ 2,300 ಕೋಟಿ 'ಖಾತ್ರಿ'
ಕ.ಪ್ರ.ವಾರ್ತೆ ಮೈಸೂರು ಅ. 26
ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿಯ ಏಳು ನೂತನ ಕಾರ್ಯಕ್ರಮಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಈ ವರ್ಷ 2,300 ಕೋಟಿ ವ್ಯಯಿಸಲು ಉದ್ದೇಶಿಸಿದೆ. ಇದಲ್ಲದೇ ರಾಜೀವ್ ಗಾಂಧಿ ಚೈತನ್ಯ ಯೋಜನೆಗೆ 105 ಕೋಟಿ ವ್ಯಯಿಸಲು ನಿರ್ಧರಿಸಲಾಗಿದೆ.
ಮೈಸೂರಿನ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ರೈತರ ಕಣ, ಕುರಿ-ದನದ ದೊಡ್ಡಿ, ಸ್ಮಶಾನ ಅಭಿವೃದ್ಧಿ, ನಮ್ಮ ಹೊಲ ನಮ್ಮ ದಾರಿ, ಆಟದ ಮೈದಾನ, ರೈತರ ಭೂ-ಅಭಿವೃದ್ಧಿ, ರಾಜೀವ್ ಗಾಂಧಿ ಚೈತನ್ಯ ಯೋಜನೆಗಳಿಗೆ ಚಾಲನೆ ನೀಡಿ, 15 ಕಾರ್ಯಕ್ರಮಗಳ ಕೈಪಿಡಿ ಬಿಡುಗಡೆ ಮಾಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಮಕ್ಕಳ ದಿನಾಚರಣೆಯ ದಿನವಾದ ನ.14ರಂದು ರಾಜ್ಯದಲ್ಲಿ 10,000 ಆಟದ ಮೈದಾನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಏಳು ನೂತನ ಯೋಜನೆಗಳು ಹಾಗೂ 15 ಕಾರ್ಯಕ್ರಮಗಳ ಕೈಪಿಡಿಯನ್ನು ಪಂಚಾಯತ್ ರಾಜ್ ಸಂಸ್ಥೆಗಳ ಎಲ್ಲ ಸದಸ್ಯರಿಗೆ ತಲುಪುವಂತೆ ಮಾಡಲಾಗುತ್ತದೆ.
ಇವುಗಳ ಪರಿಚಯ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡಲು ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸ್ಯಾಬ್-ಕಾಮ್ ಸ್ಟುಡಿಯೋ ಮೂಲಕ ಉಪಗ್ರಹ ಆಧಾರಿತ ಕಾರ್ಯಕ್ರಮವನ್ನು ನಡೆಸಲಾಗಿದೆ. ರಾಜ್ಯದ ಪಂಚಾಯತ್ ರಾಜ್ ಸಂಸ್ಥೆಗಳ ಸುಮಾರು 95 ಸಾವಿರ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದರು.
ಮಹಿಳೆಯರ ಸಶಕ್ತೀಕರಣಕ್ಕೆ ಒತ್ತು: ಮಹಿಳೆಯರ ಸಶಕ್ತೀಕರಣ ಅಭಿಯಾನದ ಮೂಲಕ ಗ್ರಾಮೀಣ ಬಡವರಲ್ಲಿ ಅತಿ ಬಡವರಾದ ಮಹಿಳೆಯರಿಗೆ ಕೃಷಿ ಮತ್ತು ಕೃಷಿಯಾಧಾರಿತ ಚಟುವಟಿಕೆಗಳ ನಿರ್ವಹಣೆಯಲ್ಲಿ ತರಬೇತಿ ನೀಡಿ, ಮಹಿಳೆಯರು ಕೃಷಿ ಚಟುವಟಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳಲು ಪ್ರೋತ್ಸಾಹಿಸಲಾಗುವುದು. ನಿರ್ಮಲ ಭಾರತ ಅಭಿಯಾನದಡಿ ಪ್ರತಿ ಮನೆಗೂ ಕಡ್ಡಾಯವಾಗಿ ಶೌಚಾಲಯ ಇರಲೇಬೇಕು. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಪ್ರತಿ ಫಲಾನುಭವಿಗಳಿಗೆ ಸರ್ಕಾರದ ಸಹಾಯಧನವಾಗಿ 4,700, ನಿರ್ಮಲ ಭಾರತ್ ಅಭಿಯಾನದಡಿ ಹಾಗೂ ಎಂಜಿಎನ್‌ಆರ್‌ಇಜಿಎಯಲ್ಲಿ 4,500 ನೀಡಲಾಗುತ್ತಿದೆ ಎಂದರು.
ವರದಿ ಬಂದ ನಂತರ ಕ್ರಮ: 2009ರಲ್ಲಿ ಪಿಯು ಕಾಲೇಜುಗಳ ಉಪನ್ಯಾಸಕರಾಗಿ ನೇಮಕವಾಗಿ, ಬಿ.ಇಡಿ ಪದವಿ ಇಲ್ಲ ಎಂಬ ಕಾರಣಕ್ಕೆ ಪ್ರೊಬೆಷನರಿ ಅವಧಿ ಘೋಷಣೆಯಾಗದ ಬಗ್ಗೆ ಶಿಕ್ಷಣ ಇಲಾಖೆಯಿಂದ ವರದಿ ಕೇಳಲಾಗಿದೆ. ಈ ವರದಿ ಬಂದ ನಂತರ ಪರಿಶೀಲಿಸಿ, ಕ್ರಮಕೈಗೊಳ್ಳಲಾಗುವುದು ಎಂದರು.
4,300 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 4,300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದು. ಕಳೆದ ಕೆಲವು ವರ್ಷಗಳಿಂದ ವಿದ್ಯುತ್ ಉತ್ಪಾದನೆ ಕಡೆ ಗಮನಹರಿಸದಿದ್ದರಿಂದ ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ. ಆದರೂ ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಬೀಳುಭೂಮಿ ರೆಸ್ಟೋರ್‌ಗೆ ಮತ್ತೊಮ್ಮೆ ಅರ್ಜಿ ಕರೆಯಲಾಗುವುದು. ಅರ್ಜಿ ಸಲ್ಲಿಸಲು ಮುಂದಿನ ವರ್ಷದ ಜೂ.30ರವರೆಗೆ ಅವಕಾಶ ನೀಡಲಾಗುವುದು. 1,800 ಸರ್ವೆಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಎಲ್ಲ ಕುರುಬರು ಶೈವ ಪಂಥಕ್ಕೆ ಸೇರಿದವರು
ಎಲ್ಲ ಕುರುಬರು ಶೈವ ಪಂಥಕ್ಕೆ ಸೇರಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕುರುಬರಿಗೆ ವೈಷ್ಣವ ದೀಕ್ಷೆ ನೀಡುವುದಾಗಿ ಪೇಜಾವರ ಶ್ರೀಗಳು ನೀಡಿರುವ ಆಹ್ವಾನಕ್ಕೆ ಈ ರೀತಿ ಚುಟುಕಾದ ಪ್ರತಿಕ್ರಿಯೆ ನೀಡಿದರು. ಆ ಮೂಲಕ ಕುರುಬರು ವೈಷ್ಣವ ದೀಕ್ಷೆ ಸ್ವೀಕರಿಸಬೇಕು ಎಂಬ ಪೇಜಾವರ ಶ್ರೀಗಳ ಆಹ್ವಾನಕ್ಕೆ ತಿರುಗೇಟು ನೀಡಿದರು. ಉಜಿರೆಯ ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣದ ಬಗ್ಗೆ ನಡೆಯುತ್ತಿರುವ ಸಿಐಡಿ ತನಿಖೆ ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ. ಸಿಬಿಐ ತನಿಖೆ ನಡೆಸಬೇಕು ಎಂಬ ಬೇಡಿಕೆ ಬಗ್ಗೆ ಈ ಹಂತದಲ್ಲಿ ಏನನ್ನೂ ಹೇಳಲಾರೆ. ಸಿಐಡಿ ವರದಿ ಕೈಸೇರಲಿ. ಅಕ್ರಮ ಗಣಿಗಾರಿಕೆ ಸಂಬಂಧ ವಾರ್ತಾ ಸಚಿವ ಸಂತೋಷ್ ಲಾಡ್ ವಿರುದ್ಧ ಸಮಾಜ ಪರಿವರ್ತನಾ ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಹಿರೇಮಠ ಅವರು ಮಾಡುತ್ತಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಈ ಬಗ್ಗೆ ಹೇಳಬೇಕಾದದ್ದನ್ನು ಈಗಾಗಲೇ ಹೇಳಿದ್ದೇನೆ. ಪದೇ ಪದೇ ಈ ವಿಚಾರವಾಗಿ ಮಾತನಾಡುವುದಿಲ್ಲ ಎಂದರು
ಸಿಎಂ ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಗೈರು
ಮೈಸೂರು: ಸಾಮಾನ್ಯವಾಗಿ ಮುಖ್ಯಮಂತ್ರಿ ಬಂದಲ್ಲಿ ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಜರಿರಬೇಕು. ಆದರೆ ಶನಿವಾರ ಸಿಎಂ ಸಿದ್ದರಾಮಯ್ಯ ಅವರು ಮೈಸೂರಿಗೆ ಬಂದಾಗ, ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರು ಹಾಜರಿರಲಿಲ್ಲ. ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ನಡೆದಿದ್ದು ಇಲಾಖಾ ಕಾರ್ಯಕ್ರಮ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಹಾಜರಿ ಅಗತ್ಯವಿರಲಿಲ್ಲ ಎನ್ನುವುದಾದರೂ ಸಿಎಂ ನಗರದಿಂದ ವಾಪಸ್ ಆಗುವವರೆಗೆ ಶ್ರೀನಿವಾಸಪ್ರಸಾದ್ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ದಸರಾ ಮಹೋತ್ಸವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪಾಸ್ ವಿಚಾರದಲ್ಲಿ ಅಸಮಾಧಾನಗೊಂಡಿದ್ದರು. ಅಲ್ಲದೇ ಜಿಲ್ಲಾಧಿಕಾರಿ ಸಿ. ಶಿಖಾ, ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ವಿರುದ್ಧ ದೂರು ಹೇಳಿದ್ದರು. ವಿಶೇಷವಾಗಿ ಸಲೀಂ ಕಾರ್ಯವೈಖರಿ ಸರಿಯಲ್ಲ. ವರ್ಗಾಯಿಸಬೇಕೆಂದು ಆಗ್ರಹಿಸಿದ್ದರು. ದಸರೆ ಮುಗಿದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಸಿದ್ದರಾಮಯ್ಯ ಅವರು ಎರಡು ವಾರವಾದದೂ ಯಾವುದೇ ಕ್ರಮ ಜರುಗಿಸದಿರುವುದು ಉಸ್ತುವಾರಿ ಸಚಿವರ ಮುನಿಸಿಗೆ ಕಾರಣ ಎಂದು ಹೇಳಲಾಗುತ್ತಿದೆ.
'ಸಾಲ ನೀಡದೆ ಮನ್ನಾ ಪತ್ರ' ದೂರು ನೀಡಿದರೆ ಕ್ರಮ
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಚೈತನ್ಯ ಸಾಲ ಯೋಜನೆಯಲ್ಲಿ ಸಾಲ ನೀಡದೆ ಯಾರಿಗಾದರೂ ಮನ್ನಾ ಪತ್ರ ಕಳುಹಿಸುತ್ತಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕು ಬನ್ನೂರು ಹೊರಕೇರಿ ನಿವಾಸಿ ಎಲ್. ಸರೋಜಾ ಎಂಬವರಿಗೆ ನಿಗಮ ಸಾಲ ನೀಡಿದೆ ಈಗ ಮನ್ನಾ ಪತ್ರವನ್ನು ಮನೆ ಬಾಗಿಲಿಗೆ ಕಳುಹಿಸಿದೆ ಎಂಬ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರ ಗಮನ ಸೆಳೆದಾಗ, ಈ ರೀತಿ ಸಾಲ ಪಡೆಯವರು ದೂರು ನೀಡಿದರೆ ಕ್ರಮ ಜರುಗಿಸಲಾಗುವುದು ಎಂದರು. ಅ.20ರ 'ಕನ್ನಡಪ್ರಭ'ದಲ್ಲಿ ಈ ಕುರಿತು ವಿಶೇಷ ವರದಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.