ಗುಲಾಮಗಿರಿಯಿಂದ ದೇಶ ಬಚಾವ್ ಆಗಬೇಕು
ಕ.ಪ್ರ.ವಾರ್ತೆ ಮೈಸೂರು ಸೆ. 1
ಶಿಕ್ಷಣ ವ್ಯವಸ್ಥೆಯಲ್ಲಿ ನಾವಿನ್ನೂ ಗುಲಾಮಗಿರಿ ಮನಸ್ಥಿತಿಯಲ್ಲಿದ್ದೇವೆ. ಇದರಿಂದ ಭಾರತ ಬಚಾವ್ ಆಗಬೇಕು ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.
ಪ್ರಗತಿ ಸೇವಾ ಟ್ರಸ್ಟ್ ವತಿಯಿಂದ ಮಹಾರಾಜ ಕಾಲೇಜು ಜೂನಿಯರ್ ಬಿ.ಎ ಹಾಲ್‌ನಲ್ಲಿ ಭಾನುವಾರ ಸಂಜೆ ನಡೆದ ಪೌರ ಕಾರ್ಮಿಕರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣದಲ್ಲಿ ಗುಲಾಮಗಿರಿ ಮನಸ್ಸು ತೊಂದರೆಯಾಗಿದೆ. ಪ್ರಾಥಮಿಕ ಹಂತದಲ್ಲಿ ಸಮಾನ ಶಿಕ್ಷಣ ಸಿಗಬೇಕು. ಐರೋಪ್ಯ ರಾಷ್ಟ್ರಗಳಲ್ಲಿ ನಗರದಿಂದ ಹಳ್ಳಿಯವರೆಗೂ ಒಂದೇ ಶಿಕ್ಷಣ, ಶುಲ್ಕ, ಪಠ್ಯ ಇದೆ ಎಂದು ಅವರು ತಿಳಿಸಿದರು.
ನೂರು ವರ್ಷಗಳ ಹಿಂದೆ ಅಸ್ಪೃಶ್ಯರಿಗೆ ಶಿಕ್ಷಣ ಕೊಡಬಾರದೆಂದು ಹೇಳುತ್ತಿದ್ದರು. ತಳ ಸಮುದಾಯಕ್ಕೆ ಶಿಕ್ಷಣ ಕೊಡುವುದು ಧರ್ಮವಲ್ಲ, ಸಂಸ್ಕೃತಿಯಲ್ಲ ಎಂಬ ಕಾಲ ಇತ್ತು. ಶಿಕ್ಷಣ ಕೊಡಬಾರದೆಂಬುದು ನೀಚ ಸಂಸ್ಕೃತಿ. ಆದರೆ, ಈಗಿನ ಪರಿಸ್ಥಿತಿ ಹಾಗಿಲ್ಲ. ನಾಗರಿಕ ಸಮುದಾಯ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ಆತ್ಮವಿಶ್ವಾಸ, ಅವಕಾಶ ಸಿಕ್ಕರೆ ಏನು ಬೇಕಾದರೂ ಸಾಧಿಸಬಹುದು. ಉತ್ತೇಜನ ನೀಡಬೇಕು. ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಪರಿಹಾರ ಸಾಧ್ಯ ಎಂಬುದನ್ನು ಮೂರು ಸಣ್ಣ ಕಥೆಗಳ ಮೂಲಕ ಅವರು ವಿವರಿಸಿದರು. ಇದೇ ವೇಳೆ ತಾವು ಬರೆದ ಒಡಲಾಳ ಕೃತಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.
ಶಿಕ್ಷಣ ಸಂಸ್ಥೆ ಬೆಳೆಸಿ: ಮೈಸೂರು ವಿವಿ ಅರ್ಥಶಾಸ್ತ್ರ ವಿಷಯದಲ್ಲಿ ಪ್ರಥಮ ರ್ಯಾಂಕ್, 5 ಚಿನ್ನದ ಪದಕ ಪಡೆದ ಜ್ಯೋತಿ ರಂಗಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೌರಕಾರ್ಮಿಕರ ಶಿಕ್ಷಣ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಬೆಳೆಯಬೇಕು. ಆ ಸಂಸ್ಥೆಗಳ ಮೂಲಕ ಜನಾಂಗದ ಮಕ್ಕಳಿಗೆ ಶಿಕ್ಷಣವನ್ನು ಕ್ರಮವಾಗಿ ಕಲಿಸಬೇಕು ಎಂದು ಹೇಳಿದರು. ಮೈಸೂರು ವಿವಿ ಕುಲಸಚಿವ ಪ್ರೊ.ಸಿ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಚಿಂತಕ ಪ್ರೊ.ಎಚ್. ಗೋವಿಂದಯ್ಯ, ಮಹಾರಾಜ ಕಾಲೇಜು ಮನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಸಿ. ರಾಮಸ್ವಾಮಿ, ಹಿರಿಯ ವಕೀಲ ಸಿ. ಶೇಷಯ್ಯ ಸೇರಿದಂತೆ ಇತರರಿದ್ದರು.