ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದ್ವಾರಕೀಶ್ ಜಿಪಂ ಹಂಗಾಮಿ ಅಧ್ಯಕ್ಷ

Srinivasa Murthy VN
Updated On : 2 Sept 2013, 12:40 pm

ಕ.ಪ್ರ.ವಾರ್ತೆ ಮೈಸೂರು ಸೆ. 1
ಮೈಸೂರು ಜಿಲ್ಲಾ ಪಂಚಾಯಿತಿಯ ಹಂಗಾಮಿ ಅಧ್ಯಕ್ಷರಾಗಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ಸೋಮವಾರ (ಸೆ.2) ಬೆಳಗ್ಗೆ 11ಕ್ಕೆ ಅಧಿಕಾರ ಸ್ವೀಕರಿಸಲಿದ್ದಾರೆ.
ಈವರೆಗೆ ಅಧ್ಯಕ್ಷರಾಗಿದ್ದ ಕಾ.ಪು. ಸಿದ್ದವೀರಪ್ಪ ಹಾಗೂ ಉಪಾಧ್ಯಕ್ಷರಾಗಿದ್ದ ಎಂ.ಕೆ. ಸುಚಿತ್ರಾ ಅವರು ನೀಡಿರುವ ರಾಜಿನಾಮೆ ಅಂಗೀಕಾರವಾಗಿರುವುದರಿಂದ ಮುಂದಿನ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆವರೆಗೆ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮೈಸೂರು ಜಿಪಂನಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಆಡಳಿತವಿತ್ತು. ಆದರೆ ಈಗ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಿಜೆಪಿಯ ಮೂವರು ಸದಸ್ಯರು ಕಾಂಗ್ರೆಸ್ ಜತೆ ಕೈಜೋಡಿಸಿ, ಅವಿಶ್ವಾಸ ನಿರ್ಣಯಕ್ಕೆ ಸಭೆ ಕರೆಯುವಂತೆ ಮೊದಲು ಅಧ್ಯಕ್ಷರಿಗೆ, ನಂತರ ಉಪಾಧ್ಯಕ್ಷರಿಗೆ ಮನವಿಪತ್ರ ಸಲ್ಲಿಸಿದ್ದರು. ಆದರೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ರಾಜಿನಾಮೆಯ ದಾಳ ಉರುಳಿಸಿ, ಸಭೆ ನಡೆಯದಂತೆ ನೋಡಿಕೊಂಡಿದ್ದರು. ಮತ್ತೆ ರಾಜಿನಾಮೆ ಹಿಂಪಡೆದಿದ್ದರು. ಅಂತಿಮವಾಗಿ ಮತ್ತೆ ರಾಜಿನಾಮೆ ನೀಡಿದ್ದರು.
ಮೊದಲೇ ಪೈಪೋಟಿ ನಡೆದಿತ್ತು: ಒಟ್ಟು 46 ಸದಸ್ಯ ಬಲದ ಜಿಪಂನಲ್ಲಿ ಕಾಂಗ್ರೆಸ್- 21, ಜೆಡಿಎಸ್- 16, ಬಿಜೆಪಿ- 8, ಹಾಗೂ ಪಕ್ಷೇತರ- 1 ಸದಸ್ಯರು ಇದ್ದಾರೆ. ಅಧಿಕಾರ ಹಿಡಿಯಲು 23 ಸದಸ್ಯರ ಬೆಂಬಲ ಬೇಕು. 30 ತಿಂಗಳ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಹೊಂದಾಣಿಕೆ ನಡೆದಿತ್ತು.
ಮೈಸೂರು ನಗರಪಾಲಿಕೆಯಲ್ಲಿ ಆದಂತೆ ಇಲ್ಲಿ ಕೂಡ ಉಭಯ ಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳಲು ಯತ್ನಿಸಿದ್ದವು. ಆದರೆ ಎರಡೂ ಪಕ್ಷಗಳು ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿದ್ದರಿಂದ ಹೊಂದಾಣಿಕೆ ಮುರಿದು ಬಿತ್ತು. ಜೆಡಿಎಸ್- ಬಿಜೆಪಿಯೊಂದಿಗೆ ಸೇರಿ ಅಧಿಕಾರ ಹಿಡಿಯಿತು.
ಮೊದಲ 20 ತಿಂಗಳ ಅವಧಿಯಲ್ಲಿ 16 ತಿಂಗಳು ಜೆಡಿಎಸ್‌ನ ಜೆ. ಸುನೀತಾ ವೀರಪ್ಪಗೌಡ- ಅಧ್ಯಕ್ಷೆ, ಬಿಜೆಪಿಯ ಡಾ.ಶಿವರಾಂ- ಉಪಾಧ್ಯಕ್ಷರಾಗಿದ್ದರು. ಇವರ ರಾಜಿನಾಮೆಯ ನಂತರ ಉಳಿದ 3 ತಿಂಗಳ ಅವಧಿಗೆ ಜೆಡಿಎಸ್‌ನ ಭಾಗ್ಯ ಶಿವಮೂರ್ತಿ- ಅಧ್ಯಕ್ಷೆ, ಬಿಜೆಪಿಯ ಎಚ್.ಆರ್. ಭಾಗ್ಯಲಕ್ಷ್ಮಿ- ಉಪಾಧ್ಯಕ್ಷೆಯಾಗಿದ್ದರು.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅಂದರೆ 11 ತಿಂಗಳ ಹಿಂದೆ ಎರಡನೇ ಅವಧಿಗೆ ಚುನಾವಣೆ ನಡೆದಾಗ ಬಿಜೆಪಿಯ ಕಾ.ಪು. ಸಿದ್ದವೀರಪ್ಪ- ಅಧ್ಯಕ್ಷರು, ಜೆಡಿಎಸ್‌ನ ಎಂ.ಕೆ. ಸುಚಿತ್ರಾ- ಉಪಾಧ್ಯಕ್ಷರಾಗಿದ್ದರು. ವರುಣ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿದ್ದ ಕಾ.ಪು. ಸಿದ್ದಲಿಂಗಸ್ವಾಮಿ ಅವರು ಬಿಜೆಪಿಯ ಸದಸ್ಯರ ಮನವೊಲಿಸಿ, ಚುನಾವಣೆ ತನಕ ನನ್ನ ಸಹೋದರ ಸಿದ್ದವೀರಪ್ಪ ಅಧ್ಯಕ್ಷರಾಗಿರಲಿ. ನಂತರ ಮಂಜುಳಾ ಪುಟ್ಟಸ್ವಾಮಿ ಅವರಿಗೆ ಬಿಟ್ಟುಕೊಡುವುದಾಗಿ ಹೇಳಿದ್ದರು. ಆದರೆ ಅದರಂತೆ ನಡೆದುಕೊಳ್ಳಲಿಲ್ಲ ಎಂದು ಒಂದು ಗುಂಪು ವಾದಿಸಿದರೆ, 10 ತಿಂಗಳ ನಂತರ ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿ ಒಪ್ಪಂದವಾಗಿತ್ತು ಎನ್ನುತ್ತಾರೆ.
ಏತನ್ಮಧ್ಯೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಸಿಎಂ ಆಗಿರುವುದರಿಂದ ಪಕ್ಷೇತರ ಸದಸ್ಯ ಎಲ್.ಮಾದಪ್ಪ, ಬಿಜೆಪಿಯ ಮಂಜುಳಾ ಪುಟ್ಟಸ್ವಾಮಿ, ಎಸ್.ಎಂ. ಕೆಂಪಣ್ಣ ಹಾಗೂ ಡಾ.ಶಿವರಾಂ ಅವರು ಕಾಂಗ್ರೆಸ್ ಸದಸ್ಯರ ಜತೆ ಕೈಜೋಡಿಸಿ, ಅಧ್ಯಕ್ಷ- ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಿದ್ದರು. ಬಿಜೆಪಿಯ ಈ ಮೂವರು ಸದಸ್ಯರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ಮುಂದಿನ ಅಧಿಕಾರ ಯಾರಿಗೆ ಎಂಬುದು ನಿರ್ಧಾರವಾಗುತ್ತದೆ.
ಸೆ.5 ರಂದು ನಡೆಯಲಿರುವ ನಗರಪಾಲಿಕೆಯ ಮೇಯರ್- ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಖಚಿತವಾದಲ್ಲಿ ಜಿಪಂನಲ್ಲೂ ಮುಂದುವರಿಯಬಹುದು. ಆದರೆ ಎಲ್ಲವೂ ಮಂಜುಳಾ ಪುಟ್ಟಸ್ವಾಮಿ, ಕೆಂಪಣ್ಣ ಹಾಗೂ ಡಾ.ಶಿವರಾಂ ಅವರ ತೀರ್ಮಾನ ಅವಲಂಬಿಸಿದೆ. ಈ ಮೂವರು ಪಟ್ಟು ಸಡಿಲಿಸದಿದ್ದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement