ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಭಿಕರ ಸಾಲಿನಲ್ಲಿ ರಾಮ, ಗೋಮ

Srinivasa Murthy VN
Updated On : 2 Sept 2013, 12:43 pm

ಮುಂದಿನ 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸಲು ರಾಜ್ಯದಲ್ಲಿ ಅಸ್ತಿತ್ವಕ್ಕೆ ತರಲಾದ ನಮೋ ಬ್ರಿಗೇಡ್‌ನ ಮೈಸೂರು ಶಾಖೆ ಉದ್ಘಾಟನಾ ಸಮಾರಂಭವು ಹಲವು ವಿಶೇಷತೆಗಳಿಂದ ಕೂಡಿತ್ತು.
ಸಮಾರಂಭದಲ್ಲಿ ಹೆಚ್ಚಾಗಿ ಯುವಪಡೆ ಭಾಗವಹಿಸಿತ್ತು. ಕಾರ್ಯಕ್ರಮದ ಮೊದಲಿಗೆ ನಮೋ ಬ್ರಿಗೇಡ್ ಉದ್ದೇಶ ತಿಳಿಸಿದ ಸದಸ್ಯ ನಿಶ್ಚಿತ್, ನಮೋ ಬ್ರಿಗೇಡ್ ಅನ್ನು ಪಕ್ಷಾತೀತವಾಗಿ ಸ್ಥಾಪಿಸಲಾಗಿದೆ. ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡುವುದೇ ಸಂಸ್ಥೆಯ ಉದ್ದೇಶವಾಗಿದೆ. ನಗರ ಮಟ್ಟದಲ್ಲಿ ಈ ಬಗ್ಗೆ ಮಾಹಿತಿ ಸಿಕ್ಕಿದ್ದು, ಗ್ರಾಮಾಂತರ ಪ್ರದೇಶಕ್ಕೂ ಸಂದೇಶ ತಲುಪಿಸಲು ತಂತ್ರ ರೂಪಿಸಲಾಗುವುದು. ನಮೋ ಬ್ರಿಗೇಡ್ ಬಿಜೆಪಿ ಅಂಗ ಸಂಸ್ಥೆಯಲ್ಲ. ಆದರೆ, ಈ ಸಂಸ್ಥೆಯಿಂದ ಬಿಜೆಪಿಗೆ ಅನುಕೂಲವಾದರೂ ತೊಂದರೆ ಇಲ್ಲ ಎಂದರು. ಈ ಸಮಾರಂಭದಲ್ಲಿ ಮಾಜಿ ಸಚಿವ ಎಸ್.ಎ. ರಾಮದಾಸ್, ಶಾಸಕ ಗೋ. ಮಧುಸೂದನ್ ಸೇರಿದಂತೆ ನಗರದ ಅನೇಕ ಬಿಜೆಪಿ ಮುಖಂಡರು ಭಾಗವಹಿಸಿದ್ದರು. ಆದರೆ, ವೇದಿಕೆಯಲ್ಲಿ ಗಣ್ಯರು ಮಾತ್ರ ಪೀಠಾಲಂಕರಿಸಿದ್ದರು. ಉಳಿದಂತೆ ಎಲ್ಲರೂ ವೇದಿಕೆ ಮುಂಭಾಗ ಆಸೀನರಾಗಿದ್ದರು. ಹೀಗಾಗಿ ಯಾವೊಬ್ಬ ಬಿಜೆಪಿ ಮುಖಂಡರಿಗೂ ವಿಶೇಷ ಮನ್ನಣೆ ನೀಡದಿದ್ದುದು ಕಾರ್ಯಕ್ರಮದ ವಿಶೇಷವಾಗಿತ್ತು.

ಪ್ರದರ್ಶನಕ್ಕೆ ಜನರ ದಾಂಗುಡಿ
ಕ.ಪ್ರ.ವಾರ್ತೆ ಮೈಸೂರು ಸೆ. 1
ಕಲಾವಿದ ಬಾದಲ್ ನಂಜುಂಡಸ್ವಾಮಿ ರಚಿಸಿರುವ ಮೇಷಿನ್- ಮನುಷ್ಯ ಚಿತ್ರಕಲಾ ಪ್ರದರ್ಶನವು ಭಾನುವಾರ ಸರಸ್ವತಿಪುರಂನ ಸಬ್‌ರಂಗ್ ಕಲಾ ಗ್ಯಾಲರಿಯಲ್ಲಿ ಆರಂಭವಾಯಿತು. ಇಂದಿನ ದಿನಗಳಲ್ಲಿ ಮಾನವ ಪ್ರತಿಯೊಂದು ಕೆಲಸಗಳನ್ನು ಯಂತ್ರಗಳು ಹೇಗೆ ಕಸಿದುಕೊಂಡಿವೆ. ಯಂತ್ರಗಳ ಮಧ್ಯಸ್ಥಿಕೆಯಿಂದ ಕಂಗೆಟ್ಟಿರುವ ಮಾನವ ಮಾನಸಿಕ ತೊಳಲಾಟದಿಂದ ಏನೆಲ್ಲಾ ಸಂಕಷ್ಟ ಎದುರಿಸುತ್ತಿದ್ದಾನೆ ಎಂಬ ಪ್ರಮುಖ ಅಂಶವನ್ನು ಆಧಾರವಾಗಿಟ್ಟುಕೊಂಡು ರಚಿಸಿರುವ ಮೇಷಿನ್- ಮಾನವ ಕಲಾಕೃತಿಗಳು ಜನರ ಗಮನ ಸಳೆದವು.
ಕಳೆದ ಐದು ವರ್ಷಗಳಿಂದ ರಚಿಸಿರುವ ಒಟ್ಟು ಆರು ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಮಾನವನ ದೇಹರಚನೆಯಲ್ಲಿ ಮೇಷಿನ್ ಚಿತ್ರಗಳು, ಪ್ರಕೃತಿಯ ಸಂಕೇತವಾಗಿರುವ ಮರದ ಚಿತ್ರದಲ್ಲಿ ಯಂತ್ರಗಳ ಬೇರುಗಳು ಯಾವ ರೀತಿ ಹಬ್ಬಿವೆ. ಪ್ರದರ್ಶನದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ವಾಸು ಮಾತನಾಡಿ, ಪರಿಸರದಲ್ಲಿ ಮನುಷ್ಯನ ಸ್ವೇಚ್ಛಾಚಾರ ಎಲ್ಲೆ ಮೀರಿದೆ. ಎಲ್ಲ ಲೋಪವು ನಮ್ಮಿಂದಲೇ ಆಗಿದೆ ಎಂದರು. ಮುಖ್ಯ ಅತಿಥಿಯಾಗಿ ಕಲಾವಿದ ಕೆ.ಟಿ. ಶಿವಪ್ರಸಾದ್, ಅಧ್ಯಾಪಕ ಡಿ.ಎ. ಉಪಾಧ್ಯ, ಕಲಾ ಪೋಷಕರಾದ ಕೆ. ಮುದ್ದುಕೃಷ್ಣ, ರಾಜಶೇಖರ ಕದಂಬ, ಶ್ರೀಕಂಠ ಗುಂಡಪ್ಪ, ಎಚ್.ಆರ್. ಲೀಲಾವತಿ, ಕಲಾವಿದ ಬಾದಲ್ ನಂಜುಂಡಸ್ವಾಮಿ ಇದ್ದರು.

ನಾಳೆ ಕ್ಯಾನ್ಸರ್ ಉಚಿತ ತಪಾಸಣೆ
ಮೈಸೂರು: ಭಾರತ್ ಆಸ್ಪತ್ರೆ ಮತ್ತು ಗ್ರಂಥಿ ಸಂಸ್ಥೆ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಸಹಯೋಗದಲ್ಲಿ ವಿಶೇಷವಾಗಿ ಬಿಪಿಎಲ್ ಪಡಿತರದಾರರಿಗೆ ವಾಜಪೇಯಿ ಆರೋಗ್ಯ ಯೋಜನೆಯಡಿ ಸೆ.3 ರಂದು ಕ್ಯಾನ್ಸರ್ ತಪಾಸಣೆ ಶಿಬಿರ ಏರ್ಪಡಿಸಿದೆ. ಅಂದು ಬೆಳಗ್ಗೆ 10ಕ್ಕೆ ಕೆ.ಆರ್.ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಿರುವ ಈ ಶಿಬಿರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ವೈದ್ಯರು ತಪಾಸಣೆ ನಡೆಸುವರು. ಸ್ತನದಲ್ಲಿ ಊತ, ಗಂಟು, ಅಥವಾ ಶರೀರದ ಯಾವುದೇ ಭಾಗದಲ್ಲಿ ಗಡಸುತನ ಹಾಗೂ ರಕ್ತ ಸಾವ್ರ, ಒಂದು ತಿಂಗಳು ಮೇಲ್ಪಟ್ಟು ವಾಸಿಯಾಗದ ಬಾಯಿ, ಚರ್ಮ ಮತ್ತಿತರ ಭಾಗಗಳ ಗಾಯ, ನುಂಗಲಾರದ ತೊಂದರೆ ಅಥವಾ ತಡೆ ಹಾಗೂ ಗಂಟಲಿನ ನೋವು ಅಥವಾ ಬದಲಾವಣೆ ಇಂತಹ ಸಮಸ್ಯೆ ಇರುವವರು ಶಿಬಿರದ ಪ್ರಯೋಜನ ಪಡೆಯಬಹುದು. ಮಾಹಿತಿಗೆ ಸಂಪರ್ಕಾಧಿಕಾರಿ ನಿಶಾಂತ್ ಮೊ. 9343288726 ಸಂಪರ್ಕಿಸಬಹುದು.

ರಘು ಆಚಾರ್ ಗೆಲವಿಗೆ ಪೂಜೆ
ಮೈಸೂರು: ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಜಿ.ರಘು ಆಚಾರ್ ಅವರಿಗೆ ಶುಭ ಕೋರಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಲದವರು ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ರಘು ಆಚಾರ್ ಅವರಿಗೆ ಶುಭ ಕೋರಿ ಚಾಮುಂಡೇಶ್ವರಿ ದೇವಿಗೆ 101 ತೆಂಗಿನಕಾಯಿ ಒಡೆದಿದ್ದಾರೆ. ಮಹಾಮಂಡಲದ ಜಿಲ್ಲಾಧ್ಯಕ್ಷ ಸಿ.ಟಿ. ಆಚಾರ್ಯ, ಯುವ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಎಲ್. ರವಿಕುಮಾರ್, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹುಚ್ಚಪ್ಪಾಚಾರ್, ನಗರ ಚಿನ್ನ, ಬೆಳ್ಳಿ ಕೆಲಸಗಾರರ ಬಳಗದ ಅಧ್ಯಕ್ಷ ಆರ್. ಜಯಕುಮಾರ್, ಮುಖಂಡರಾದ ಆದರ್ಶ್ ಆಚಾರ್, ಹುಯಿಲಾಳು ಕುಮಾರ್, ದಯಾನಂದ್ ವಿಶ್ವಕರ್ಮ, ಗೋವಿಂದಾಚಾರ್, ಟಿ. ರಾಜಗೋಪಾಲ್, ಎಂ. ಮೊಗಣಚಾರ್, ಮಹೇಶ್, ದೀಪು ಇದ್ದರು.

ಸಿಎಂಗೆ ಅಭಿನಂದನೆ
ಮೈಸೂರು: ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ಹೆಚ್ಚಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ. ರಾಮು ಅಭಿನಂದಿಸಿದ್ದಾರೆ. ಸಂಘದ ರಾಜ್ಯಾಧ್ಯಕ್ಷರಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿರುವ ಎಲ್. ಭೈರಪ್ಪ ಅವರಿಗೂ ಅಭಿನಂದನೆ ತಿಳಿಸಿದ್ದಾರೆ.

4ಕ್ಕೆ ಹೆಲ್ಮೆಟ್ ಉಚಿತ ವಿತರಣೆ
ಮೈಸೂರು: ಕೆ.ಎಂ. ಪ್ರವೀಣ್‌ಕುಮಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಂಚಾರ ಜಾಗೃತಿ ಮೂಡಿಸಲು ಸಲುವಾಗಿ ಅರ್ಹರಿಗೆ ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಸೆ.4 ರಂದು ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ವಿಕ್ರಮ್ ತಿಳಿಸಿದ್ದಾರೆ. ಅಂದು ಬೆಳಗ್ಗೆ 11.30ಕ್ಕೆ ಸಂಸ್ಕೃತ ಪಾಠಶಾಲೆ ವೃತ್ತ, ಮಧ್ಯಾಹ್ನ 12.30ಕ್ಕೆ ಒಂಟಿಕೊಪ್ಪಲು ವೃತ್ತ ಹಾಗೂ ಸಂಜೆ 4.30ಕ್ಕೆ ಆರ್‌ಟಿಒ ವೃತ್ತದಲ್ಲಿ ಹೆಲ್ಮೆಟ್ ವಿತರಿಸಲಾಗುವುದು. ಹೆಲ್ಮೆಟ್ ಧರಿಸದವರಿಗೆ ಅರಿವು ಮೂಡಿಸಿ, ಹೆಲ್ಮೆಟ್ ಉಚಿತವಾಗಿ ನೀಡಲಾಗುವುದು. ಡಿಸಿಪಿ ಎಂ.ಎಂ. ಮಹದೇವಯ್ಯ, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ದೀಪಕ್ ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement