ಏಳು ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಸಂಭ್ರಮ
ಕ.ಪ್ರ.ವಾರ್ತೆ ಮೈಸೂರು ಸೆ. 18
ಈ ಬಾರಿಯೂ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಅರಮನೆ, ಜಗನ್ಮೋಹನ ಅರಮನೆ, ಕಲಾಮಂದಿರ, ಪುರಭವನ, ಗಾನ ಭಾರತಿ, ಕುಪ್ಪಣ್ಣ ಪಾರ್ಕ್ ಮತ್ತು ಚಿಕ್ಕಗಡಿಯಾರದ ಆವರಣದಲ್ಲಿ ನಡೆಯಲಿದೆ.
ಅರಮನೆ ಆವರಣದಲ್ಲಿ 29, ಜಗನ್ಮೋಹನ ಅರಮನೆ, ಕಲಾಮಂದಿರ, ಗಾನಭಾರತಿ, ಪುರಭವನದಲ್ಲಿ ತಲಾ 27, ಕುಪ್ಪಣ್ಣ ಪಾರ್ಕ್ ಮತ್ತು ಚಿಕ್ಕಗಡಿಯಾರದ ಬಳಿ ತಲಾ 9 ಕಾರ್ಯಕ್ರಮಗಳು ಸೇರಿದಂತೆ ಏಳು ವೇದಿಕೆಗಳಲ್ಲಿ ಒಟ್ಟು 155 ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ದಸರಾ ಸಾಂಸ್ಕೃತಿಕ ಉಪ ಸಮಿತಿಯ ಅಧ್ಯಕ್ಷ ಕೆ.ಆರ್. ಮೋಹನ್‌ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲಾವಿದರ ಆಯ್ಕೆಗಾಗಿ ಕೆಲವು ಮಾನದಂಡ ಅನುಸರಿಸಲಾಗಿದೆ. ಕಳೆದ 3 ವರ್ಷಗಳಲ್ಲಿ ಕಾರ್ಯಕ್ರಮ ನೀಡಿದವರಿಗೆ ಈಗ ಅವಕಾಶ ಇಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶೇ.40 ಸ್ಥಳೀಯರಿಗೆ, ಶೇ.30 ಹೊರ ಜಿಲ್ಲೆಯವರಿಗೆ, ಶೇ.20 ರಾಜ್ಯಮಟ್ಟದ ಕಲಾವಿದರಿಗೆ, ಶೇ.10 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಲಾವಿದರನ್ನು ಆಯ್ಕೆ ಮಾಡಲಾಗುವುದು ಎಂದರು.
ಅ.6ಕ್ಕೆ ಉದ್ಘಾಟನೆ: ಅ.5ರ ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಹಾಗೂ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಅ.6 ರಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಸೂರ್ಯನಿಂದ ಚಂದ್ರನೆಡೆಗೆ ಎಂಬ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಳೀಯ ಕಲಾವಿದರಿಂದ ಮೈಸೂರು ಅರಮನೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ದಸರಾ ಉಪ ವಿಶೇಷಾಧಿಕಾರಿ ಡಾ.ಸಿ.ಜಿ. ಬೆಟ್‌ಸೂರಮಠ, ಕಾರ್ಯಾಧ್ಯಕ್ಷ ವಿ.ಎಸ್. ಮಲ್ಲಿಕಾರ್ಜುನಸ್ವಾಮಿ, ಸದಸ್ಯ ಕಾರ್ಯದರ್ಶಿಗಳಾದ ನಿರ್ಮಲಾ ಮಠಪತಿ, ಎಂ.ಎಸ್. ಮರಿಸ್ವಾಮಿಗೌಡ, ಸದಸ್ಯರಾದ ಶಾರದಾ ಸಂಪತ್, ಜಯರಾಮಾಚಾರ್, ಎನ್.ಎಸ್. ಗೋಪಿನಾಥ್, ಲಲಿತಾ, ಮೂಗೂರು ನಂಜುಂಡಸ್ವಾಮಿ ಇದ್ದರು.
ನಾಳೆ ನೀರು ಪೂರೈಕೆ ವ್ಯತ್ಯಯ
ಮೈಸೂರು: ಹೊಂಗಳ್ಳಿ ಮತ್ತು ಬೆಳಗೊಳ ಯಂತ್ರಾಗಾರಗಳಿಗೆ ಸೆ.19 ರಂದು ಸೆಸ್ಕ್ ವತಿಯಿಂದ ವಿದ್ಯುತ್ ಸರಬರಾಜು ನಿಲುಗಡೆ ಮಾಡುವುದಾಗಿ ತಿಳಿಸಿದ್ದು, ಸೆ.19 ರಂದು ನಗರಕ್ಕೆ ಪೂರ್ಣ ಪ್ರಮಾಣದಲ್ಲಿ ನೀರನ್ನು ಪಂಪ್ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸೆ.20 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ನೀರು ಬಂದ ವೇಳೆಯಲ್ಲಿ ನೀರನ್ನು ಶೇಖರಿಸಿಕೊಂಡು ನಗರಪಾಲಿಕೆಯೊಂದಿಗೆ ಸಹಕರಿಸುವಂತೆ ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಕೋರಿದ್ದಾರೆ. ನೀರು ಸರಬರಾಜು ವ್ಯತ್ಯಯವಾಗುವ ಪ್ರದೇಶಗಳು. ಜಯಲಕ್ಷ್ಮೀಪುರಂ, ಪಡುವಾರಹಳ್ಳಿ, ಒಂಟಿಕೊಪ್ಪಲು, ಕುಂಬಾರಕೊಪ್ಪಲು, ಸರಸ್ವತಿಪುರಂ, ಜನತಾನಗರ, ಗಂಗೋತ್ರಿ ಬಡಾವಣೆ, ಶಾರದಾದೇವಿನಗರ, ಕೆ.ಜಿ. ಕೊಪ್ಪಲು, ಹೂಟಗಳ್ಳಿ, ಕೆಎಚ್‌ಬಿ ಕಾಲೋನಿ, ಮಂಡಿಮೊಹಲ್ಲಾ, ತಿಲಕ್‌ನಗರ, ಬನ್ನಿಮಂಟಪ, ಲಷ್ಕರ್ ಮೊಹಲ್ಲಾ ಭಾಗಶಃ, ದೇವರಾಜ ಮೊಹಲ್ಲಾ ಭಾಗಶಃ, ಇತ್ಯಾದಿ ಪ್ರದೇಶಗಳು.