ನೀರಿಲ್ಲದೆ ಒಣಗುತ್ತಿರುವ ಕೆರೆ
ಕೆ.ಟಿ. ಮೋಹನ್ಕುಮಾರ್
ಕ.ಪ್ರ.ವಾರ್ತೆ ಸಾಲಿಗ್ರಾಮಸೆ. 18
ದೇವರು ವರ ಕೊಟ್ಟರೂ ಪೂಜಾರಿ ಮಾತ್ರ ಕೊಡುವುದಿಲ್ಲ ಎಂಬ ನಾಣ್ಣುಡಿಯಂತೆ, ಈ ಸಾಲಿನಲ್ಲಿ ಉತ್ತಮವಾಗಿ ಮಳೆಯಾಗಿ ಅಣೆಕಟ್ಟೆಗಳು ತುಂಬಿ ನಾಲೆಗಳಲ್ಲಿ ನೀರು ಹರಿಯುತ್ತಿದೆ. ಆದರೆ ಕೆರೆ-ಕಟ್ಟೆಗಳು ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದಿಗೂ ಬರಡಾಗಿವೆ. ಇಂತಹ ಘಟನೆಗೆ ಒಳಗಾಗಿರುವ ಪ್ರಮುಖ ಕೆರೆಯು ಕೆ.ಆರ್. ನಗರ ತಾಲೂಕಿನ ಮಾವನೂರು ಗ್ರಾಮದಲ್ಲಿದೆ.
ಸುಮಾರು 15 ಎಕರೆಗೂ ಹೆಚ್ಚಿನ ವಿಸ್ತೀರ್ಣವುಳ್ಳ ಸರ್ಕಾರಿ ಕೆರೆಯು ಈ ಬಾರಿ ವರುಣ ವರ ಕೊಟ್ಟು, ನಾಲೆಯಲ್ಲಿ ನೀರು ಹರಿಯುತ್ತಿದ್ದರೆ, ಈ ಭಾಗದ ನೀರಾವರಿ ಇಲಾಖೆಯ ಎಂಜಿನಿಯರ್ಗಳು ಮಾತ್ರ ಇದಕ್ಕೆ ಸ್ಪಂದಿಸದೆ ಬೇಜವಾಬ್ದಾರಿತನ ತೋರಿದ್ದಾರೆ. ಈ ಮೂಲಕ ರೈತ ಸಮುದಾಯಕ್ಕೆ ವ್ಯವಸಾಯ ಮಾಡುವ ಕಾಲದಲ್ಲಿ ಕೊಡಲಿ ಪೆಟ್ಟು ನೀಡಿರುವುದು ಕಂಡುಬಂದಿದೆ.ಈ ಕೆರೆಯ ಅಚ್ಚುಕಟ್ಟಿನಲ್ಲಿ ಮಾವನೂರು ಮತ್ತು ಕೆಡಗ ಗ್ರಾಮಗಳ ರೈತರಿಗೆ ಸೇರಿದ ನೂರಾರು ಎಕರೆ ಜಮೀನು ಇದ್ದು ಇಲ್ಲಿ ಪ್ರಮುಖವಾಗಿ ಹೊಗೆಸೊಪ್ಪು, ತೆಂಗು, ಅಡಿಕೆ, ಬಾಳೆ, ಬತ್ತ, ಮೆಣಸಿನಕಾಯಿ ಹಾಗೂ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಈ ಕೆರೆಯ ಭಾಗದಲ್ಲಿ ಹಾದು ಹೋಗಿರುವ ಹಾರಂಗಿ ನಾಲೆಯು ತುಂಬಿ ಹರಿಯುತ್ತಿದೆ. ಈ ನಾಲೆಯಿಂದಲೆ ಮಾವನೂರು ಗ್ರಾಮದ ಕೆರೆಗೆ ನೀರನ್ನು ಹರಿಯಬಿಟ್ಟು ತುಂಬಿಸುತ್ತಿದ್ದುದು, ಈ ಹಿಂದಿನ ಇತಿಹಾಸವಾಗಿದೆ.
ರೈತರ ಮನವಿ ತಿರಸ್ಕಾರ: ಆದರೆ ಈ ಬಾರಿ ಹಾರಂಗಿ ಇಲಾಖೆಯ ನೀರಾವರಿ ಎಂಜಿನಿಯರ್ಗಳು ಮಾತ್ರ ರೈತರು ನೀರಿಗಾಗಿ ಮಾಡಿರುವ ಮನವಿ ಲೆಕ್ಕಿಸದೆ ಕೈಚೆಲ್ಲಿ ಕೂರುವುದರ ಮೂಲಕ ಜನ ಜಾನುವಾರುಗಳಿಗೆ ನೀರಿನ ಹಾಹಾಕಾರ ಬಂದೊದಗುವಂತೆ ಮಾಡಿದ್ದಾರೆ.
ಮುಂಗಾರು ಚೆನ್ನಾಗಿ ನಡೆದು ಗಂಗೆಯು ಎಲ್ಲೆಡೆ ಹರಿಯುತ್ತಿದ್ದರೂ, ಗೌರಿ ಹಬ್ಬದ ಬಾಗಿನ ಕಾರ್ಯವು ಮುಗಿದರೂ ಮಾತ್ರ ಮಾವನೂರು ಕೆರೆಗೆ ನೀರಿನ ಭಾಗ್ಯವಿಲ್ಲದಂತಾಗಿದೆ.
ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಸಾರ್ವಜನಿಕ ಕೆಲಸವನ್ನು ಸುಲಲಿತವಾಗಿ, ತುರ್ತಾಗಿ ಮಾಡುತ್ತೇವೆಂದು ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿಯೇ ಇಂತಹ ಅಧಿಕಾರಿಗಳು ಯಾವುದನ್ನೂ ಲೆಕ್ಕಿಸದೆ ರೈತರಿಗೆ ಅನಗತ್ಯವಾಗಿ ತೊಂದರೆ ನೀಡುತ್ತಿರುವುದನ್ನು ನೋಡಿದರೆ, ಸರ್ಕಾರದ ಬಗ್ಗೆ ಈ ಅಧಿಕಾರಿಗಳಿಗೆ ಯಾವುದೇ ಹಿಡಿತ ಅಥವಾ ಭಯವಿಲ್ಲವೆಂಬಂತೆ ಕಂಡು ಬರುತ್ತಿದೆ.
ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಇತ್ತ ಗಮನಹರಿಸಿ ಇಂತಹ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವುದರ ಜೊತೆಗೆ, ಮಾವನೂರು ಗ್ರಾಮದ ಕೆರೆಗೆ ನೀರು ತುಂಬಿಸಿ ಜನ-ಜಾನುವಾರುಗಳಿಗೆ ಹಾಗೂ ರೈತರು ಬೆಳೆದ ಬೆಳೆಗಳಿಗೆ ಅನುಕೂಲ ಮಾಡಿಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.