ಪರಿಹಾರ ನೀಡುವಂತೆ ಒತ್ತಾಯ
ಕ.ಪ್ರ.ವಾರ್ತೆ ನಂಜನಗೂಡು ಸೆ. 18
ತಾಲೂಕಿನ ಕವಲಂದೆ ಹೋಬಳಿಯ ಹಳೇಪುರ ಗ್ರಾಮದ ದೊಡ್ಡ ಕೆರೆಗೆ ನೀರು ತುಂಬಿಸುವ ಉದ್ದೇಶದಿಂದ ಸಣ್ಣ ನೀರಾವರಿ ಯೋಜನೆಯಡಿ ಕಾಲುವೆ ನಿರ್ಮಿಸಲು ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡುವಂತೆ ಹಳೇಪುರ ಗ್ರಾಮದ ಪಿ.ಎಸ್. ರಾಜಶೇಖರಮೂರ್ತಿ ಆಗ್ರಹಿಸಿದ್ದಾರೆ.
ಮಳೆ ಬಿದ್ದಾಗ ಕೆರೆ ಪಕ್ಕದ ಹಳ್ಳದಲ್ಲಿ ನೀರು ಹರಿಯುತ್ತಿದ್ದು ಆ ಹಳ್ಳಕ್ಕೆ ಚೆಕ್ ಡ್ಯಾಮ್ ನಿರ್ಮಿಸಿ ಕಾಲುವೆ ಮುಖಾಂತರ ನೀರು ಕೆರೆಗೆ ತಲುಪಲು ಕಾಲುವೆ ನಿರ್ಮಿಸಲಾಗಿದೆ. ಈ ನೀರು ಕಾಲುವೆಗಾಗಿ 8 ಜನ ರೈತರು ಒಳ್ಳೆಯ ಉದ್ದೇಶದಿಂದ ತಮ್ಮ ಫಸಲು ಬೆಳೆಯುವ ಜಮೀನನ್ನು ನೀಡಿದ್ದಾರೆ. ಭೂಮಿ ಕಳೆದುಕೊಂಡ ರೈತರಿಗೆ ಎರಡು ವರ್ಷವಾದರೂ ಪರಿಹಾರ ಹಣ ನೀಡಿಲ್ಲ. ಆದ್ದರಿಂದ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಕೋರಿದ್ದಾರೆ.
ಕೆರೆ ಅಚ್ಚುಕಟ್ಟು ಪ್ರದೇಶ ಸುಮಾರು 750 ಎಕರೆ ಪ್ರದೇಶವಾಗಿದ್ದು, ಅಕ್ಕ- ಪಕ್ಕದ ರೈತರ ಜಮೀನಿಗೆ ನೀರಿನ ಉಪಯೋಗ, ಅಂತರ್ಜಲ ಮಟ್ಟ ಹೆಚ್ಚಿಸಲು ದನಕರುಗಳಿಗೆ ನೀರು ಕುಡಿಯುವ ಯೋಗ್ಯವಾಗಿದ್ದ ಕೆರೆಯಲ್ಲಿ ಹೂಳು ಯಥೇಚ್ಛವಾಗಿ ತುಂಬಿದೆ. ಕೆರೆಯಲ್ಲಿನ ಮುಳ್ಳು ಗಿಡ ತೆಗೆಸಿ ಕೆರೆ ಹೂಳೆತ್ತಿಸಿದರೆ ಕೋಟಿಗಟ್ಟಲೆ ಖರ್ಚು ಮಾಡಿ ಕಾಲುವೆ ನಿರ್ಮಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದಿದ್ದಾರೆ.
ಮರಳು ಲಾರಿ ಡಿಕ್ಕಿ: ಪತ್ರಕರ್ತ ಸಾವು
ಕ.ಪ್ರ.ವಾರ್ತೆ ಟಿ.ನರಸೀಪುರ ಸೆ. 18
ಮರಳು ಲಾರಿಯೊಂದು ಡಿಕ್ಕಿ ಹೊಡೆದು ಮೇಲೆ ಹರಿದ ಪರಿಣಾಮ ಪತ್ರಕರ್ತರೊಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ನರಸೀಪುರ ಮೈಸೂರು ಮುಖ್ಯ ರಸ್ತೆಯ ರಾಷ್ಟ್ರೀಯ ಹೆದ್ಧಾರಿ 212ರ ಎಂ.ಸಿ. ಹುಂಡಿ ಕೀಳನಪುರ ಗ್ರಾಮದ ನಡುವೆ ಬುಧವಾರ ಬೆಳಗ್ಗೆ ಜರುಗಿದೆ. ವಿವೇಕಾನಂದ ನಗರದ ನಿವಾಸಿ ನಂಜುಂಡನಾಯ್ಕ ಎಂಬವರ ಪುತ್ರ ಎನ್. ಲಿಂಗರಾಜು (42) ಮೃತಪಟ್ಟವರು. ಹಿಂಬದಿಯಿಂದ ಜವರಾಯನಂತೆ ಬಂದ ಮರಳು ಲಾರಿ ಪತ್ರಕರ್ತನ ಪ್ರಾಣಕ್ಕೆ ಎರವಾಗಿದೆ.
ಸ್ಥಳಕ್ಕೆ ಮೈಸೂರು ದಕ್ಷಿಣ ಠಾಣೆಯ ಸಬ್ ಇನ್ಸ್ಪೆಕ್ಟರ್ ಜಗದೀಶ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಮೈಸೂರು ನರಸೀಪುರ ಮಾರ್ಗದ ಸಂಚಾರ ಎರಡು ತಾಸುಗಳಿಗೂ ಹೆಚ್ಚು ಕಾಲ ಅಸ್ತವ್ಯಸ್ತವಾಗಿತ್ತು. ರಾಷ್ಟ್ರೀಯ ಹೆದ್ಧಾರಿ 212ರ ಮೈಸೂರು ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿತ್ತು.
ಎನ್. ಲಿಂಗರಾಜು ಅವರ ನಿಧನಕ್ಕೆ ಪತ್ರಕರ್ತರಾದ ಎಸ್. ಉದಯಶಂಕರ್, ಎಸ್.ಬಿ. ಪ್ರಕಾಶ್, ಮೂರ್ತಿ, ಎಂ.ನಾರಾಯಣ, ಎಸ್. ಕುಮಾರ್, ಮಾದೇಶ್, ಎಂ. ಮಹದೇವ, ಚನ್ನಬಸವಣ್ಣ, ಎಂ. ಮಂಜುನಾಥ, ನೀಲಸೋಗೆ ನಂಜುಂಡಯ್ಯ, ರೇವಣ್ಣ, ಗೋವಿಂದರಾಜು, ಮಹೇಂದ್ರ, ಛಾಯಾಗ್ರಾಹಕ ಸಂತೃಪ್ತಿಕುಮಾರ್, ಪ್ರಮೋದ್ ಡ್ಯಾನಿ, ಪತ್ರ್ರಿಕಾ ವಿತರಕರಾದ ಎಂ.ಕೆ. ಮಹದೇವ, ಪುಟ್ಟಸ್ವಾಮಿ, ಪ್ರಕಾಶ್ ಸಂತಾಪ ಸೂಚಿಸಿದ್ದಾರೆ.
ಬೈಕ್ಗೆ ಬಸ್ ಡಿಕ್ಕಿ: ಮಹಿಳೆ ಸಾವು
ಪಿರಿಯಾಪಟ್ಟಣ: ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಸಂಗರಶೆಟ್ಟಿಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಜರುಗಿದೆ. ಹುಣಸೂರು ತಾಲೂಕು ದೊಡ್ಡಹೆಜ್ಜೂರು ಗ್ರಾಮದ ಮಂಜುಳಾ (45) ಮೃತಪಟ್ಟವರು. ಮೃತರ ಅಣ್ಣ ಪಿರಿಯಾಪಟ್ಟಣ ತಾಲೂಕು ಹರಿನಹಳ್ಳಿ ಗ್ರಾಮದ ನಾಗಣ್ಣ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಪಿರಿಯಾಪಟ್ಟಣ ಆಸ್ಪತ್ರೆಗೆ ಸೇರಿಸಲಾಗಿದೆ. ಕೆ.ಆರ್. ನಗರ ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಸಂಬಂಧಿಕರೊಬ್ಬರ ಅಂತಿಮ ಸಂಸ್ಕಾರಕ್ಕೆ ತೆರಳಿ ಅಲ್ಲಿಂದ ತಮ್ಮ ತಾಯಿಯ ಮನೆ ಹರಿನಹಳ್ಳಿ ಗ್ರಾಮಕ್ಕೆ ನಾಗಣ್ಣ ಹಾಗೂ ಮಂಜುಳಾ ಅವರು ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಸಂಗರಶೆಟ್ಟಿ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಈ ಸಂಬಂಧ ಬೆಟ್ಟದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.