ಪಾಲಿಕೆಯಲ್ಲಿ ಹೋದ ಮಾನ ಜಿಪಂನಲ್ಲಿ ಬಂತು!
ಅಂಶಿ ಪ್ರಸನ್ನಕುಮಾರ್
ಕ.ಪ್ರ.ವಾರ್ತೆ ಮೈಸೂರು ಸೆ. 18
ಎರಡೂವರೆ ವರ್ಷಗಳ ನಂತರ ಮತ್ತೆ ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ರಾರಾಜಿಸಿದೆ. ಆ ಮೂಲಕ ನಗರಪಾಲಿಕೆ ಮೇಯರ್- ಉಪ ಮೇಯರ್ ಚುನಾವಣೆಯ ಸೋಲಿನ ಮುಖಭಂಗದಿಂದ ಆಗಿದ್ದ ಸೇಡನ್ನು ತೀರಿಸಿಕೊಂಡಿದೆ.
ಜಿಪಂನಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇರಲಿಲ್ಲ. 46 ಸದಸ್ಯ ಬಲದ ಜಿಪಂನಲ್ಲಿ ಕಾಂಗ್ರೆಸ್- 21, ಜೆಡಿಎಸ್- 16, ಬಿಜೆಪಿ-8, ಪಕ್ಷೇತರ- 1 ಸ್ಥಾನ ಪಡೆದಿದ್ದವು. ಅಧಿಕಾರ ಹಿಡಿಯಲು 24 ಸದಸ್ಯರ ಬೆಂಬಲ ಬೇಕಿತ್ತು.
ಮೊದಲ ಅವಧಿಯ ಅಧ್ಯಕ್ಷ ಸ್ಥಾನ ಬಿಸಿಬಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪ.ಜಾತಿಗೆ ಮೀಸಲಾಗಿತ್ತು. ಕಾಂಗ್ರೆಸ್ ಪಾಲಿಕೆಯಲ್ಲಿ ಕಳೆದ ಅವಧಿಯಲ್ಲಿ ಇದ್ದಂತೆ ಜಿಪಂನಲ್ಲಿ ಜೆಡಿಎಸ್ ಜೊತೆ ದೋಸ್ತಿ ಮಾಡಿ, ಅಧಿಕಾರ ಹಿಡಿಯಲು ಹವಣಿಸಿತ್ತು. ಆದರೆ ಜೆಡಿಎಸ್ನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಹ ಅಭ್ಯರ್ಥಿ ಇರಲಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನ ಕೇಳಿತು. ಕಾಂಗ್ರೆಸ್ ತಾನು ಅತಿ ದೊಡ್ಡ ಪಕ್ಷವಾಗಿರುವುದರಿಂದ ತನಗೆ ಅಧ್ಯಕ್ಷ ಸ್ಥಾನ ಬೇಕು ಎಂದು ಕೇಳಿತ್ತು. ಇದರಿಂದ ಮಾತುಕತೆಗೆ ಬ್ರೇಕ್ ಬಿದ್ದಿತು.
ನಂತರ ಜೆಡಿಎಸ್ 8 ಸದಸ್ಯ ಬಲದ ಬಿಜೆಪಿ ಹಾಗೂ ಒಬ್ಬ ಪಕ್ಷೇತರ ಸದಸ್ಯನ ಬೆಂಬಲದಿಂದ ಅಧಿಕಾರ ಹಿಡಿದಿತು. ಜೆಡಿಎಸ್ನ ಜೆ.ಸುನೀತಾ ವೀರಪ್ಪಗೌಡ ಅಧ್ಯಕ್ಷರಾಗಿ, ಬಿಜೆಪಿಯ ಡಾ.ಶಿವರಾಂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧಿಕಾರ ಹಂಚಿಕೆಯ ಒಳ ಒಪ್ಪಂದದಂತೆ ಸುನೀತಾ ಅವರು 10 ತಿಂಗಳಿಗೆ ಅಧಿಕಾರ ಬಿಟ್ಟುಕೊಡಬೇಕಿತ್ತು. ಇದಕ್ಕಾಗಿ ಜೆಡಿಎಸ್ನ ಭಾಗ್ಯ ಶಿವಮೂರ್ತಿ, ಬಿಜೆಪಿಯ ಮಂಜುಳಾ ಪುಟ್ಟಸ್ವಾಮಿ ಕಾದಿದ್ದರು. ಆದರೆ ರಾಜೀನಾಮೆ ನಾಟಕವಾಡಿ, ಅಧಿಕಾರ ಬಿಡುವ ವೇಳೆಗೆ 17 ತಿಂಗಳು ಕಳೆದು ಹೋಗಿದ್ದವು. ಆ ಅವಧಿಯ ಉಳಿಕೆ 3 ತಿಂಗಳಿಗೆ ಜೆಡಿಎಸ್ನ ಭಾಗ್ಯ ಶಿವಮೂರ್ತಿ ಅಧ್ಯಕ್ಷರಾಗಿ, ಬಿಜೆಪಿಯ ಎಚ್.ಆರ್. ಭಾಗ್ಯಲಕ್ಷ್ಮಿ ಉಪಾಧ್ಯಕ್ಷರಾಗಿದ್ದರು.
ಎರಡನೇ ಅವಧಿ: ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ, ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೂ ಮೀಸಲಾಯಿತು. ಜೆಡಿಎಸ್- ಬಿಜೆಪಿ ಮೈತ್ರಿ ಮುಂದುವರಿಯಿತು. ಅಧ್ಯಕ್ಷರಾಗಿ ಬಿಜೆಪಿಯ ಕಾ.ಪು. ಸಿದ್ದವೀರಪ್ಪ, ಉಪಾಧ್ಯಕ್ಷರಾಗಿ ಜೆಡಿಎಸ್ನ ಎಂ.ಕೆ. ಸುಚಿತ್ರಾ ಆಯ್ಕೆಯಾದರು. ಮೈತ್ರಿ ಪಕ್ಷಗಳಲ್ಲಿ ಆದ ಒಪ್ಪಂದದ ಪ್ರಕಾರ, 10 ತಿಂಗಳ ನಂತರ ರಾಜಿನಾಮೆ ನೀಡಿ, ಬೇರೆಯವರಿಗೆ ಅವಕಾಶ ಮಾಡಿಕೊಡಬೇಕಿತ್ತು. ಆದರೆ ಇವರು ಕೂಡ ವಿಳಂಬ ಮಾಡಿದರು. ಮೊದಲೇ ಕಾಂಗ್ರೆಸ್ ಕಡೆ ಗುರುತಿಸಿಕೊಂಡಿದ್ದ ಪಕ್ಷೇತರ ಸದಸ್ಯ ಎಲ್. ಮಾದಪ್ಪ ಅವರು ಬಿಜೆಪಿಯ ಮಂಜುಳಾ ಪುಟ್ಟಸ್ವಾಮಿ, ಕೆಂಪಣ್ಣ ಹಾಗೂ ಡಾ. ಶಿವರಾಂ ಅವರೊಂದಿಗೆ ಸೇರಿ, ಕಾಂಗ್ರೆಸ್ನ 21 ಸದಸ್ಯರಿಗೆ ಸಾಥ್ ನೀಡಿ, ಅವಿಶ್ವಾಸ ಮಂಡನೆ ಪತ್ರ ನೀಡಿದರು. ಆಗ ಅಧ್ಯಕ್ಷ, ಉಪಾಧ್ಯಕ್ಷರು ರಾಜಿನಾಮೆ ನೀಡಿದರು. ಅಧ್ಯಕ್ಷರು ರಾಜಿನಾಮೆ ಹಿಂಪಡೆಯುವ ನಾಟಕವಾಡಿದರೂ ಅಂತಿಮವಾಗಿ ಇಬ್ಬರ ರಾಜಿನಾಮೆಯೂ ಅಂಗೀಕಾರವಾಯಿತು. ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಡಾ.ಶಿವರಾಂ ಅವರು ಜೆಡಿಎಸ್- ಮೈತ್ರಿಕೂಟಕ್ಕೆ ವಾಪಸ್ ಬಂದರೂ ಮಂಜುಳಾ ಪುಟ್ಟಸ್ವಾಮಿ, ಕೆಂಪಣ್ಣ ಬರಲಿಲ್ಲ. ಹೀಗಾಗಿ ಮೈತ್ರಿಕೂಟಕ್ಕೆ ಅಧಿಕಾರ ಹೋಗುವುದು ನಿಶ್ಚಿತವಾಗಿತ್ತು. ಆದರೂ ಅವರು ಆ ಇಬ್ಬರು ಸದಸ್ಯರಿಗೆ ವ್ಹಿಪ್ ಜಾರಿ ಮಾಡುವ ಮೂಲಕ ಬೆದರಿಸಲು ನೋಡಿದರು. ಆದರೆ ಆ ಇಬ್ಬರು ಸದಸ್ಯರು ಸೊಪ್ಪು ಹಾಕಲಿಲ್ಲ.
ಪರಿಣಾಮ ಮೈತ್ರಿಕೂಟ ಏನೆಲ್ಲಾ ಸರ್ಕಸ್ ಮಾಡಿದರೂ ಗೆಲ್ಲಲಾಗಿಲ್ಲ. ಆದರೆ ಕಾಂಗ್ರೆಸ್ ಸದಸ್ಯೆ ಶಕುಂತಲಾ ವೆಂಕಟಯ್ಯ ಅವರನ್ನು ಗೈರು ಹಾಜರು ಮಾಡಿಸುವ ಮೂಲಕ ಎಲ್ಲವೂ ಸರಿಯಿಲ್ಲ ಎಂಬುದನ್ನು ಎತ್ತಿ ತೋರಿಸಿದೆ.
ಕೈಕೊಟ್ಟ ರಾಜಣ್ಣ: ಅದೇ ರೀತಿ ಕಳೆದ ವಿಧಾನಸಭಾ ಚುನಾವಣೆ ಕಾಲಕ್ಕೆ ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಸಿಗದಿದ್ದಾಗ ಬಂಡಾಯವಾಗಿ ಸ್ಪರ್ಧಿಸಿ ಸೋತಿದ್ದ ಸಿ.ಟಿ. ರಾಜಣ್ಣ ಅವರು ಗೈರುಹಾಜರಾಗುವ ಮೂಲಕ ಆ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ. ವಾಸ್ತವವಾಗಿ ಜಿಪಂಗೆ ಮೂರನೇ ಬಾರಿಗೆ ಆರಿಸಿ ಬಂದಿರುವ ಸಿ.ಟಿ. ರಾಜಣ್ಣ ಅವರು ಅಧ್ಯಕ್ಷರಾಗಬೇಕಿತ್ತು. ಆದರೆ ಪಕ್ಷದಲ್ಲಿನ ವಿದ್ಯಮಾನಗಳಿಂದ ಅವರಿಗೆ ಅವಕಾಶ ಕೈತಪ್ಪಿತು.
ಈ ಬಾರಿ ಜೆಡಿಎಸ್- ಬಿಜೆಪಿ ಮೈತ್ರಿಕೂಟದಿಂದ ಅಧ್ಯಕ್ಷ ಸ್ಥಾನಕ್ಕೆ ನಳಿನಾಕ್ಷಿ ವೆಂಕಟೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಬಸವಣ್ಣ ಅವರನ್ನು ಹೆಸರಿಸಲಾಗಿತ್ತು. ಆದರೆ 46 ಬಲದ ಜಿಪಂನಲ್ಲಿ ಹಾಜರಿದ್ದ 44 ಸದಸ್ಯರ ಪೈಕಿ ಕಾಂಗ್ರೆಸ್ನ ಕೂರ್ಗಳ್ಳಿ ಮಹದೇವ್ ಹಾಗೂ ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ ಅವರು ತಲಾ 23 ಮತಗಳನ್ನು ಪಡೆದು ಕ್ರಮವಾಗಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾದರು. ನಳಿನಾಕ್ಷಿ ವೆಂಕಟೇಶ್ ಹಾಗೂ ಗೀತಾ ಬಸವಣ್ಣ ಅವರು ತಲಾ 21 ಮತಗಳನ್ನು ಪಡೆದು, 2 ಮತಗಳ ಅಂತರದಿಂದ ಸೋತರು.
ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಾಲಿಕೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿಯಿಂದ ಅಧಿಕಾರ ಸಿಗದೇ ಮುಖಭಂಗವಾಗಿತ್ತು. ಇದೀಗ ಜಿಪಂನಲ್ಲಿ ಕಾಂಗ್ರೆಸ್ಗೆ ಅಧಿಕಾರ ಧಕ್ಕಿರುವುದು ಸಹಜವಾಗಿಯೇ ಅವರಿಗೆ ಖುಷಿಯಾಗಲಿದೆ.