ದಸರಾ ಪ್ಯಾಕೇಜ್ ಟೂರ್ಗೆ ಚಾಮರಾಜನಗರವೂ ಸೇರಲಿ
ದೇವರಾಜು ಕಪ್ಪಸೋಗೆ
ಕ.ಪ್ರ.ವಾರ್ತೆ ಚಾ.ನಗರ ಸೆ. 19
ಕರ್ನಾಟಕದ ನಯಾಗರ ಎಂದೇ ಖ್ಯಾತಿ ಗಳಿಸಿರುವ ಜಿಲ್ಲೆಯ ಭರಚುಕ್ಕಿ ಮತ್ತು ಮಂಡ್ಯ ಜಿಲ್ಲೆಯ ಗಗನಚುಕ್ಕಿಯಲ್ಲಿ ಲಕ್ಷಾಂತರ ರು. ವೆಚ್ಚ ಮಾಡಿ ಇತ್ತೀಚೆಗೆ ಅದ್ಧೂರಿಯಾಗಿ ಜಲಪಾತೋತ್ಸವ ಮಾಡಲಾಯಿತು.
ಆದರೆ, ಗಗನಚುಕ್ಕಿ, ಭರಚುಕ್ಕಿ ಮತ್ತು ಸುತ್ತಮುತ್ತಲಿನ ಹಲವು ಪ್ರದೇಶಗಳು ಮೈಸೂರು ದಸರಾ ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್ನಿಂದ ವಂಚಿತವಾಗಿವೆ.
ಮಂಡ್ಯ ಮತ್ತು ಚಾಮರಾಜನಗರ ಗಡಿಗೆ ಹೊಂದಿಕೊಂಡಿರುವ ಈ ಪ್ರದೇಶ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದಂಥ ತಾಣ. ದಸರಾ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ವತಿಯಿಂದ ಜಲದರ್ಶಿನಿ, ಗಿರಿದರ್ಶಿನಿ, ದೇವದರ್ಶಿನಿ, ನಗರ ದರ್ಶಿನಿ ಎಂಬ ಒಂದು ದಿನದ ದಸರಾ ವಿಶೇಷ ಪ್ಯಾಕೇಜ್ ಟೂರ್ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಈ ಭಾಗಕ್ಕೂ ವಿಶೇಷ ಪ್ಯಾಕೇಜ್ ವ್ಯವಸ್ಥೆ ಕಲ್ಪಿಸಲು ಕೆಎಸ್ಆರ್ಟಿಸಿ ಅಧಿಕಾರಿಗಳು ಮುಂದಾಗಬೇಕಿದೆ. ಈ ಭಾಗದ ಪ್ರದೇಶವನ್ನು ಜನಸಾಮಾನ್ಯರಿಗೆ ಪರಿಚಯಿಸುವ ಮತ್ತು ಜನಸಾಮಾನ್ಯರು ಕಡಿಮೆ ವೆಚ್ಚದಲ್ಲಿ ಪ್ರವಾಸ ಕೈಗೊಳ್ಳಲು ಅನುಕಲ್ಪಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್ಅನ್ನು ವಿಸ್ತರಣೆ ಮಾಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಿದೆ. ಶಿವನಸಮುದ್ರದಲ್ಲಿರುವ ಮಧ್ಯರಂಗ, ಪ್ರಸನ್ನ ಮೀನಾಕ್ಷಿ ದೇವಸ್ಥಾನ, ಮಾರಮ್ಮನ ದೇವಸ್ಥಾನ, ದರ್ಗಾ, ಭರಚುಕ್ಕಿ ಜಲಪಾತ, ಶಿವನಸಮುದ್ರದ ಪಶ್ಚಿಮಕ್ಕೆ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಪುರಾತನ ವೆಸ್ಲಿ ಸೇತುವೆ ದರ್ಶನ, ಸತ್ತೇಗಾಲ ಸಮೀಪದಲ್ಲಿರುವ ಯಡಕೂರಿಯ ದ್ವೀಪ ಗ್ರಾಮ ಸೇರಿಸಿ ಒಂದು ಪ್ಯಾಕೇಜ್ ಮಾಡಬಹುದಾಗಿದೆ. ಇದರಿಂದ ಕಡಿಮೆ ದೂರದಲ್ಲಿ ಹಲವು ತಾಣ ವೀಕ್ಷಣೆ ಸಾಧ್ಯ. ಮೈಸೂರಿಗೆ ಸುಮಾರು 75 ಕಿ.ಮೀ. ದೂರದಲ್ಲಿರುವ ಈ ಪ್ರದೇಶವನ್ನು ಒಂದೂವರೆ ಗಂಟೆ ಅವಧಿಯಲ್ಲೇ ತಲುಪಬಹುದಾಗಿದ್ದು, ಇದೀಗ ಆಯೋಜಿಸಲಾಗಿರುವ ಟೂರ್ ಪ್ಯಾಕೇಜ್ಗಳಲ್ಲೇ 200ರಿಂದ 350 ಕಿ.ಮೀ. ದೂರದ ಪ್ರದೇಶಗಳಿವೆ.
ಮಂಡ್ಯ ಜಿಲ್ಲೆಯಲ್ಲಿರುವ ಏಷ್ಯಾದಲ್ಲೇ ಪ್ರಥಮ ಜಲ ವಿದ್ಯುತ್ ಸ್ಥಾವರವಾದ ಬ್ಲಪ್ ಮತ್ತು ಗಗನಚುಕ್ಕಿಯನ್ನೂ ಪ್ರವಾಸಿಗರಿಗೆ ತೋರಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಈ ಎಲ್ಲ ತಾಣಗಳಿಗೆ ಸೂಕ್ತ ಗೈಡ್ಗಳನ್ನು ನೇಮಕ ಮಾಡಿದರೆ ದಸರೆಗೆ ಆಗಮಿಸುವ ಪ್ರವಾಸಿಗರು ಮತ್ತಷ್ಟು ತಾಣಗಳನ್ನು ನೋಡಲು ಅನುಕೂಲ ಕಲ್ಪಿಸಿದಂತಾಗುತ್ತದೆ.