ಮತದಾರರ ಕಷ್ಟ ಕೇಳದ ಸಚಿವರು: ರಾಮಚಂದ್ರ
ಕ.ಪ್ರ.ವಾರ್ತೆ ಟಿ.ನರಸೀಪುರ ಸೆ. 19
ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಕಾಣದಂತೆ ಮಾಯವಾಗಿರುವುದರಿಂದ ಮತ ಕೊಟ್ಟು ಆಯ್ಕೆ ಮಾಡಿದ ಮತದಾರರ ಕಷ್ಟ ಸುಖವನ್ನು ಕೇಳೋರು ಯಾರು ಇಲ್ಲದಂತಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ರಾಮಚಂದ್ರ ಆರೋಪಿಸಿದರು.
ಈ ಕ್ಷೇತ್ರದ ಶಾಸಕರು ಸಚಿವರಾಗಿದ್ದರೂ ಕ್ಷೇತ್ರದ ಜನತೆ ಕೈಗೆ ಸಿಗುತ್ತಿಲ್ಲ ಅಥವಾ ಅವರು ಯಾವೊಬ್ಬ ಪ್ರತಿನಿಧಿಯೂ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಬನ್ನೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಬಡಜನರ ಪರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ, ಸಿಎಂ ಮತ್ತು ಲೋಕೋಪಯೋಗಿ ಸಚಿವರಿಬ್ಬರು ಪ್ರತಿನಿಧಿಸುವ ತಾಲೂಕಿನ ಬಡಜನರ ಎಲ್ಲ ಕೆಲಸ ಕಾರ್ಯಗಳು ಕುಂಠಿತಗೊಂಡಿವೆ. ತಾಲೂಕು ಕಚೇರಿಯಲ್ಲಿ ರೈತರಿಗೆ ಸರ್ವೆ ಮಾಡಿದ ಸ್ಕೇಚ್ ಪ್ರತಿ ನಿಗದಿತ ಕಾಲಕ್ಕೆ ಸಿಗುತ್ತಿಲ್ಲ. ವಿವಿಧ ಮಾಸಾಶನಗಳ ಮಂಜೂರಾತಿಗೆ ಅರ್ಜಿ ಸಲ್ಲಿಸಿ ತಿಂಗಳಾಗಿದ್ದರೂ, ಮಂಜೂರಾತಿ ಆದೇಶ ಲಭ್ಯವಾಗದೆ ವೃದ್ಧರು, ಅಂಗವಿಕಲರು ಅಲೆದಾಡುವಂತಾಗಿದೆ ಎಂದರು.
ಸಭೆಯನ್ನೂ ಕರೆದಿಲ್ಲ: ಕಾಂಗ್ರೆಸ್ ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿದ್ದರೆ, ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆಯಂತಹ ಉನ್ನತ ಇಲಾಖೆಯ ಸಚಿವ ಮಹದೇವಪ್ಪ ಅವರು ತಾಲೂಕಿನ ಪ್ರಗತಿ ಪರಿಶೀಲನೆ ಸಭೆಯನ್ನು ಕರೆಯದೆ ಅಭಿವೃದ್ಧಿ ಮರೆತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನಾದರೂ ಕ್ಷೇತ್ರದ ಜನರ ಮುಂದೆ ಕಾಣಿಸಿಕೊಂಡು, ಜನರ ಕಷ್ಟಗಳನ್ನು ಆಲಿಸಬೇಕೆಂದು ಆಗ್ರಹಿಸಿದರು. ರೈತ ಮೋರ್ಚಾದ ಅಧ್ಯಕ್ಷ ರಂಗರಾಜು, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಪ್ರಭಾಕರ್, ನಾಗರಾಜು, ಶಿವಮೂರ್ತಿ ಇದ್ದರು.
ಗಂಧನಹಳ್ಳಿಯಲ್ಲಿ ಅನ್ನ ಸಂತರ್ಪಣೆ
ಭೇರ್ಯ: ಕೆ.ಆರ್. ನಗರ ತಾಲೂಕು ಗಂಧನಹಳ್ಳಿ ಸಂತಕವಿ ಶ್ರೀಭಕ್ತಕನಕದಾಸ ಯುವಕ ಸಂಘ ಮತ್ತು ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ವತಿಯಿಂದ 7ನೇ ವರ್ಷದ ಮಹಾ ಗಣಪತಿ ಪ್ರತಿಷ್ಠಾಪನೆ ಅಂಗವಾಗಿ 5ನೇ ವರ್ಷದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಿತ್ ದೇವಹಟ್ಟಿ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಸಂಘ ಸಂಸ್ಥೆಗಳು ಅನ್ನಸಂತರ್ಪಣೆಯಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ, ಗ್ರಾಮಗಳಲ್ಲಿ ಉತ್ತಮ ಬಾಂಧವ್ಯ ಬರುತ್ತದೆ ಎಂದು ಹೇಳಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ. ರವಿಶಂಕರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜಿ.ಎನ್. ಮಲ್ಲೇಗೌಡ, ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಹೇಮಂತ್, ಸಂತಕವಿ ಶ್ರೀಭಕ್ತಕನಕದಾಸ ಯುವಕ ಸಂಘದ ಅಧ್ಯಕ್ಷ ಅರುಣ್, ಕಾರ್ಯದರ್ಶಿ ಕೆಂಪರಾಜ್, ಮಹದೇವು, ಸದಸ್ಯ ಅರ್ಚಕ ಜಿ.ಎನ್. ರವಿಶಂಕರ್, ಸೋಮು ಇದ್ದರು.