ಮೂರ್ತಿ ಈಗಲೇ ದೇಶ ಬಿಟ್ಟು ಹೋಗಲಿ: ಪ್ರೊ.ಭಗವಾನ್
ಕ.ಪ್ರ.ವಾರ್ತೆ ಮೈಸೂರು ಸೆ. 19
ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ನಾನು ಇಲ್ಲಿ ಬದುಕಿರಲು ಇಷ್ಟಪಡುವುದಿಲ್ಲ ಎಂದಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್. ಅನಂತಮೂರ್ತಿ ಅವರು ಈಗಲೇ ದೇಶ ಬಿಟ್ಟು ಹೋಗಲಿ ಎಂದು ಕರ್ನಾಟಕ ಜನಪರ ಆಂದೋಲನ ಅಧ್ಯಕ್ಷರೂ ಆದ ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಯು.ಆರ್. ಅನಂತಮೂರ್ತಿ ಅವರು ಹಿಂದುಳಿದ ವರ್ಗ, ದಲಿತರಿಗೆ ಮೀಸಲಾತಿ ಸಿಗಬಾರದು ಎಂದಿದ್ದವರು. ಅವರ ವೈಯಕ್ತಿಕ ಜೀವನ ಹಾಗೂ ವೈಚಾರಿಕ ಬದುಕು ಪ್ರಶ್ನಾರ್ಹವಾದದು. ಅವರ ಹೇಳಿಕೆ ಬಗ್ಗೆ ಚರ್ಚೆ ಮಾಡಿದರೆ ಕಾಲಹರಣ ಮಾಡಿದಂತೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ದೇಶದ ರಾಜಕೀಯ ಸದ್ಯ ಬಿಕ್ಕಟ್ಟಿನಲ್ಲಿದ್ದು, ಯಾವೊಂದು ಪಕ್ಷಗಳು ಸ್ವಂತ ಬಲದ ಮೇಲೆ ಕೇಂದ್ರದಲ್ಲಿ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿ ಇಲ್ಲ. ಬಿಜೆಪಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದೆ. ಆದರೆ, ಗುಜರಾತ್‌ನಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಆಂಧ್ರಪ್ರದೇಶ ಮುಂದಿದೆ. ಆಂಧ್ರದಷ್ಟು ಗುಜರಾತ್ ಅಭಿವೃದ್ಧಿ ಕಂಡಿಲ್ಲ. ಬಿಜೆಪಿಗೆ ಹಿಂದುಳಿದವರು, ದಲಿತರ ಬಗ್ಗೆ ಕಾಳಜಿ ಇಲ್ಲ. ಜಾತ್ಯತೀತ ತತ್ವ ಎತ್ತಿ ಹಿಡಿಯುವಲ್ಲಿ ಮೋದಿ ವಿಫಲರಾಗಿದ್ದಾರೆ. ಹೀಗಾಗಿ ಜನರೂ ಈ ಬಗ್ಗೆ ಆಲೋಚಿಸಬೇಕಿದೆ ಎಂದರು.
ರಾಮಮಂದಿರ ನೆಲಸಮ ನಿಲ್ಲಿಸಲು ಆಗ್ರಹ
ಮೈಸೂರು: 150 ವರ್ಷಕ್ಕೂ ಹೆಚ್ಚು ಹಳೆಯ ಪಾರಂಪರಿಕ ಕಟ್ಟಡವಾದ ಶಿವರಾಮಪೇಟೆಯ ವಿಠ್ಠಲ ರಾಮಮಂದಿರವನ್ನು ನೆಲಸಮ ನಿಲ್ಲಿಸುವಂತೆ ಮೈಸೂರು ರಕ್ಷಣಾ ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್ ಆಗ್ರಹಿಸಿದ್ದಾರೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದ ಇತಿಹಾಸ ಹೊಂದಿರುವ ಮತ್ತು ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿರುವ ವಿಠ್ಠಲ ರಾಮಮಂದಿರವನ್ನು ಕೆಡವಲು ನಗರಪಾಲಿಕೆ ಅನುಮತಿ ನೀಡಿದೆ. ಮಹಾರಾಜರ ಆಡಳಿತ ಪರಂಪರೆ ನೋಡಿರುವ ನಗರದಲ್ಲಿ ಪಾರಂಪರಿಕ ಕಟ್ಟಡಗಳ ನಿರ್ವಹಣೆಯಲ್ಲಿ ನಗರಪಾಲಿಕೆ ಎಡುವುತ್ತಿರುವುದಕ್ಕೆ ಅವರು ವಿಷಾದಿಸಿದ್ದಾರೆ. ನಗರಪಾಲಿಕೆ ಇದನ್ನು ಕೆಡವಲು ಅನುಮತಿ ನೀಡಿರುವುದು ಅಧಿಕಾರಿಗಳ ನಿರ್ಲಕ್ಷ್ಯತನ ತೋರಿಸಿದೆ. ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಮತ್ತು ಪಾರಂಪರಿಕ ಕಟ್ಟಡಗಳ ಇಲಾಖೆ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.