ಸಾಲ ಸೌಲಭ್ಯ ಸದುಪಯೋಗಕ್ಕೆ ದೇವನೂರು ಶ್ರೀ ಕರೆ
ಕ.ಪ್ರ.ವಾರ್ತೆ ನಂಜನಗೂಡು ಸೆ. 19
ಸಾರ್ವಜನಿಕರು ಹಾಗೂ ರೈತರು ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಸಿಗುವ ಸಾಲ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ದೇವನೂರು ಶ್ರೀ ಗುರುಮಲ್ಲೇಶ್ವರ ಮಠದ ಮಹಂತ ಸ್ವಾಮೀಜಿ ಕರೆ ನೀಡಿದರು.
ತಾಲೂಕಿನ ದೇವನೂರಿನಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್ಗೆ ಮಠದ ವತಿಯಿಂದ ನೂತನ ಕಟ್ಟಡ ನಿರ್ಮಾಣ ಮಾಡುವುದಾಗಿ, ಬ್ಯಾಂಕಿನ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ರೈತರು ಹಾಗೂ ಸಾರ್ವಜನಿಕರು ಬ್ಯಾಂಕಿನಲ್ಲಿ ಠೇವಣಿ ಹಣ ತೊಡಗಿಸುವಂತೆ ಸಲಹೆ ನೀಡಿದರು.
ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಷಣ್ಮುಖಸ್ವಾಮಿ ಮಾತನಾಡಿ, ಬ್ಯಾಂಕಿನ ವಿವಿಧ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಸಹಕಾರ ನೀಡುವಂತೆ ಮನವಿ ಮಾಡಿ, ಬ್ಯಾಂಕಿನ ಗುರುಮಲ್ಲೇಶ್ವರ ರೈತ ಕೂಟವನ್ನು ಉದ್ಘಾಟಿಸಿದರು.
ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಶಾಸ್ತ್ರಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಗ್ರಾಮೀಣ ಬ್ಯಾಂಕ್ ಸದೃಢವಾಗಿ ಬೆಳೆಯಲು ಮತ್ತು ಜನರ ಆರ್ಥಿಕ ಮಟ್ಟ ಸುಧಾರಿಸಲು ಬ್ಯಾಂಕ್ನಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಸದುಪಯೋಗ ಪಡೆಯುವಂತೆ ಹಾಗೂ ಕಾವೇರಿ ಲಕ್ಷ್ಮೀ ಎಂಬ ನೂತನ ಯೋಜನೆಯಲ್ಲಿ ಹಣ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.
ಪ್ರಾದೇಶಿಕ ಕಚೇರಿಯ ಶ್ರೀಕಂಠಮೂರ್ತಿ, ಗ್ರಾಪಂ ಅಧ್ಯಕ್ಷೆ ಪುಟ್ಟದೇವಮ್ಮ, ಬ್ಯಾಂಕ್ ಸಿಬ್ಬಂದಿ ವಿ.ಆರ್. ಶ್ರೀನಿವಾಸ್, ಆರ್.ಎನ್. ಸಂಜಯ್ಕುಮಾರ್, ರಾಮಚಂದ್ರಪ್ಪ, ಮಹದೇವಮೂರ್ತಿ ಭಾಗವಹಿಸಿದ್ದರು. ಅಳಗಂಚಿ ಶಾಖೆಯ ವ್ಯವಸ್ಥಾಪಕ ಎ.ಎಸ್. ರಾಜಶೇಖರ್ ನಿರೂಪಿದರು. ಕ್ಷೇತ್ರಾಧಿಕಾರಿ ಡಬ್ಲ್ಯು.ಕೆ. ಅಶೋಕ್ ಕುಮಾರ್ ಸ್ವಾಗತಿಸಿದರು. ಎನ್. ಕುಮಾರ್ ವಂದಿಸಿದರು.