'ಕೈ' ನಿಂದ ಕುದುರೆ ವ್ಯಾಪಾರವಿಲ್ಲ
ಕ.ಪ್ರ.ವಾರ್ತೆ ಮೈಸೂರು ಸೆ. 20
ಮೈಸೂರು ಜಿಪಂನ ಸದಸ್ಯರು ತೆಗೆದುಕೊಂಡ ಒಮ್ಮತದ ತೀರ್ಮಾನದಿಂದ ಕೂರ್ಗಳ್ಳಿ ಮಹದೇವು ಅಧ್ಯಕ್ಷರಾಗಿ, ಭ್ರಮರಾಂಭ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಯೇ ಹೊರತು ಕಾಂಗ್ರೆಸ್ನಿಂದಾಗಲಿ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಾಗಲಿ ಕುದುರೆ ವ್ಯಾಪಾರ ಅಥವಾ ಆಪರೇಷನ್ ಹಸ್ತವಾಗಲಿ ನಡೆದಿಲ್ಲ ಎಂದು ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ಸ್ಪಷ್ಟಪಡಿಸಿದ್ದಾರೆ.
ಶಾಸಕ ಜಿ.ಟಿ. ದೇವೇಗೌಡರು ನೈತಿಕತೆ ಬಗ್ಗೆ ಮಾತನಾಡುತ್ತಾರೆ. ಇವರಿಗೆ ನೈತಿಕತೆ ಎಂಬ ಪದದ ಅರ್ಥವೇ ಗೊತ್ತಿಲ್ಲ. ಇವರು ನಡೆದುಕೊಂಡ ರೀತಿಯನ್ನು ಜಿಲ್ಲೆಯ ಜನತೆ ನೋಡಿದ್ದಾರೆ. ಇವರನ್ನು ರಾಜಕೀಯವಾಗಿ ಬೆಳೆಸಿದವರು ಯಾರು ಎಂಬುದು ಈ ಜಿಲ್ಲೆಯ ಜನತೆಗೆ ತಿಳಿದಿದೆ. ಜಿ.ಟಿ. ದೇವೇಗೌಡರು ಜೆಡಿಎಸ್ನಿಂದ ಬಿಜೆಪಿಗೆ ಪಕ್ಷಾಂತರಗೊಂಡು ಆ ಸರ್ಕಾರದಲ್ಲಿ ಹಣ ಲೂಟಿ ಮಾಡುವ ಕರ್ನಾಟಕ ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿ ರಾಜ್ಯದ ಎಲ್ಲಾ ಕಡೆ ಕೆಎಚ್ಬಿ ಜಮೀನು ಖರೀದಿಸಿ ಎಷ್ಟು ಪಾರದರ್ಶಕತೆಯಿಂದ ಹಣ ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದು ಛೇಡಿಸಿದರು.
ಜಿ.ಟಿ. ದೇವೇಗೌಡರಿಗೆ ಕಾಂಗ್ರೆಸ್ ಬಗ್ಗೆಯಾಗಲಿ, ಐದು ವರ್ಷಗಳ ಕಾಲ ಬಿಜೆಪಿ ಸರ್ಕಾರದ ಅಧಿಕಾರದಲ್ಲಿದ್ದು ಆ ಪಕ್ಷದ ಮೋಸದ ಬಗ್ಗೆಯಾಗಲಿ ಮಾತನಾಡುವ ನೈತಿಕತೆ ಇಲ್ಲ. ಇನ್ನು ಮುಂದೆ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಿದರೆ ನಾವು ಕೂಡ ಜಿಟಿಡಿ ಅವರ ಭ್ರಷ್ಟಾಚಾರ ಹೊರಗೆಳೆಯಬೇಕಾಗುತ್ತದೆ. ಹೀಗಾಗಿ ಜಿಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಸದಸ್ಯರನ್ನು ಖರೀದಿಸಿಲ್ಲ. ಖರೀದಿ ಎಂಬುದು ಜಿಟಿಡಿ ಅವರಿಗೆ ಕರಗತವಾಗಿದೆ ಎಂದಿದ್ದಾರೆ. ಕೋಮುವಾದಿಗಳೊಂದಿಗೆ ಕೈಜೋಡಿಸಿದ ಜೆಡಿಎಸ್ಗೆ ಇತ್ತೀಚೆಗೆ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಜನತೆ ತಕ್ಕಪಾಠ ಕಲಿಸಿದ್ದಾರೆ ಎಂದಿದ್ದಾರೆ.