'ಕ್ರೀಡಾ ಶಿಕ್ಷಣಕ್ಕೂ ಮೈಸೂರು ವಿವಿ ಮಹತ್ವ'
ಕ.ಪ್ರ.ವಾರ್ತೆ ಮೈಸೂರು ಸೆ. 20
ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಣದ ಜೊತೆಗೆ ಕ್ರೀಡಾ ಶಿಕ್ಷಣಕ್ಕೂ ಸಹ ಸಮಾನ ಮಹತ್ವ ನೀಡುತ್ತಿರುವುದಾಗಿ ಮೈಸೂರು ವಿವಿ ಕುಲಸಚಿವ ಪ್ರೊ.ಸಿ. ಬಸವರಾಜು ಹೇಳಿದರು.
ಮಾನಸ ಗಂಗೋತ್ರಿಯ ರೌಂಡ್ ಕ್ಯಾಂಟೀನ್ ಎದುರಿನ ಆಟದ ಮೈದಾನದಲ್ಲಿ ನಡೆದ ಮೈಸೂರು ವಿವಿ ಚಾಮುಂಡಿ ವಲಯದ ಅಂತರ ಕಾಲೇಜುಗಳ ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು.
ಇತ್ತೀಚೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಣದ ಜೊತೆಗೆ ಕ್ರೀಡಾ ಶಿಕ್ಷಣಕ್ಕೂ ಸಮಾನ ಮಹತ್ವ ನೀಡಲಾಗುತ್ತಿದೆ. ಎಲ್ಲಾ ಸ್ಪರ್ಧಾಳುಗಳು ತಮ್ಮ ಕ್ರೀಡಾ ಕೌಶಲ್ಯ, ಪ್ರತಿಭೆ ಪ್ರದರ್ಶಿಸಲು ಇಂತಹ ಕ್ರೀಡಾಕೂಟವನ್ನು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗ ನಿರಂತರವಾಗಿ ಆಯೋಜಿಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ತಮ್ಮ ಪಾಠ ಪ್ರವಚನದ ಜೊತೆಯಲ್ಲಿ ಕ್ರೀಡೆಯಲ್ಲೂ ಭಾಗವಹಿಸಲು ಹಲವು ರೀತಿಯ ಸವಲತ್ತನ್ನು ಸರ್ಕಾರ ನೀಡುತ್ತಿದೆ ಎಂದರು.
ಸರ್ಕಾರದ ಈ ಸೌಲಭ್ಯವನ್ನು ನಮ್ಮ ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಕ್ರೀಡೆಯಿಂದ ಸಿಗುವ ಆತ್ಮಸ್ಥೈರ್ಯ, ಧೈರ್ಯ ಸಾಹಸವನ್ನು ಎಲ್ಲಾ ಕ್ರೀಡಾಪಟುಗಳು ತಮ್ಮ ಪ್ರತಿಭೆ ಪ್ರದರ್ಶಿಸಿ, ಸೋಲು ಗೆಲುವನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಂಡು ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ಕೃಷ್ಣ ಮಾತನಾಡಿ, ಮಹಿಳೆಯರ ಸಬಲೀಕರಣ, ಶಿಸ್ತು ಹಾಗೂ ಆರೋಗ್ಯಯುತ ಜೀವನ ಸಾಧ್ಯ ಎಂದರು.
ಸ್ನಾತಕೋತ್ತರ ಕ್ರೀಡಾಮಂಡಳಿ ಅಧ್ಯಕ್ಷ ಪ್ರೊ.ಬಿ.ಎಸ್. ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಧ್ಯಾಪಕ ಡಾ.ಮದಿ ಅಲಗನ್ ಸ್ವಾಗತಿಸಿದರು. ಸ್ನಾತಕೋತ್ತರ ಕ್ರೀಡಾಮಂಡಳಿ ಸದಸ್ಯ ಡಾ. ಸುರ್ದಾನ್ ವಂದಿಸಿದರು. ವಾಲಿಬಾಲ್ ತರಬೇತುದಾರ ಡಾ.ಎನ್.ಬಿ. ಸುರೇಶ್ ಕಾರ್ಯಕ್ರಮ ನಿರೂಪಿಸಿದರು.