ಗಣಪತಿ ಮೆರವಣಿಗೆ ಗಲಾಟೆ; 35 ಮಂದಿ ಬಂಧನ
ನಂಜನಗೂಡು: ಗಣಪತಿ ಮೆರವಣಿಗೆ ವಿವಾದದ ಹಿನ್ನೆಲೆ ಪೊಲೀಸರು ಶನಿವಾರ ಎರಡೂ ಕೋಮಿನ ಒಟ್ಟು 35 ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಒಂದು ಕೋಮಿನ 30 ಮಂದಿಗೆ ಪೊಲೀಸರು ಜಾಮೀನು ನೀಡಿದ್ದು, ಮತ್ತೊಂದು ಕೋಮಿನ 5 ಮಂದಿ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ.
ನೀಲಕಂಠನಗರ ಬಡಾವಣೆಯ ಯುವಕರು ಗಣಪತಿ ವಿಸರ್ಜನೆಗಾಗಿ ಶುಕ್ರವಾರ ಮೆರವಣಿಗೆ ಕೊಂಡೊಯ್ಯುವಾಗ ಮತ್ತೊಂದು ಕೋಮಿನ ಗುಂಪೊಂದು ತಡೆವೊಡ್ಡಿದ ಕಾರಣ, ರಾತ್ರಿ ಇಡೀ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ದಕ್ಷಿಣ ವಲಯ ಐಜಿಪಿ ಡಾ. ರಾಮಚಂದ್ರರಾವ್ ರಾತ್ರಿ ಪಟ್ಟಣಕ್ಕೆ ಭೇಟಿ ನೀಡಿ, ಎರಡೂ ಕೋಮಿನ ನಡುವೆ ಸಾಮರಸ್ಯ ಮೂಡಿಸಲು ನಡೆಸಿದ ಪ್ರಯತ್ನ ಕೈಗೂಡಲಿಲ್ಲ.
ಮೆರವಣಿಗೆ ಅರ್ಧಕ್ಕೆ ನಿಲ್ಲಿಸಿ, ತಪ್ಪಿತಸ್ಥರನ್ನು ಬಂಧಿಸುವಂತೆ ಒತ್ತಾಯಿಸಿ, ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಕುಳಿತಿದ್ದ ನೀಲಕಂಠನಗರ ಬಡಾವಣೆಯ ಮಹಿಳೆಯರು ಮತ್ತು ಯುವಕರು, ಬೆಳಗ್ಗೆ ಮತ್ತೆ ಬಡಾವಣೆಯಲ್ಲಿ ಗಣಪತಿ ಮೆರವಣಿಗೆ ಕೊಂಡೊಯ್ದು ನಂತರ ವಿಸರ್ಜಿಸುವುದಾಗಿ ಪಟ್ಟು ಹಿಡಿದು, ಹುಲ್ಲಹಳ್ಳಿ ಸರ್ಕಲ್ ಸಮೀಪ ಚಾನಲ್ ಬಳಿ ಟ್ರ್ಯಾಕ್ಟರ್ನಲ್ಲಿ ಇರಿಸಲಾಗಿದ್ದ ಗಣೇಶನ ಪ್ರತಿಮೆಯನ್ನು ಮತ್ತೆ ವಿವಾದ ಸ್ಥಳವಾದ ನೀಲಕಂಠನಗರಕ್ಕೆ ನಡುರಾತ್ರಿ ಕೊಂಡೊಯ್ದರು.
ಪೊಲೀಸರಿಂದಲೇ ವಿಸರ್ಜನೆ: ಪರಿಸ್ಥಿತಿ ಗಂಭೀರತೆ ಅರಿತ ಪೊಲೀಸ್ ಅಧಿಕಾರಿಗಳು ಮುಂಜಾನೆ 5ರ ಸುಮಾರಿಗೆ ಗಣಪತಿ ಸಮಿತಿಯ ಹಲವರನ್ನು ವಶಕ್ಕೆ ತೆಗೆದುಕೊಂಡರಲ್ಲದೆ, ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಸಿಬ್ಬಂದಿ ನೆರವಿನೊಂದಿಗೆ ಗಣಪತಿಯ ವಿಸರ್ಜನೆ ಕಾರ್ಯವನ್ನೂ ನೆರವೇರಿಸಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದರು.
ಗಣಪತಿ ಮೆರವಣಿಗೆಗೆ ಅಡ್ಡಿಪಡಿಸಿರುವುದಲ್ಲದೆ, ಯುವಕರು ಹಾಗೂ ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ. ಮಾರಕಾಸ್ತ್ರಗಳನ್ನು ತೋರಿಸಿ ಮಹಿಳೆಯರು ಸೇರಿದಂತೆ ಬಡಾವಣೆಯ ನಿವಾಸಿಗಳಿಗೆ ಭಯದ ವಾತಾವರಣ ಉಂಟು ಮಾಡಿದ್ದಾರೆ ಎಂದು ಗಣಪತಿ ಸಮಿತಿಯವರು ನೀಡಿದ ದೂರಿನ ಹಿನ್ನೆಲೆ ಮತ್ತೊಂದು ಕೋಮಿನ 5 ಮಂದಿಯನ್ನು ಬಂಧಿಸಲಾಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿನವ್ ಖರೆ ಶನಿವಾರ ಬೆಳಗ್ಗೆ ಪಟ್ಟಣ ಠಾಣೆಗೆ ಭೇಟಿ ನೀಡಿದ ವೇಳೆ ವಿವಿಧ ಹಿಂದೂ ಸಂಘಟನೆಗಳು ಬಂಧಿತರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದರು, ಇದಕ್ಕೆ ಸ್ಪಂದಿಸಿದ ಎಸ್ಪಿ ಅವರು ವೈಯಕ್ತಿಕ ಜಾಮೀನಿನ ಮೇಲೆ 30 ಮಂದಿಯ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದರನ್ವಯ ಮೈಸೂರಿನ ಡಿಎಆರ್ ಕಚೇರಿಯಲ್ಲಿ ಇರಿಸಲಾಗಿದ್ದ ಬಂಧಿತರನ್ನು ಮಧ್ಯಾಹ್ನ ಬಿಡುಗಡೆ ಮಾಡಲಾಯಿತು. ಮತ್ತೊಂದು ಕೋಮಿನ 5 ಮಂದಿಯನ್ನು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎಚ್.ವಿ. ಶಾರದಾದೇವಿಯವರ ಮುಂದೆ ಹಾಜರುಪಡಿಸಲಾಯಿತು. ವಾದ ವಿವಾದ ಆಲಿಸಿದ ನ್ಯಾಯಾಧೀಶರು ವಾರಕ್ಕೆ ಒಮ್ಮೆ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಬೇಕೆಂಬ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆಗೆ ಆದೇಶಿಸಿದರು. ಆರೋಪಿಗಳ ಪರ ವಕೀಲ ಸುರೇಶ್ ವಾದ ಮಂಡಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್: ಶನಿವಾರ ಸಂಜೆ ಸುಮಾರು 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪಥ ಸಂಚಲನ ನಡೆಸಿ ನಾಗರಿಕರಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವ ವಿಶ್ವಾಸ ಮೂಡಿಸಿದರು. ಶನಿವಾರ ಮುಂಜಾನೆ ಬೆಳಗಿನಿಂದ ರಾತ್ರಿಯವರೆಗೆ 144ನೇ ಸೆಕ್ಷನ್ ವಿಧಿಯನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದ ಸೂಕ್ಷ್ಮ ಪ್ರದೇಶಗಳಾದ ತ್ಯಾಗರಾಜ ಕಾಲೋನಿ, ನೀಲಕಂಠನಗರ ಮುಂತಾದೆಡೆಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ನಾಲ್ವರು ಡಿವೈಎಸ್ಪಿ, ಎಂಟು ಮಂದಿ ಸಿಪಿಐಗಳು, 20 ಮಂದಿ ಪಿಎಸ್ಐಗಳು ಸುಮಾರು 250ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಕೆಎಸ್ಆರ್ಪಿ, ಡಿಎಆರ್ ತುಕಡಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.