ಗೊಂದಲದ ಗೂಡಾದ ಗ್ರಾಮಸಭೆ
ಹುಲ್ಲಹಳ್ಳಿ: ಗ್ರಾಮದ ಅಭಿವೃದ್ಧಿಯ ಕುರಿತ ಚರ್ಚೆಗಾಗಿ ಗ್ರಾಪಂ ವತಿಯಿಂದ ಕರೆಯಲಾಗಿದ್ದ ಗ್ರಾಮ ಸಭೆ ಯಾವುದೇ ನಿರ್ಣಯಗಳಿಗೂ ಬರದೆ ಪರಸ್ಪರ ಆರೋಪ, ಪ್ರತ್ಯಾರೋಪಗಳಿಂದ ಮುಕ್ತಾಯವಾಯಿತು.
ಈ ಸಭೆಗಾಗಿ ಹೋಬಳಿಯ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದು, ಸರ್ಕಾರದಿಂದ ಕಟ್ಟಕಡೆಯ ನಾಗರಿಕನಿಗೂ ದೊರೆಯುವ ಸೌಲಭ್ಯಗಳ ಕುರಿತು ವಿವರಣೆ ನೀಡಿದರು. ಇದೆ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಇವೆಲ್ಲ ಬಾಯಿಮಾತಿನ ಯೋಜನೆಗಳು, ಇದನ್ನು ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆಂದು ಆರೋಪಿಸಿದರು.
ಗ್ರಾಮವು ಕೇಂದ್ರ ಸರ್ಕಾರದ ನಿರ್ಮಲ ಗ್ರಾಮದ ಯೋಜನೆಗೆ ಆಯ್ಕೆ ಯಾಗಿದ್ದು, ಫುಟ್ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸುವ ಬಗ್ಗೆಯು ಚರ್ಚೆ ನಡೆಯಿತು. ಇದೇ ವೇಳೆ ಉಂಟಾದ ಗೊಂದಲದಿಂದಾಗಿ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿದರು. ಆದ್ದರಿಂದ ಸಭೆಯಲ್ಲಿ ಬೇರೆ ಯಾವುದೇ ಪ್ರಮುಖ ವಿಷಯ, ಸಮಸ್ಯೆಗಳು ಚರ್ಚೆಗೆ ಬರಲಿಲ್ಲ.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷೆ ಸರೋಜಾ, ಅಭಿವೃದ್ಧಿ ಅಧಿಕಾರಿ ಸಾವಿತ್ರಮ್ಮ, ಸದಸ್ಯರಾದ ಗೋಪಾಲನಾಯಕ, ವರದನಾಯಕ, ವಿಮಲಮ್ಮ, ನಾಗರಾಜು, ಶಿವಣ್ಣ, ಮರಿತಿಮ್ಮಮ್ಮ, ಚಂದ್ರಮ್ಮ ಹಾಗೂ ತಾಲೂಕು ಕೃಷಿ ಅಧಿಕಾರಿ ಕುಮಾರಸ್ವಾಮಿ, ಉಪ ತಹಸೀಲ್ದಾರ್ ಪರಶಿವಮೂರ್ತಿ, ವೈದ್ಯಾಧಿಕಾರಿ ಡಾ. ನವೀನ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.
ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶ
ಪಿರಿಯಾಪಟ್ಟಣ: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ 8 ಸಾವಿರ ಮೌಲ್ಯದ 96 ಟೆಟ್ರಾಪ್ಯಾಕ್ ಮದ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿರುವ ಘಟನೆ ಶುಕ್ರವಾರ ರಾತ್ರಿ ಜರುಗಿದೆ.
ದೊಡ್ಡಬೀದಿ ನಿವಾಸಿ ಆಟೋ ಚಾಲಕ ಮಂಜುನಾಥ್ ಬಂಧಿತ ಆರೋಪಿ. ಮಂಜುನಾಥ್ ಪಟ್ಟಣದಿಂದ ಗೋಣಿಕೊಪ್ಪ ರಸ್ತೆ ಕಡೆಗೆ ಆಟೋದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ, ಅಬಕಾರಿ ಇಲಾಖೆಯ ಅಬಕಾರಿ ಉಪ ಅಧೀಕ್ಷಕ ಜಾನ್ಮಥಾಯ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ ಮದ್ಯ ಹಾಗೂ ಸಾಗಾಣಿಕೆಗೆ ಬಳಸಲಾಗುತ್ತಿದ್ದ ಆಟೋವನ್ನು ಪಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿಗಳಾದ ಶ್ರೀನಿವಾಸಮೂರ್ತಿ, ರಮೇಶ್, ಆದಿಶೇಷ ಪಾಲ್ಗೊಂಡಿದ್ದರು.