ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಪತ್ತೆಯಾಗಿದ್ದ ಟೆಕ್ಕಿ ಆತ್ಮಹತ್ಯೆ

Srinivasa Murthy VN
Updated On : 21 Sept 2013, 11:41 am

ಮೈಸೂರು: ನಾಪತ್ತೆಯಾಗಿದ್ದ ಸಾಫ್ಟ್‌ವೇರ್ ಎಂಜಿನಿಯರ್‌ರೊಬ್ಬರು ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯನಗರ 2ನೇ ಹಂತ ನಿವಾಸಿ ನಂಜಪ್ಪ ಎಂಬವರ ಪುತ್ರ ಎನ್. ಚಂದ್ರಕಾಂತ್(33) ಆತ್ಮಹತ್ಯೆ ಮಾಡಿಕೊಂಡವರು. ಇವರು ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಎಸ್‌ಪಿಐ ಎಂಬ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಕಾರಿನಲ್ಲಿ ಹೋದ ಚಂದ್ರಕಾಂತ್ ನಾಪತ್ತೆಯಾಗಿರುವುದಾಗಿ ಪೋಷಕರು ವಿಜಯನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಶುಕ್ರವಾರ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಸಮೀಪ ಕಾರೊಂದು ರಸ್ತೆ ಬದಿಯಲ್ಲಿ 2-3 ದಿನಗಳಿಂದ ನಿಂತಿತ್ತು. ಕಾರಿನಿಂದ ಕೆಟ್ಟ ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಕಾರು ಪರಿಶೀಲಿಸಿದಾಗ ಕಾರಿನೊಳಗೆ ವ್ಯಕ್ತಿಯೊಬ್ಬರು ವಿಷ ಸೇವಿಸಿ ಮೃತಪಟ್ಟಿರುವುದು ಗೊತ್ತಾಗಿದೆ. ಪರಿಶೀಲನೆ ನಂತರ ಆತ್ಮಹತ್ಯೆ ಮಾಡಿಕೊಂಡವರು ಚಂದ್ರಕಾಂತ್ ಎಂಬುದು ಗೊತ್ತಾಗಿದೆ. ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಆಡಳಿತಾಧಿಕಾರಿ ಮೇಲೆ ಹಲ್ಲೆ; ಇಬ್ಬರ ಬಂಧನ
ಮೈಸೂರು: ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನ ಆಡಳಿತಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಹಿನಕಲ್ ನಿವಾಸಿ ಸಿದ್ದರಾಮೇಗೌಡ ಎಂಬವರ ಪುತ್ರ ಪ್ರವೀಣ್(20) ಮತ್ತು ಯಾದವಗಿರಿ ನಿವಾಸಿ ರಂಗೇಗೌಡ ಎಂಬವರ ಪುತ್ರ ಪ್ರತಾಪ್(23) ಬಂಧಿತ ಆರೋಪಿಗಳು. ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನ ಆಡಳಿತಾಧಿಕಾರಿ ಲೋಕೇಶ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಪ್ರವೀಣ್ ಹಾಗೂ ಇದಕ್ಕೆ ಸಹಕರಿಸಿದ ಪ್ರತಾಪ್‌ನನ್ನು ಶನಿವಾರ ಬೆಳಗ್ಗೆ ಹಿನಕಲ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪ್ರವೀಣ್ ಟ್ರಸ್ಟ್‌ನ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದ ಪ್ರವೀಣ್ ನಡತೆ ಸರಿಯಿಲ್ಲದ ಕಾರಣ ವರ್ಗಾವಣೆ ಪತ್ರ ನೀಡಿ ಕಳುಹಿಸಲಾಗಿತ್ತು. ಈ ದ್ವೇಷದ ಹಿನ್ನೆಲೆಯಲ್ಲಿ ಲೋಕೇಶ್ ಮೇಲೆ ಪ್ರವೀಣ್ ಹಲ್ಲೆ ನಡೆಸಿದ್ದಾನೆ.

ಮುಕ್ತ ವಿವಿಯಿಂದ ಮತ್ತೆರಡು ಅಧ್ಯಯನ ಪೀಠಗಳ ಸ್ಥಾಪನೆ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಮೈಸೂರಿನಲ್ಲಿ ಬಿ.ವಿ. ಕಾರಂತ ಹಾಗೂ ಡಾ. ರಾಮ್ ಮನೋಹರ ಲೋಹಿಯಾ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಲಾಗಿದೆ.
ಬಿ.ವಿ. ಕಾರಂತರ ಅಧ್ಯಯನ ಪೀಠದ ನಿರ್ದೇಶಕರಾಗಿ ರಂಗತಜ್ಞ ಸಿ. ಬಸವಲಿಂಗಯ್ಯ ಹಾಗೂ ಡಾ. ರಾಮ್ ಮನೋಹರ ಲೋಹಿಯಾ ಅಧ್ಯಯನ ಪೀಠದ ನಿರ್ದೇಶಕರಾಗಿ ಇತಿಹಾಸ ಪ್ರಾಧ್ಯಾಪಕ ಡಾ. ಪೃಥ್ವಿದತ್ತ ಚಂದ್ರ ಶೋಭಿ ನೇಮಕವಾಗಿದ್ದಾರೆ. ಈಗಾಗಲೇ ಏಳು ಅಧ್ಯಯನ ಪೀಠಗಳು ಕಾರ್ಯನಿರ್ವಹಿಸುತ್ತಿದ್ದು, ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಅವರು ಹೊಸದಾಗಿ ಯೋಜಿಸಿರುವ ಕಾರ್ಯಕ್ರಮ ಇದಾಗಿದೆ.
ಬಿ.ವಿ. ಕಾರಂತ ಪೀಠ: ಹಿರಿಯ ರಂಗಕರ್ಮಿ, ರಂಗಾಯಣ ಸಂಸ್ಥಾಪಕರಾದ ಬಿ.ವಿ. ಕಾರಂತರ ಹೆಸರಿನಲ್ಲಿ ಸ್ಥಾಪಿಸಿರುವ ಪೀಠವು ರಂಗಭೂಮಿ ಮತ್ತು ಪ್ರದರ್ಶನ ಕಲೆಗಳ ಅಧ್ಯಯನವನ್ನು ಕೈಗೊಳ್ಳಲಿದೆ. ಪೀಠದ ಗೌರವ ನಿರ್ದೇಶಕ ಸಿ. ಬಸವಲಿಂಗಯ್ಯ ಅವರು ಭಾರತೀಯ ರಂಗಭೂಮಿಯಲ್ಲಿ ಕಳೆದರೆಡು ದಶಕಗಳಿಂದ ತಮ್ಮ ಮಹತ್ವಾಕಾಂಕ್ಷೆಯ ಮತ್ತು ಕ್ರಿಯಾಶೀಲ ಪ್ರಯೋಗಗಳಿಗೆ ಹೆಸರಾದವರು. ಗಾಂಧಿ ವರ್ಸಸ್ ಗಾಂಧಿ, ಶೂದ್ರ ತಪಸ್ವಿ, ಸ್ಮಶಾನ ಕುರುಕ್ಷೇತ್ರ ಮತ್ತು ವಿಶೇಷವಾಗಿ ಮಲೆಗಳಲ್ಲಿ ಮದುಮಗಳು ನಾಟಕ ನಿರ್ದೇಶಿಸಿ ಛಾಪು ಮೂಡಿಸಿದ್ದಾರೆ.
ಲೋಹಿಯಾ ಪೀಠ: ಈ ಪೀಠ ಲೋಹಿಯಾ ಬೌದ್ಧಿಕ ಚಿಂತನೆಯ ಎರಡು ಸೆಳೆಗಳಾದ ಸಮಾಜವಾದಿ ದರ್ಶನ ಮತ್ತು ಭಾರತೀಯ ಸಮಾಜದ ಅಧ್ಯಯನಗಳನ್ನು ಕೈಗೊಳ್ಳಲಿದೆ. ಪೀಠದ ಗೌರವ ನಿರ್ದೇಶಕ ಡಾ. ಪೃಥ್ವಿದತ್ತ ಚಂದ್ರ ಶೋಭಿ ಆಧುನಿಕ ಪೂರ್ವ ಭಾರತದ ಸಾಮಾಜಿಕ ಇತಿಹಾಸ, ಪ್ರತಿಭಟನೆಯ ಸಂಸ್ಕೃತಿಗಳ ಇತಿಹಾಸ ಮತ್ತು ಆಧುನಿಕ ಸಾಮಾಜಿಕ ಚಳವಳಿಗಳ ಅಧ್ಯಯನಗಳಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement