ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಾದಚಾರಿಗಳಿಗೆ ಸಬ್‌ವೇ ನಿರ್ಮಾಣಕ್ಕೆ ಒತ್ತಾಯ

Srinivasa Murthy VN
Updated On : 21 Sept 2013, 11:41 am

ಮೈಸೂರು: ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರು ಹಾಗೂ ಪಾದಚಾರಿಗಳು ಸುಲಭವಾಗಿ ರಸ್ತೆ ದಾಟಲು ಅನುವಾಗುವಂತೆ ಸಬ್‌ವೇಗಳನ್ನು ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.
ದೇವರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆದ ಕುಂದುಕೊರತೆ ಸಭೆಯಲ್ಲಿ ಈ ಆಗ್ರಹ ಕೇಳಿಬಂತು. ನಗರ ಪಾಲಿಕೆ ಮಾಜಿ ಸದಸ್ಯ ಬಿ. ಶ್ಯಾಮ್‌ಸುಂದರ್ ಮಾತನಾಡಿ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಅರಮನೆ ಬಳಿ, ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣ ಮೊದಲಾದೆಡೆ ಸಬ್‌ವೇ ನಿರ್ಮಿಸುವ ಮೂಲಕ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಚೆನ್ನೈಯಲ್ಲಿ ಇರುವ ಹಾಗೆ ಆಟೋಗಳಿಗೆ ಜಿಪಿಆರ್‌ಎಸ್ ಅಳವಡಿಸಬೇಕು. ಇದರಿಂದ ಪ್ರಯಾಣಿಕರಿಗೆ ಆಗುವ ಅನಗತ್ಯ ತೊಂದರೆ ತಪ್ಪಿಸಬಹುದು ಎಂದು ಉಮರ್ ಫಾರೂಕ್ ಮೆಕ್ರಿ ಸಲಹೆ ನೀಡಿದರು.
ಸಿದ್ದಾರ್ಥನಗರ ವಿನಯ ಮಾರ್ಗದಲ್ಲಿ ವಾಹನ ನಿಲುಗಡೆ ಸರಿಪಡಿಸಬೇಕು. ಮೈಸೂರು ರೇಸ್ ಕ್ಲಬ್ ಬಳಿಯ ವೃತ್ತವನ್ನು ವಿಸ್ತರಿಸಬೇಕು. ಸಾರ್ವಜನಿಕರ ಕುಂದುಕೊರತೆ ಸಭೆಗೆ ನಗರ ಪಾಲಿಕೆಯ ಅಧಿಕಾರಿಗಳು ಸಹ ಬರಬೇಕು ಎಂದು ಕೆಲವರು ಆಗ್ರಹಿಸಿದರು. ದೇವರಾಜ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಶಾಂತಮಲ್ಲಪ್ಪ, ಎಸ್‌ಐಗಳಾದ ಸುರೇಶ್‌ಕುಮಾರ್, ಅಶೋಕ್, ನಗರಪಾಲಿಕೆ ಸದಸ್ಯ ಎಂ.ಜೆ. ರವಿಕುಮಾರ್, ವಿಶೇಷ ಪೊಲೀಸ್ ಅಧಿಕಾರಿ ಶ್ರೀನಿವಾಸ್ ಗಾಂಧಿ, ಮಾಜಿ ಉಪ ಮೇಯರ್ ಪುಷ್ಪವಲ್ಲಿ, ಹಿರಿಯ ನಾಗರಿಕ ರಾಮಚಂದ್ರರಾವ್ ಇದ್ದರು.
ರಸ್ತೆ ಬದಿ ವ್ಯಾಪಾರದಿಂದ ಕಿರಿಕಿರಿ: ಕೃಷ್ಣರಾಜ ಸಂಚಾರ ಠಾಣೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನಂಜುಮಳಿಗೆ, ಸಿದ್ದಪ್ಪ ಚೌಕ್, ಅಗ್ರಹಾರ ವೃತ್ತ ಇತರೆಡೆ ರಸ್ತೆ ಬದಿ ವ್ಯಾಪಾರದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಪಾದಚಾರಿಗಳು ಹೋಗುವಷ್ಟು ಸ್ಥಳಾವಕಾಶ ಮಾಡಿಕೊಡಬೇಕು ಎಂದು ಕೆಲವರು ಒತ್ತಾಯಿಸಿದರು.
ಅಶೋಕ ವೃತ್ತದ ಬಳಿ ಬಸ್ ನಿಲ್ದಾಣ ಸರಿಪಡಿಸಬೇಕು. ಹೆಲ್ಮೆಟ್ ಧರಿಸದವರು, ವಾಹನ ಚಾಲನೆ ವೇಳೆ ಮೊಬೈಲ್ ಮಾತು, ಸಿಗ್ನಲ್ ಜಂಪ್ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಲಾ- ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ದ್ವಿಚಕ್ರ ವಾಹನ ಬಳಸುತ್ತಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು. ಕೆ.ಆರ್. ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಮಹೇಶ್‌ಕುಮಾರ್, ಎಸ್‌ಐಗಳಾದ ಸತೀಶ್, ಜಯಪ್ರಕಾಶ್ ಇದ್ದರು.
ಜಂಕ್ಷನ್‌ಗಳಲ್ಲಿ ಸಿಬ್ಬಂದಿ ಬೇಕು: ಮೇಟಗಳ್ಳಿ, ಕಾಳಿದಾಸ ರಸ್ತೆ ಸೇರಿದಂತೆ ವಿವಿಧ ಜಂಕ್ಷನ್‌ಗಳಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸುವಂತೆ ವಿವಿ ಪುರಂ ಸಂಚಾರ ಠಾಣೆಯಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಹಿರಿಯ ನಾಗರಿಕರು ಕೋರಿದರು.
ಕಾಳಿದಾಸ ರಸ್ತೆಯಲ್ಲಿ ಪಾದಚಾರಿಗಳು ದಾಟಲು ಅಲ್ಲಲ್ಲಿ ಝಿಬ್ರಾ ಕ್ರಾಸ್ ಹಾಕಿಸಬೇಕು. ಕೆಲವು ಸಿಗ್ನಲ್ ಲೈಟ್‌ಗಳು ಆನ್ ಮಾಡುತ್ತಿಲ್ಲ ಎಂದು ದೂರಿದರು. ತಾಂತ್ರಿಕ ದೋಷದಿಂದ ಸಿಗ್ನಲ್ ಆನ್ ಮಾಡಿರಲಿಲ್ಲ. ಸರಿಪಡಿಸಿ ಸಿಗ್ನಲ್ ಆನ್ ಮಾಡಿಸಲಾಗುವುದು ಎಂದು ನಗರ ಸಂಚಾರ ಉಪ ವಿಭಾಗದ ಪ್ರಭಾರ ಎಸಿಪಿ ಪ್ರಭಾಕರ್ ಬಾರ್ಕಿ ತಿಳಿಸಿದರು.
ಎನ್.ಆರ್. ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ಅರುಣ್ ನಾಗೇಗೌಡ, ಎಸ್‌ಐಗಳಾದ ಡಿ. ಯೋಗೇಶ್, ಶಿವಕುಮಾರ್ ಇದ್ದರು.

ವಾರಸುದಾರರ ಪತ್ತೆಗೆ ಮನವಿ
ಮೈಸೂರು: ಇತ್ತೀಚೆಗೆ(ಗಣಪತಿ ಹಬ್ಬದಂದು) ಗಾಂಧಿ ಚೌಕದಲ್ಲಿ ಮಿನಿ ಗೂಡ್ಸ್ ವಾಹನ ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದು, ಅವರ ವಿಳಾಸ ಮತ್ತು ವಾರಸುದಾರರು ಪತ್ತೆಯಾಗಿಲ್ಲ.
ಜಗದೀಶ(40) ಮತ್ತು ಸುರೇಶ(40) ಎಂಬವರು ಮೃತಪಟ್ಟವರು ಎಂದು ತಿಳಿದು ಬಂದಿದೆ. ಆದರೆ, ಇವರ ವಾರಸುದಾರರು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಜಗದೀಶ ಚಹರೆ- 5.7 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ನೀಲಿ ಟೀ- ಶರ್ಟ್, ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಬಲಗೈಯಲ್ಲಿ ಎಂಕೆಆರ್‌ಎಂಪಿ ಎಂಬ ಹಚ್ಚೆ ಇದೆ.
ಸುರೇಶ ಚಹರೆ- 5.7 ಅಡಿ ಎತ್ತರ, ಕೋಲು ಮುಖ, ಎಣ್ಣಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಬಿಸ್ಕೆಟ್ ಟೀ- ಶರ್ಟ್, ಬೂದು ಪ್ಯಾಂಟ್ ಧರಿಸಿದ್ದಾರೆ. ಎಡಗೈಯಲ್ಲಿ ಸುಜಾತ ಎಂಬ ಹಚ್ಚೆ ಇದೆ. ಎಡಗಾಲಿನ ಮಂಡಿಯಲ್ಲಿ ಹಳೆಯ ಗಾಯದ ಗುರುತಿದೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418126, 326 ಸಂಪರ್ಕಿಸಲು ದೇವರಾಜ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಶಾಂತಮಲ್ಲಪ್ಪ ಕೋರಿದ್ದಾರೆ.

ಅಪರಿಚಿತ ವೃದ್ಧ ಸಾವು
ಮೈಸೂರು: ಅಸ್ವಸ್ಥಗೊಂಡು ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. ಚಹರೆ- 70 ವರ್ಷ, 5.4 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಸಿಮೆಂಟ್ ಬಣ್ಣ ಪ್ಯಾಂಟ್, ಕಪ್ಪು ಬಿಳಿ ಗೆರೆಗಳಿರುವ ಶರ್ಟ್ ಧರಿಸಿದ್ದಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 2418306 ಸಂಪರ್ಕಿಸಲು ದೇವರಾಜ ಠಾಣೆ ಪೊಲೀಸರು ಕೋರಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement